ADVERTISEMENT

ರಾಣೆಬೆನ್ನೂರು | ದೇವರಗುಡ್ಡ ದೇವಸ್ಥಾನ: ಠಾಣೆ ಮೆಟ್ಟಿಲೇರಿದ ಸಮಿತಿ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2026, 7:23 IST
Last Updated 18 ಫೆಬ್ರುವರಿ 2026, 7:23 IST
ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ದೇವರಗುಡ್ಡದ ಮಾಲತೇಶ ದೇವಸ್ಥಾನ
ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ದೇವರಗುಡ್ಡದ ಮಾಲತೇಶ ದೇವಸ್ಥಾನ   

ಹಾವೇರಿ: ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ದೇವರಗುಡ್ಡ ಮಾಲತೇಶ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ (ಪ್ರಭಾರಿ) ನೇಮಕ ವಿಚಾರ ಪೊಲೀಸ್ ಠಾಣೆ ಮೆಟ್ಟಿಲೇರಿದೆ.

25 ವರ್ಷಗಳಿಂದ ಆಡಳಿತ ನಡೆಸುತ್ತಿದ್ದ ಸಮಿತಿಯ ಬದಲಾವಣೆ ಬಗ್ಗೆ ಸುದ್ದಿಯಾಗಿದ್ದ ದೇವಸ್ಥಾನಕ್ಕೆ ಈಗ ಹೊಸ ಸಮಿತಿ ರಚನೆಯಾಗಿದೆ. ಆದರೆ, ಕಾರ್ಯನಿರ್ವಾಹಕ ಅಧಿಕಾರಿಯ ಅಧಿಕಾರದ ವಿಚಾರವಾಗಿ ಈಗ ಜಟಾಪಟಿ ಶುರುವಾಗಿದೆ.

‘ಕ್ಲರ್ಕ್ ಆಗಿ ದೇವಸ್ಥಾನದಲ್ಲಿ ಕೆಲಸ ಮಾಡುತ್ತ ಅಧಿಕಾರಿಯಾಗಿದ್ದ ಶೇಖಣ್ಣ, ಇತ್ತೀಚಿನ ದಿನಗಳಲ್ಲಿ ಸರಿಯಾಗಿ ಕೆಲಸ ಮಾಡುತ್ತಿಲ್ಲ. ವಯಸ್ಸು 60 ದಾಟಿದೆ’ ಎಂದು ಆರೋಪಿಸಿ ಸಮಿತಿಯ ಸದಸ್ಯರು, ದೇವಸ್ಥಾನದ ಆಡಳಿತ ಅಧಿಕಾರಿಯೂ ಆಗಿರುವ ಧಾರವಾಡ ಜಿಲ್ಲಾ ನ್ಯಾಯಾಲಯದ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಿಗೆ ಮನವಿ ಸಲ್ಲಿಸಿದ್ದರು.

ADVERTISEMENT

ಮನವಿ ಪರಿಶೀಲಿಸಿದ್ದ ನ್ಯಾಯಾಧೀಶರು, ಪ್ರಭಾರಿ ಅಧಿಕಾರಿಗೆ ವಯೋನಿವೃತ್ತಿ ನೀಡಿದ್ದಾರೆ. ಅವರ ಜಾಗಕ್ಕೆ ದೇವಸ್ಥಾನದ ಸ್ಥಳೀಯ ಸಮಿತಿಯ ಚೇರ್ಮನ್ ಅವರನ್ನು ಪ್ರಭಾರಿಯಾಗಿ ನೇಮಿಸಿದ್ದಾರೆ. ಅದರಂತೆ, ತಹಶೀಲ್ದಾರ್ ನೇತೃತ್ವದಲ್ಲಿ ಚೇರ್ಮನ್‌ ಅವರು ಅಧಿಕಾರ ಸ್ವೀಕರಿಸಿದ್ದಾರೆ.

ನ್ಯಾಯಾಧೀಶರ ಆದೇಶವನ್ನು ಪ್ರಶ್ನಿಸಿರುವ ಶೇಖಣ್ಣ, ಹೈಕೋರ್ಟ್‌ನಲ್ಲಿ ಮೊಕದ್ದಮೆ ದಾಖಲಿಸಿ ತಡೆಯಾಜ್ಞೆ ತಂದಿದ್ದಾರೆ.  ಇದರ ನಡುವೆಯೇ ಸಮಿತಿಯ ಪದಾಧಿಕಾರಿಗಳು, ಶೇಖಣ್ಣ ಅವರ ವಿರುದ್ಧ ರಾಣೆಬೆನ್ನೂರು ಗ್ರಾಮೀಣ ಠಾಣೆ ಮೆಟ್ಟಿಲೇರಿದ್ದಾರೆ.

‘ಚೇರ್ಮನ್ ಅವರು ಪ್ರಭಾವಿ ಅಧಿಕಾರ ವಹಿಸಿಕೊಂಡಿದ್ದಾರೆ. ಇಂಥ ಸಂದರ್ಭದಲ್ಲಿಯೇ ಮಂಗಳವಾರ ದಿಢೀರ್ ದೇವಸ್ಥಾನದ ಕಚೇರಿಗೆ ಬಂದಿದ್ದ ಶೇಖಣ್ಣ, ಕೆಲ ದಾಖಲೆಗಳು ಹಾಗೂ ಇತರೆ ವಸ್ತುಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿರುವ ಪದಾಧಿಕಾರಿಗಳು, ಪೊಲೀಸರಿಗೆ ಮನವಿ ಸಲ್ಲಿಸಿದ್ದಾರೆ. ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಹೇಳಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ದೇವಸ್ಥಾನದ ಸಮಿತಿಯ ಅಧ್ಯಕ್ಷ ಗವಿಸಿದ್ದಪ್ಪ ದ್ಯಾಮಣ್ಣವರ, ‘ಕಾರ್ಯನಿರ್ವಾಹಕ ಅಧಿಕಾರಿ (ಪ್ರಭಾರಿ) ವಿಚಾರ ನ್ಯಾಯಾಲಯದಲ್ಲಿದೆ. ಅದರ ನಡುವೆಯೇ ಅವರು, ದೇವಸ್ಥಾನದ ಕಚೇರಿಗೆ ಮಂಗಳವಾರ ಬಂದು ಕೆಲ ವಸ್ತುಗಳನ್ನು ಕೊಂಡೊಯ್ದಿರುವುದಾಗಿ ಸ್ಥಳೀಯ ಸಮಿತಿಯವರು ಹೇಳುತ್ತಿದ್ದಾರೆ. ಅವರೇ ದೂರು ನೀಡಲು ರಾಣೆಬೆನ್ನೂರು ಠಾಣೆಗೆ ಹೋಗಿದ್ದಾರೆ. ಬುಧವಾರ ವಿಚಾರಣೆಯಿದ್ದು, ನ್ಯಾಯಾಲಯದ ಆದೇಶ ಪಾಲಿಸಲಾಗುವುದು’ ಎಂದರು.

ಪ್ರತಿಕ್ರಿಯೆ ಪಡೆಯಲು ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದ (ಪ್ರಭಾರಿ) ಶೇಖಣ್ಣ ಅವರು ಲಭ್ಯರಾಗಲಿಲ್ಲ.