
ರಾಣೆಬೆನ್ನೂರು: ಹೊರ ರಾಜ್ಯಗಳಲ್ಲಿ ಇರುವಂತೆ ನಮ್ಮ ರಾಜ್ಯದಲ್ಲೂ ಪತ್ರ ಬರಹಗಾರರಿಗೆ ಪತ್ರ್ಯೇಕ ಲಾಗಿನ್ ಕೊಡಬೇಕು. ನೋಂದಣಿ ಆಗುವ ಎಲ್ಲಾ ದಸ್ತಾವೇಜುಗಳಿಗೆ ಕಡ್ಡಾಯವಾಗಿ ಪತ್ರ ಬರಹಗಾರರ ಬಿಕ್ಕಲಂ ಕಡ್ಡಾಯಗೊಳಿಸಬೇಕು. ದಸ್ತು ಬರಹಗಾರರ ಸೇವಾ ಶುಲ್ಕ ಹೆಚ್ಚಳ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ನಗರದ ಮಿನಿ ವಿಧಾನಸೌಧದ ಎದುರುಗಡೆ ಕರ್ನಾಟಕ ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಿಂದ ಪರವಾನಗಿ ಪಡೆದ (ದಸ್ತು)ಪತ್ರ ಬರಹಗಾರರ ಒಕ್ಕೂಟದ ತಾಲ್ಲೂಕು ಘಟಕದ ಪತ್ರ ಬರಹಗಾರರ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಗುರುವಾರ ಅನಿರ್ದಿಷ್ಟಾವಧಿ ಮುಷ್ಕರ ನಡೆಸಿದರು.
ಒಕ್ಕೂಟದ ರಾಜ್ಯ ಘಟಕದ ಉಪಾಧ್ಯಕ್ಷ ಬಸವರಾಜ ಲಕ್ಷ್ಮೇಶ್ವರ ಮಾತನಾಡಿ, ‘ಉಪನೋಂದಣಿ ಕಚೇರಿಗಳಲ್ಲಿ ಅನಧಕೃತ ವ್ಯಕ್ತಿಗಳು (ಏಜಂಟರು) ಬರುವುದನ್ನು ತಡೆಗಟ್ಟುವುದು ಮತ್ತು ಎಲ್ಲ ಅಧಿಕೃತ ಬರಹಗಾರರಿಗೆ ಗುರುತಿನ ಚೀಟಿ ನೀಡಬೇಕು. ಕಾವೇರಿ 2.0 ತಂತ್ರಾಂಶಗಳಲ್ಲಿನ ನ್ಯೂನತೆಗಳನ್ನು ಸರಿಪಡಿಸಬೇಕೆಂದು ಆಗ್ರಹಿಸಿ ಶಾಂತಿಯುತ ಮುಷ್ಕರ ಹಮ್ಮಿಕೊಂಡಿದ್ದೇವೆ’ ಎಂದರು.
‘ರಾಜ್ಯ ಸರ್ಕಾರ ಡಿಜಲೀಕರಣದ ಹೆಸರಿನಲ್ಲಿ ಕಾವೇರಿ 1.0, ಕಾವೇರಿ 2.0 ತಂತ್ರಾಂಶಗಳನ್ನು ಜಾರಿಗೆ ತಂದಿದೆ. ಮುಂದುವರೆದು ಈಗ 3.0 ತಂತ್ರಾಂಶ ಬರುತ್ತಿದೆ. ಇದರಿಂದ ಪತ್ರ ಬರಗಾರರಿಗೆ ಫೇಸ್‌ಲೆಸ್ ಮತ್ತು ಪೇಪರ್‌ಲೆಸ್ ನೋಂದಣಿಗೆ ಮುಂದಾಗಿದೆ. ಇದರಿಂದ ಪತ್ರ ಬರಹಗಾರರಿಗೆ ಕೆಲಸವಿಲ್ಲದಂತಾಗಿದೆ. ಪತ್ರ ಬರಹಗಾರ ಹುದ್ದೆಯಿಂದ ತಟಸ್ಥ ಮಾಡಿದಂತಾಗಿದೆ. ಇದೇ ವೃತ್ತಿಯನ್ನು ಅವಲಂಬಿಸಿಕೊಂಡು ಬಂದಿರುವ ನಮ್ಮ ಕುಟುಂಬದ ಗತಿ ಏನು’ ಎಂದು ಪ್ರಶ್ನಿಸಿದರು.
‘ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಸೇರಿದಂತೆ ಸಚಿವರು, ಶಾಸಕರಿಗೆ ಮತ್ತು ಹಿರಿಯ ಅಧಿಕಾರಿಗಳಿಗೆ ಕಳೆದ ಒಂದು ವರ್ಷದಿಂದ ಒಕ್ಕೂಟಿಂದ ಮೂರು ಬಾರಿ ಖುದ್ದಾಗಿ ಮನವಿ ಮಾಡಿದ್ದೇವೆ. ಇದುವರೆಗೂ ಕ್ರಮಕೈಗೊಂಡಿಲ್ಲ’ ಎಂದು ದೂರಿದರು.
ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಹನುಮಂತಪ್ಪ ಕಬ್ಬಾರ ಹಾಗೂ ಪದಾಧಿಕಾರಿಗಳು ಪತ್ರ ಬರಹಗಾರರ ಸಂಘದ ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿ ಮಾತನಾಡಿದರು.
ರಮೇಶ ಕುಲಕರ್ಣಿ, ಗೋಪಾಲಕೃಷ್ಣ ಲಕ್ಷ್ಮೇಶ್ವರ, ಹರಿಬಲ್, ಕೊಟ್ರೇಶ ಮೂಲಿಮಠ, ವಾದಿರಾಜ ಉಡುಪಿ, ಶ್ರೀನಿವಾಸ ಖಂಡೆ, ವಿನಾಯಕ ಲಕ್ಷ್ಮೇಶ್ವರ, ಗದಿಗೆಪ್ಪ, ರಾಮಣ್ಣ ಮುದ್ರಿ, ಶೈಲಜಾ ಹಿರೇಮಠ, ವಿಜಯಲಕ್ಷ್ಮೀ ತೋಟಗಂಟಿ, ಸಂಜೀವ ಲಕ್ಷ್ಮೇಶ್ವರ ಹಾಗೂ ಸದಸ್ಯರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.