ADVERTISEMENT

ರಾಣೆಬೆನ್ನೂರಿನಲ್ಲಿ ಹೊಸ ಬಸ್ ನಿಲ್ದಾಣ: ಸಚಿವ ರಾಮಲಿಂಗಾರೆಡ್ಡಿ ಭರವಸೆ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2025, 4:11 IST
Last Updated 13 ಡಿಸೆಂಬರ್ 2025, 4:11 IST
ರಾಣೆಬೆನ್ನೂರಿನ ಹುಣಸೀಕಟ್ಟಿ ರಸ್ತೆಯಲ್ಲಿ ನಿರ್ಮಿಸಿರುವ ಚಾಲನಾ ಪಥವನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಶುಕ್ರವಾರ ಉದ್ಘಾಟಿಸಿದರು
ರಾಣೆಬೆನ್ನೂರಿನ ಹುಣಸೀಕಟ್ಟಿ ರಸ್ತೆಯಲ್ಲಿ ನಿರ್ಮಿಸಿರುವ ಚಾಲನಾ ಪಥವನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಶುಕ್ರವಾರ ಉದ್ಘಾಟಿಸಿದರು   

ರಾಣೆಬೆನ್ನೂರು: ‘ನಗರದಲ್ಲಿ ಹೊಸ ಬಸ್‌ ನಿಲ್ದಾಣ ನಿರ್ಮಿಸುವಂತೆ ಶಾಸಕ ಪ್ರಕಾಶ ಕೋಳಿವಾಡ ಮನವಿ ಮಾಡಿದ್ದಾರೆ. ಸೂಕ್ತ ಜಾಗ ಗುರುತಿಸಿ ಪ್ರಸ್ತಾವ ಸಿದ್ಧಪಡಿಸಿಕೊಂಡು ಬಂದರೆ, ಬಸ್ ನಿಲ್ದಾಣ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು’ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಭರವಸೆ ನೀಡಿದರು.

ನಗರದಲ್ಲಿ ಹುಣಸೀಕಟ್ಟಿ ರಸ್ತೆಯಲ್ಲಿ 4 ಎಕರೆ 33 ಗುಂಟೆ ಜಾಗದಲ್ಲಿ ₹ 10.5 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ (ಎಆರ್‌ಟಿಒ) ಕಚೇರಿ ಕಟ್ಟಡ ಮತ್ತು ಚಾಲನಾ ಪಥವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಎಪಿಎಂಸಿ ಬಳಿ ಜಾಗ ಗುರುತಿಸಿರುವುದಾಗಿ ಶಾಸಕ ಹೇಳಿದ್ದಾರೆ. ಎಲೆಕ್ಟ್ರಿಕ್ ಬಸ್‌ಗಳು ಆಯ್ದ ನಗರಕ್ಕೆ ಮಾತ್ರ ಸೀಮಿತವಾಗಿದ್ದು, ರಾಣೆಬೆನ್ನೂರಿಗೆ ಎಲೆಕ್ಟ್ರಿಕ್‌ ಬಸ್‌ ನೀಡುವಂತೆ ಕೋರಿದ್ದಾರೆ. ಎಲೆಕ್ಟ್ರಿಕ್ ಬಸ್‌ ಓಡಿಸುವ ಬಗ್ಗೆಯೂ ಕ್ರಮ ಕೈಗೊಳ್ಳುತ್ತೇನೆ’ ಎಂದರು.

ADVERTISEMENT

ಅಧ್ಯಕ್ಷತೆ ವಹಿಸಿದ್ದ ಶಾಸಕ ಪ್ರಕಾಶ ಕೋಳಿವಾಡ ಮಾತನಾಡಿ, ‘50 ವರ್ಷಗಳಿಂದ ಚಿಕ್ಕ ಜಾಗದಲ್ಲಿ ಬಸ್‌ ನಿಲ್ದಾಣವಿದೆ. ತಾಲ್ಲೂಕಿನ ವಿಸ್ತೀರ್ಣ ದೊಡ್ಡದಿರುವುದರಿಂದ ಇನ್ನಷ್ಟು ಬಸ್‌ಗಳ ಅಗತ್ಯವಿದ್ದು, ಅವುಗಳ ನಿಲುಗಡೆಗೆ ನಿಲ್ದಾಣದ ಅಗತ್ಯವಿದೆ’ ಎಂದರು. 

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವೀರೇಶ ಮೋಟಗಿ, ಹಾವೇರಿ ಹಾಲು ಒಕ್ಕೂಟದ ಅಧ್ಯಕ್ಷ ಮಂಜನಗೌಡ ಪಾಟೀಲ, ಸಾರಿಗೆ ಇಲಾಖೆಯ ಧಾರವಾಡ ಉತ್ತರದ ಹೆಚ್ಚುವರಿ ಆಯುಕ್ತ ಕೆ.ಬಿ.ಹಾಲಸ್ವಾಮಿ, ಬೆಳಗಾವಿ ವಿಭಾಗದ ಜಂಟಿ ಆಯುಕ್ತ ಸಿದ್ದಪ್ಪ ಕಲ್ಲೇರ, ಪ್ರಾದೇಶಿಕ ಸಾರಿಗೆ ಅಧಿಕಾರಿ ವಿನಯಾ ಕಾಟೋಕರ್‌, ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಸುಬ್ರಾಯ ಶಂಭು ಹೆಗಡೆ, ನಗರಸಭೆ ಪೌರಾಯುಕ್ತ ಎಫ್‌.ವೈ. ಇಂಗಳಗಿ ಇದ್ದರು.

‘ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿ’
‘ಚಾಲನಾ ಪರವಾನಗಿ ನೀಡುವ ಸಂದರ್ಭದಲ್ಲಿ ಜನರಿಗೆ ಅಗತ್ಯ ತರಬೇತಿ ನೀಡುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ. ಚಾಲನಾ ಪರವಾನಗಿ ನೀಡುವಾಗ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿದರೆ ಅಪಘಾತ ಪ್ರಮಾಣ ಕಡಿಮೆಯಾಗಲಿವೆ’ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.