
ರಾಣೆಬೆನ್ನೂರು: ‘ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಣಕ್ಕೂ ನಾನು ಸೇರಿಲ್ಲ. ಪಕ್ಷದ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಬಣದಲ್ಲೂ ಇಲ್ಲ. ನನ್ನದು ಪಕ್ಕಾ ಕಾಂಗ್ರೆಸ್ ಬಣ’ ಎಂದು ಶಾಸಕ ಪ್ರಕಾಶ ಕೋಳಿವಾಡ ಸ್ಪಷ್ಟಪಡಿಸಿದರು.
ಇಲ್ಲಿನ ವಾಗೀಶನಗರದ ತಮ್ಮ ಗೃಹ ಕಚೇರಿಯಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಬೇಕೆಂದು ನಾನು ದೆಹಲಿಗೆ ತೆರಳಿ ಹೈಕಮಾಂಡ್ ಬಳಿ ಒತ್ತಾಯಿಸಿದ್ದೇನೆಂದು ಕೆಲ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರಗೊಂಡಿದ್ದು, ಇದು ಸತ್ಯಕ್ಕೆ ದೂರವಾದ ಮಾಹಿತಿ’ ಎಂದು ಸ್ಪಷ್ಟಪಡಿಸಿದರು.
‘ನಾನು ಅಂದು ದೆಹಲಿಗೆ ಹೋಗಿಲ್ಲ. ಬೆಂಗಳೂರಿನಲ್ಲಿಯೇ ಕಾರ್ಮಿಕ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಇದ್ದೆ. ಮುಖ್ಯಮಂತ್ರಿ ಆಗಿ ಸಿದ್ದರಾಮಯ್ಯನವರು ಉತ್ತಮ ಕಾರ್ಯಗಳನ್ನು ಮಾಡುತ್ತಿದ್ದಾರೆ. ಜೊತೆಗೆ ಪಕ್ಷದ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಪಕ್ಷವನ್ನು ಸಂಘಟನೆಯತ್ತ ಮುನ್ನಡೆಸಿದ್ದಾರೆ’ ಎಂದರು.
‘ಮುಖ್ಯಮಂತ್ರಿ ಬದಲಾವಣೆ ಮಾಡುವುದು ಹೈಕಮಾಂಡಿಗೆ ಬಿಟ್ಟ ವಿಚಾರ. ಇದರಲ್ಲಿ ಶಾಸಕರ ಒತ್ತಾಯವಾಗಲಿ, ಪ್ರಭಾವವಾಗಲಿ ಇರುವುದಿಲ್ಲ’ ಎಂದರು.
‘ಮಾಜಿ ಶಾಸಕ ಅರುಣಕುಮಾರ ಪೂಜಾರ ಅವರು ನನ್ನ ಹಾಗೂ ಪಕ್ಷದ ಬಗ್ಗೆ ಮಾತನಾಡಿರುವುದು ನೋವು ಉಂಟುಮಾಡಿದೆ. ಕಾಂಗ್ರೆಸ್ ಬಗ್ಗೆ ಮಾತನಾಡುವ ನೈತಿಕತೆ ಅವರಲ್ಲಿಲ್ಲ. ಕಾಂಗ್ರೆಸ್ಸಿನ ಆಂತರಿಕ ವಿಚಾರ ಅವರಿಗೆ ಸಂಬಂಧಿಸಿದ್ದಲ್ಲ. ಮಾಜಿ ಶಾಸಕರು ಕ್ಷುಲ್ಲಕ ರಾಜಕಾರಣ ಮಾಡುತ್ತಿದ್ದಾರೆ. ಅವರು ನನಗಿಂತ ಕಿರಿಯರು, ಬಿಜೆಪಿಯ ಹಿರಿಯರ ಸಲಹೆ ಸೂಚನೆ ಪಡೆದು ಮಾಧ್ಯಮದ ಎದುರು ಮಾತನಾಡಬೇಕು. ನಾನು ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾತ್ರ ಮಾತನಾಡುವೆ’ ಎಂದರು.
‘ಕೃಷಿ, ಶಿಕ್ಷಣ, ಆರೋಗ್ಯ ಕ್ರಾಂತಿ ಕ್ಷೇತ್ರದಲ್ಲಿ ನಡೆಯುತ್ತಿದ್ದು, ಸಾಧ್ಯವಾದರೆ ಆಡಳಿತ ಪಕ್ಷದೊಂದಿಗೆ ವಿರೋಧ ಪಕ್ಷದವರು ಸಹ ಕೈಜೋಡಿಸಬೇಕು. ಆಡಳಿತದಲ್ಲಿ ವ್ಯತ್ಯಾಸ, ಲೋಪ ಕಂಡು ಬಂದರೆ ಅದನ್ನು ಆರೋಗ್ಯಕರ ದೃಷ್ಟಿಯಲ್ಲಿ ಟೀಕಿಸಿದರೆ ಸ್ವಾಗತಿಸಲಾಗುವುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.