ಬಸವರಾಜ ಪುಟ್ಟಣ್ಣನವರ
ಹಾವೇರಿ: ತಂದೆ–ತಾಯಿ ಹಾಗೂ ಪತ್ನಿ–ಮಕ್ಕಳಿಲ್ಲದೇ ಒಂಟಿಯಾಗಿ ಮನೆಯಲ್ಲಿ ವಾಸವಿದ್ದ ರೈತ ಬಸವರಾಜ ಪುಟ್ಟಣ್ಣನವರ (40) ಅವರನ್ನು ಹತ್ಯೆ ಮಾಡಿ ಆಸ್ತಿ ದೋಚಲು ಯತ್ನಿಸಿದ್ದ ಆರೋಪದಡಿ ನಾಲ್ವರು ಆರೋಪಿಗಳನ್ನು ರಟ್ಟೀಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
‘ರಟ್ಟೀಹಳ್ಳಿಯ ಚಿಕ್ಕಯಡಚಿ ರಸ್ತೆಯಲ್ಲಿ ಸೆ. 27ರಂದು ತಡರಾತ್ರಿ ಅಪಘಾತವಾದ ಸ್ಥಿತಿಯಲ್ಲಿ ಬಸವರಾಜ ಮೃತದೇಹ ಪತ್ತೆಯಾಗಿತ್ತು. ಇದರ ತನಿಖೆ ನಡೆಸಿದಾಗ, ಕೊಲೆ ಎಂಬುದು ಗೊತ್ತಾಗಿದೆ. ಕೃತ್ಯ ಎಸಗಿರುವ ಆರೋಪಿಗಳಾದ ರಾಘವೇಂದ್ರ ಮಳಗೊಂಡರ, ಸಿದ್ದನಗೌಡ ಕರೇಗೌಡ್ರ ಉರುಫ್ ಹಲಗೇರಿ, ಪ್ರವೀಣ್ ಹಾಗೂ ಮಾಲತೇಶ ಎಂಬುವವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
‘ರೈತ ಬಸವರಾಜ ಅವರ ಹೆಸರಿನಲ್ಲಿ ಸುಮಾರು 12 ಎಕರೆ ಜಮೀನು ಇದೆ. ಬಸವರಾಜ ಅವರ ಅಣ್ಣ–ತಮ್ಮ, ತಂದೆ–ತಾಯಿ ತೀರಿಕೊಂಡಿದ್ದಾರೆ. ಪತ್ನಿ ಹಾಗೂ ಮಕ್ಕಳು ಸಹ ಇಲ್ಲ. ಒಂಟಿಯಾಗಿದ್ದ ಬಸವರಾಜ ಅವರ ಜಮೀನು ದೋಚಲೆಂದು ಆರೋಪಿಗಳು, ಅವರನ್ನು ಕೊಲೆ ಮಾಡಿರುವುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ’ ಎಂದು ತಿಳಿಸಿದರು.
ಎದುರು ಮನೆ ನಿವಾಸಿ: ‘ರೈತ ಬಸವರಾಜ ಅವರ ಮನೆ ಎದುರೇ ಆರೋಪಿ ರಾಘವೇಂದ್ರ ವಾಸವಿದ್ದ. ಬಸವರಾಜ ಅವರು ಮದ್ಯವ್ಯಸನಿಯಾಗಿದ್ದರು. ಅವರಿಗೆ ಆಗಾಗ ಮದ್ಯ ಕುಡಿಸುತ್ತಿದ್ದ ಆರೋಪಿ, ಆಸ್ತಿ ದೋಚಲು ಹೊಂಚು ಹಾಕುತ್ತಿದ್ದ. ಇನ್ನೊಬ್ಬ ಆರೋಪಿ ಸಿದ್ದನಗೌಡ ಸಹ ಆಸ್ತಿ ದೋಚಲು ಕಾಯುತ್ತಿದ್ದ’ ಎಂದು ಪೊಲೀಸರು ಹೇಳಿದರು.
‘ಬಸವರಾಜ ಅವರಿಗೆ ದೂರದ ಸಂಬಂಧಿಕರಿದ್ದಾರೆ. ಆದರೆ, ಅವರ ಜೊತೆಗೆಯೂ ಬಸವರಾಜ ಹೆಚ್ಚು ಮಾತನಾಡುತ್ತಿರಲಿಲ್ಲ. ಸದಾ ಒಂಟಿಯಾಗಿ ಓಡಾಡುತ್ತಿದ್ದರು. ಮದ್ಯವ್ಯಸನಿಯಾಗಿದ್ದ ಅವರು, ಹೆಚ್ಚು ಸಮಯ ಕುಡಿದ ಅಮಲಿನಲ್ಲಿರುತ್ತಿದ್ದರು’ ಎಂದು ತಿಳಿಸಿದರು.
ಉಪನೋಂದಣಾಧಿಕಾರಿ ಕಚೇರಿಯಲ್ಲಿ ವಿಲ್ ನೋಂದಣಿ: ‘ಬಸವರಾಜ ಅವರಿಗೆ ಮದ್ಯ ಕುಡಿಸಿದ್ದ ಆರೋಪಿಗಳು, ಉಪನೋಂದಣಾಧಿಕಾರಿ ಕಚೇರಿಗೆ ಕರೆದೊಯ್ದಿದ್ದರು. ಆಸ್ತಿಯನ್ನು ತಮ್ಮ ಹೆಸರಿಗೆ ವಿಲ್ ಸಹ ಮಾಡಿಸಿಕೊಂಡಿದ್ದರು’ ಎಂದು ಪೊಲೀಸರು ಹೇಳಿದರು.
‘ಬಸವರಾಜ ಅವರು ಮೃತಪಟ್ಟರೆ ತಮಗೆ ಆಸ್ತಿ ಸಿಗುವುದಾಗಿ ಮಾತನಾಡಿಕೊಂಡಿದ್ದ ಆರೋಪಿಗಳು, ಕೊಲೆಗೆ ಸಂಚು ರೂಪಿಸಿದ್ದರು. ಕೃತ್ಯಕ್ಕಾಗಿ ಸಂಬಂಧಿಕರಾದ ಪ್ರವೀಣ ಹಾಗೂ ಮಾಲತೇಶ ಸಹಾಯ ಪಡೆದುಕೊಂಡಿದ್ದರು. ಎಲ್ಲರೂ ಸೇರಿ ಕೊಲೆಗೆ ಸಂಚು ರೂಪಿಸಿದ್ದರು’ ಎಂದು ತಿಳಿಸಿದರು.
ಕಾರು ಗುದ್ದಿಸಿ ಹತ್ಯೆ: ‘ಸೆ. 27ರಂದು ಬಸವರಾಜ ಅವರಿಗೆ ಆರೋಪಿಗಳು ಮದ್ಯ ಕುಡಿಸಿದ್ದರು. ನಂತರ, ನಡುರಸ್ತೆಯಲ್ಲಿ ಕುಳಿತುಕೊಳ್ಳುವಂತೆ ಮಾಡಿದ್ದರು. ಅದೇ ಸಂದರ್ಭದಲ್ಲಿ ಗಂಟೆಗೆ 80 ಕಿ.ಮೀ. ವೇಗದಲ್ಲಿ ಕಾರು ಚಲಾಯಸಿ, ಬಸವರಾಜ ಅವರಿಗೆ ಗುದ್ದಿಸಿದ್ದರು’ ಎಂದು ಪೊಲೀಸರು ಹೇಳಿದರು.
‘ಡಿಕ್ಕಿಯಿಂದಾಗಿ ಬಸವರಾಜ ಸ್ಥಳದಲ್ಲೇ ಮೃತಪಟ್ಟಿದ್ದರು. ಮೇಲ್ನೋಟಕ್ಕೆ ಇದೊಂದು ಅಪಘಾತವೆಂಬಂತೆ ಆರೋಪಿಗಳು ಬಿಂಬಿಸಿದ್ದರು. ಅದನ್ನು ನಂಬಿದ್ದ ಸಂಬಂಧಿ ಕುಮಾರ ಠಾಣೆಗೆ ದೂರು ನೀಡಿದ್ದರು. ಅಪಘಾತ ಆಯಾಮದಲ್ಲಿ ತನಿಖೆ ಕೈಗೊಂಡಾಗ ಕೊಲೆ ಸುಳಿವು ಸಿಕ್ಕಿತು. ಪುರಾವೆ ಪರಿಶೀಲಿಸಿದಾಗ ಎಲ್ಲರೂ ಸಿಕ್ಕಿಬಿದ್ದರು’ ಎಂದು ತಿಳಿಸಿದರು.
‘ಬಸವರಾಜ ಕೊಲೆಗೆ ಸಂಚು ರೂಪಿಸಿದ್ದ ಆರೋಪಿಗಳು, ಕೊಲೆಗೂ ಮುನ್ನ ಅಂಚೆ ಕಚೇರಿಯಲ್ಲಿ ₹ 500 ಪಾವತಿಸಿ ಅಪಘಾತ ವಿಮೆ ಮಾಡಿಸಿದ್ದರು. ಬಸವರಾಜ ಅವರ ಹೆಸರಿನಲ್ಲಿದ್ದ ವಿಮೆಗೆ ಆರೋಪಿ ರಾಘವೇಂದ್ರನೇ ನಾಮಿನಿ ಆಗಿದ್ದ’ ಎಂದು ಪೊಲೀಸರು ಹೇಳಿದರು.
‘ಬಸವರಾಜ ಅಪಘಾತದಲ್ಲಿ ತೀರಿಕೊಂಡರೆ ಅಪಘಾತದ ವಿಮೆ ಮೊತ್ತವೂ ಬರುತ್ತದೆ. ವಿಲ್ ಚಾಲ್ತಿಗೆ ಬಂದು ಆಸ್ತಿಯೂ ನಮ್ಮದಾಗುತ್ತದೆ ಎಂದು ಆರೋಪಿಗಳು ಅಂದುಕೊಂಡಿದ್ದರು. ವಿಮೆಯಿಂದಲೇ ಆರೋಪಿಗಳು ಸಿಕ್ಕಿಬಿದ್ದರು’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.