ರಟ್ಟೀಹಳ್ಳಿ ಪಟ್ಟಣ ಪಂಚಾಯಿತಿಯ ನೂತನ ಅಧ್ಯಕ್ಷ ರವಿ ಹಾಗೂ ಉಪಾಧ್ಯಕ್ಷ ಶಿವಕುಮಾರ ಜೊತೆಯಲ್ಲಿ ಸಂಸದ ಬಸವರಾಜ ಬೊಮ್ಮಾಯಿ ಮಂಗಳವಾರ ವಿಜಯೋತ್ಸವ ಆಚರಿಸಿದರು
ರಟ್ಟೀಹಳ್ಳಿ: ತೀವ್ರ ಕುತೂಹಲ ಕೆರಳಿಸಿದ್ದ ಇಲ್ಲಿಯ ಪಟ್ಟಣ ಪಂಚಾಯಿತಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಚುನಾವಣೆ ಮುಕ್ತಾಯಗೊಂಡಿದೆ. ಬಿಜೆಪಿ ಸದಸ್ಯರ ಬೆಂಬಲದೊಂದಿಗೆ ‘ಕಾಂಗ್ರೆಸ್’ ಸದಸ್ಯ ರವೀಂದ್ರ ಮುದಿಯಪ್ಪನವರ ಅವರು ನೂತನ ಅಧ್ಯಕ್ಷರಾಗಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ.
ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದ ಶಿವಕುಮಾರ ಉಪ್ಪಾರ, ಕಾಂಗ್ರೆಸ್ ಸೇರ್ಪಡೆಯಾಗಿರುವುದಾಗಿ ಘೋಷಿಸಿಕೊಂಡು ಕೊನೆ ಘಳಿಗೆಯಲ್ಲಿ ಬಿಜೆಪಿ ಸದಸ್ಯರ ಬೆಂಬಲದೊಂದಿಗೆ ಉಪಾಧ್ಯಕ್ಷ ಸ್ಥಾನ ಅಲಂಕರಿಸಿದ್ದಾರೆ.
ಹೊಸ ತಾಲ್ಲೂಕು ರಚನೆಯಾದ ಬಳಿಕ ಇದೇ ಮೊದಲ ಬಾರಿಗೆ ರಟ್ಟೀಹಳ್ಳಿ ಪಟ್ಟಣ ಪಂಚಾಯಿತಿ ಚುನಾವಣೆಯ 15 ವಾರ್ಡ್ ಸದಸ್ಯರ ಆಯ್ಕೆಗೆ ಚುನಾವಣೆ ನಡೆದಿತ್ತು. 7 ವಾರ್ಡ್‌ಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದಿದ್ದರು. 6 ವಾರ್ಡ್‌ಗಳಲ್ಲಿ ಬಿಜೆಪಿ ಸದಸ್ಯರು ಜಯಶಾಲಿಯಾಗಿದ್ದರು. ಇಬ್ಬರು ಪಕ್ಷೇತರರು ಆಯ್ಕೆಯಾಗಿದ್ದರು.
ರಾಜಕೀಯ ಹೈಡ್ರಾಮಾ: ಪಟ್ಟಣ ಪಂಚಾಯಿತಿಯ ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ‘ಬಿಸಿಎ’ ಮೀಸಲಾತಿ ಪ್ರಕಟಗೊಂಡಿತ್ತು. ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಬಹುಮತ ಪಡೆಯಲು ಕಾಂಗ್ರೆಸ್ ಹಾಗೂ ಬಿಜೆಪಿ ಮುಖಂಡರು ತೀವ್ರ ಕಸರತ್ತು ನಡೆಸಿದ್ದರು. ಕೊನೆ ಗಳಿಗೆಯಲ್ಲಿ ರಾಜಕೀಯ ಹೈಡ್ರಾಮಾ ನಡೆದು, ಕಾಂಗ್ರೆಸ್ ಮುಖಂಡರ ಲೆಕ್ಕಾಚಾರವೇ ಬುಡಮೇಲಾಯಿತು.
ಪಕ್ಷೇತರರಾಗಿ ಆಯ್ಕೆಯಾಗಿದ್ದ ಲಲಿತಾ ಚನ್ನಗೌಡ್ರ ಹಾಗೂ ಶಿವಕುಮಾರ ಉಪ್ಪಾರ ಅವರ ಮೇಲೆಯೇ ಎರಡೂ ಪಕ್ಷಗಳ ಮುಖಂಡರು ಅವಲಂಬಿತರಾಗಿದ್ದರು. ಇಬ್ಬರನ್ನೂ ಸಂಪರ್ಕಿಸಿದ್ದ ಸ್ಥಳೀಯ ಕಾಂಗ್ರೆಸ್ ಶಾಸಕ ಯು.ಬಿ. ಬಣಕಾರ ಹಾಗೂ ಮುಖಂಡರು, ತಮ್ಮ ಪಕ್ಷಕ್ಕೆ ಬೆಂಬಲಿಸುವಂತೆ ಕೋರಿದ್ದರು. ಅದಕ್ಕೆ ಒಪ್ಪಿದ್ದ ಇಬ್ಬರೂ ಕಾಂಗ್ರೆಸ್ ಜಿಲ್ಲಾ ಘಟಕದ ಕಚೇರಿಯಲ್ಲಿ ಪಕ್ಷದ ಬಾವುಟ ಸ್ವೀಕರಿಸಿ, ಪಕ್ಷ ಸೇರ್ಪಡೆಯಾಗಿದ್ದನ್ನು ಘೋಷಿಸಿಕೊಂಡಿದ್ದರು.
ಮಂಗಳವಾರ ಚುನಾವಣೆ ನಿಗದಿಯಾಗಿದ್ದರಿಂದ, ಭಾನುವಾರದಿಂದಲೇ ಕೆಲ ಸದಸ್ಯರು ಬಿಜೆಪಿ ಮುಖಂಡರ ಜೊತೆ ಚರ್ಚೆ ಆರಂಭಿಸಿದ್ದರು. ‘ಅಧಿಕಾರ ಹಿಡಿಯಬೇಕು’ ಎಂಬ ಜಿದ್ದಿಗೆ ಬಿದ್ದ ಕೆಲವರು, ತೆರೆಮರೆಯಲ್ಲಿ ಕಸರತ್ತು ಆರಂಭಿಸಿದ್ದರು.
ಮೂಲ ಕಾಂಗ್ರೆಸ್ಸಿಗರಿಗೆ ಅನ್ಯಾಯ: ಪಕ್ಷೇತರ ಅಭ್ಯರ್ಥಿ ಲಲಿತಾ ಚನ್ನಗೌಡ್ರ, ‘ಈ ಬಾರಿ ನನಗೆ ಅಧ್ಯಕ್ಷರಾಗಲು ಅವಕಾಶ ನೀಡಬೇಕು’ ಎಂದು ಕಾಂಗ್ರೆಸ್ ಮುಖಂಡರ ಬಳಿ ಬೇಡಿಕೆ ಇರಿಸಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಕಾಂಗ್ರೆಸ್ ಸದಸ್ಯ ರವೀಂದ್ರ ಮುದಿಯಪ್ಪನವರ, ‘ಅಧಿಕಾರದ ಆಸೆಗಾಗಿ ಮೂಲ ಕಾಂಗ್ರೆಸ್ಸಿಗರನ್ನು ಕಡೆಗಣಿಸಿ ಪಕ್ಷೇತರ ಅಭ್ಯರ್ಥಿಯನ್ನು ಅಧ್ಯಕ್ಷ ಮಾಡುವುದು ಸರಿಯಲ್ಲ. ಪಕ್ಷದ ಅಭಿವೃದ್ಧಿಗೆ ದುಡಿದಿದ್ದೇನೆ. ನನಗೆ ಅಧ್ಯಕ್ಷ ಸ್ಥಾನ ನೀಡಿ’ ಎಂದು ಪಟ್ಟು ಹಿಡಿದಿದ್ದರು.
ಇದರಿಂದಾಗಿ ಕಾಂಗ್ರೆಸ್ ಮುಖಂಡರು ಇಕ್ಕಟ್ಟಿಗೆ ಸಿಲುಕಿದ್ದರು. ಹಲವು ಸುತ್ತಿನ ಮಾತುಕತೆ ಬಳಿಕವೂ ಪರಿಸ್ಥಿತಿ ತಿಳಿಯಾಗಿರಲಿಲ್ಲ.
ಮಾಜಿ ಶಾಸಕ–ಸಂಸದರ ಪ್ರವೇಶ: ಕಾಂಗ್ರೆಸ್ ಸೇರಿದ್ದಾಗಿ ಹೇಳಿಕೊಂಡಿದ್ದ ಪಕ್ಷೇತರ ಸದಸ್ಯ ಶಿವಕುಮಾರ ಉಪ್ಪಾರ, ಕಾಂಗ್ರೆಸ್ ಅಭ್ಯರ್ಥಿ ರವೀಂದ್ರ ಜೊತೆ ಚರ್ಚೆ ನಡೆಸಿದ್ದರು. ಇಬ್ಬರೂ ಸೇರಿಕೊಂಡು ಬಿಜೆಪಿ ಮುಖಂಡರ ಜೊತೆ ಮಾತುಕತೆ ನಡೆಸಿದರು. ಮಾಜಿ ಶಾಸಕ ಬಿ.ಸಿ. ಪಾಟೀಲ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಸಹ ಚುನಾವಣೆ ಕಣಕ್ಕೆ ಇಳಿದಿದ್ದರು.
‘ರವೀಂದ್ರ ಅವರು ಅಧ್ಯಕ್ಷರಾಗಲಿ ಹಾಗೂ ಶಿವಕುಮಾರ ಅವರು ಉಪಾಧ್ಯಕ್ಷರಾಗಲಿ. ಇಬ್ಬರಿಗೂ ನಾವು ಬೆಂಬಲ ನೀಡುತ್ತೇವೆ’ ಎಂದು ಬಿಜೆಪಿ ಅಭ್ಯರ್ಥಿಗಳು ಘೋಷಿಕೊಂಡರು.
ರೋಚಕವಾಗಿದ್ದ ಚುನಾವಣೆ: ಪೂರ್ವ ನಿರ್ಧಾರದಂತೆ ಕಾಂಗ್ರೆಸ್ ಮುಖಂಡರು, ತಮ್ಮ ಪಕ್ಷದ ಬೆಂಬಲದೊಂದಿಗೆ ಪಕ್ಷೇತರ ಅಭ್ಯರ್ಥಿ ಲಲಿತಾ ಚನ್ನಗೌಡ್ರ ಅವರಿಂದ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಕೊಡಿಸಿದ್ದರು. ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಮಖಬುಲ್ ಮುಲ್ಲಾ ಅವರು ಉಪಾಧ್ಯಕ್ಷ ಸ್ಥಾನಕ್ಕೆ ಉಮೇದುವಾರಿಕೆ ಸಲ್ಲಿಸಿದ್ದರು.
ಇದೇ ಸಂದರ್ಭದಲ್ಲಿಯೇ ಕೈ ಅಭ್ಯರ್ಥಿ ರವೀಂದ್ರ ಮುದಿಯಪ್ಪನವರ ಅಧ್ಯಕ್ಷ ಸ್ಥಾನಕ್ಕೆ ಹಾಗೂ ಶಿವಕುಮಾರ ಉಪ್ಪಾರ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು. ತಮ್ಮದೇ ಪಕ್ಷದ ಅಭ್ಯರ್ಥಿ ಸಲ್ಲಿಸಿದ್ದ ನಾಮಪತ್ರ ವಾಪಸು ಪಡೆಯುವಂತೆ ಮಾಡಲು ಕಾಂಗ್ರೆಸ್ ಮುಖಂಡರು ನಡೆಸಿದ ಪ್ರಯತ್ನ ವಿಫಲವಾಯಿತು.
ಚುನಾವಣೆ ಆರಂಭವಾಗುತ್ತಿದ್ದಂತೆ ಸಂಸದ ಬಸವರಾಜ ಬೊಮ್ಮಾಯಿ ಸಹ ಪಂಚಾಯಿತಿಗೆ ಆಗಮಿಸಿ, ಬಿಜೆಪಿ ಬೆಂಬಲಿತ ಸದಸ್ಯರಿಗೆ ಕೈ ಎತ್ತುವ ಮೂಲಕ ಮತ ಚಲಾಯಿಸಿದರು. ಶಾಸಕ ಯು.ಬಿ. ಬಣಕಾರ ಅವರು ಕಾಂಗ್ರೆಸ್ ಬೆಂಬಲಿತ ಸದಸ್ಯರಿಗೆ ಮತದ ಬೆಂಬಲ ನೀಡಿದರು.
15 ಸದಸ್ಯರು, ಸಂಸದ ಹಾಗೂ ಶಾಸಕರ ಒಟ್ಟು 17 ಮತಗಳಲ್ಲಿ 9 ಮತಗಳ ಬಹುಮತ ಪಡೆಯುವ ಮೂಲಕ ರವೀಂದ್ರ ಮುದಿಯಪ್ಪನವರ ಅಧ್ಯಕ್ಷರಾಗಿ ಆಯ್ಕೆಯಾದರು. ಶಿವಕುಮಾರ ಸಹ ಉಪಾಧ್ಯಕ್ಷರಾದರು.
ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು, ಅಧ್ಯಕ್ಷ–ಉಪಾಧ್ಯಕ್ಷರಾಗುತ್ತಿದ್ದಂತೆ ಕಾರ್ಯಕರ್ತರು ಸಂಭ್ರಮಿಸಿದರು. ಕೇಸರಿ ಶಾಲು ತೊಟ್ಟು, ಕೇಸರಿ ಬಣ್ಣ ಎರಚಿ ವಿಜಯೋತ್ಸವ ಆಚರಿಸಿದರು.
ರವಿ ಮುದಿಯಪ್ಪನವರ ವಿಪ್ ಉಲ್ಲಂಘಿಸಿದ್ದಾರೆ. ಪಕ್ಷಾಂತರ ಕಾಯ್ದೆಯಡಿ ಜಿಲ್ಲಾಧಿಕಾರಿಗೆ ದೂರು ನೀಡಲಾಗುವುದು. ಮುಂದೆ ಉಚ್ಚಾಟನೆಗೂ ಅವಕಾಶವಿದೆಸಂಜೀವಕುಮಾರ ನೀರಲಗಿ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ
ಕಾಂಗ್ರೆಸ್ ಪಕ್ಷದಿಂದ ಗೆದ್ದಿದ್ದ ನಾನು ಮೊದಲ ಅವಧಿಗೆ ಅಧ್ಯಕ್ಷ ಸ್ಥಾನ ಕೇಳಿದ್ದೆ. ಅದಕ್ಕೆ ಒಪ್ಪದಿದ್ದರೆ ಬಿಜೆಪಿ ಸದಸ್ಯರ ಬೆಂಬಲದಿಂದ ಅಧ್ಯಕ್ಷನಾಗಿದ್ದೇನೆರವೀಂದ್ರ ಮುದಿಯಪ್ಪನವರ ನೂತನ ಅಧ್ಯಕ್ಷ ರಟ್ಟೀಹಳ್ಳಿ ಪಟ್ಟಣ ಪಂಚಾಯಿತಿ
ಜನಮಾನಸದಲ್ಲಿ ಬಿಜೆಪಿಗೆ ನೆಲೆಯಿದೆ. ಕಾಂಗ್ರೆಸ್ಸಿನಿಂದ ಅಸಮಾಧಾನಗೊಂಡು ರವಿಯವರು ನಮ್ಮ ಪಕ್ಷ ಸೇರಿದ್ದಾರೆ. ಅಧ್ಯಕ್ಷ ಸ್ಥಾನ ಬಿಜೆಪಿಯವರಿಗೆ ಸಿಗಬೇಕಿತ್ತು. ರವಿ ಮುದಿಯಪ್ಪನವರ ತೀರ್ಮಾನದಿಂದ ಸಿಕ್ಕಿದೆಬಸವರಾಜ ಬೊಮ್ಮಾಯಿ, ಸಂಸದ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.