ರಟ್ಟೀಹಳ್ಳಿ: ‘ಪಟ್ಟಣದಲ್ಲಿ ನೂತನವಾಗಿ ಪ್ರಾರಂಭಗೊಂಡ ನ್ಯಾಯಾಲಯವು ವಾರದಲ್ಲಿ ಮೂರು ದಿನ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದು, ಕಕ್ಷಿದಾರರಿಗೆ ಹಾಗೂ ವಕೀಲರಿಗೆ ತೊಂದರೆಯಾಗುತ್ತಿದೆ. ಕಾಯಂ ಕೋರ್ಟ್‌ಗೆ ಅನುಮತಿ ನೀಡುವಂತೆ ವಕೀಲರ ಸಂಘ ಮನವಿ ಸಲ್ಲಿಸಿದ್ದು, ಶೀಘ್ರ ಖಾಯಂ ಕೋರ್ಟ್‌ಗೆ ಅನುಮತಿ ನೀಡಲಾಗುವುದು’ ಎಂದು ಸಂಸದೀಯ ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ ಭರವಸೆ ನೀಡಿದರು.
ತಾಲ್ಲೂಕಿನ ಮದಗ –ಮಾಸೂರು ಕೆಂಚಮ್ಮನ ಕೆರೆಗೆ ಶುಕ್ರವಾರ ಬಾಗಿನ ಅರ್ಪಣೆ ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು.
ಮದಗದ ಕೆರೆ ಹೂಳೆತ್ತುವುದು, ಎಡದಂಡೆ ಕಾಲುವೆ, ಬಲದಂಡೆ ಕಾಲುವೆ ಆಧುನೀಕರಣ, ಶಿಕಾರಿಪುರ ರಸ್ತೆಯಿಂದ ಮದಗದ ಜಲಪಾತದವರೆಗೆ ರಸ್ತೆ ಅಭಿವೃದ್ಧಿ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಲ್ಲಿ ಪ್ರಾಮಾಣಿಕೆ ಪ್ರಯತ್ನ ಮಾಡಲಾಗುವುದು. ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳು ರಾಜ್ಯದ ಬಡಜನತೆಯ ಕುಟುಂಬದ ಆರ್ಥಿಕ ಪ್ರಗತಿಗೆ ಸಹಕಾರಿಯಾಗಿದೆ. ರಾಜ್ಯದ ಪ್ರತಿಯೊಂದು ಕುಟುಂಬಕ್ಕೆ ಪಂಚ ಗ್ಯಾರಂಟಿ ಯೋಜನೆಯ ಲಾಭ ದೊರೆಯುತ್ತಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಯು.ಬಿ.ಬಣಕಾರ ಮಾತನಾಡಿ, ‘ತಾಲ್ಲೂಕಿನ ರೈತರಿಗೆ ವರದಾನವಾಗಿರುವ ಐತಿಹಾಸಿಕ ಮದಗದ ಕೆರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಸರ್ಕಾರ ₹52 ಕೋಟಿ ಅನುದಾನ ನೀಡಿದ್ದು, ಸಮಗ್ರ ಅಭಿವೃದ್ಧಿಗೆ ನೆರವಾಗಲಿದೆ. ಸರ್ಕಾರ ನಮ್ಮ ಕ್ಷೇತ್ರಕ್ಕೆ ವಿಶೇಷ ಅನುದಾನ ನೀಡುತ್ತಿದೆ’ ಎಂದು ತಿಳಿಸಿದರು.
ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಕೋಡಮಗ್ಗಿಯಿಂದ ಬೈಕ್ ರ‍್ಯಾಲಿ ಮೂಲಕ ವಿವಿಧ ವಾದ್ಯಮೇಳಗಳೊಂದಿಗೆ ಸಚಿವ ಹಾಗೂ ಶಾಸಕರನ್ನು ಮದಗ ಕೆರೆಗೆ ಕರೆತರಲಾಯಿತು.
ಮಾಜಿ ಶಾಸಕ ಬಿ.ಎಚ್.ಬನ್ನಿಕೋಡ ರಟ್ಟೀಹಳ್ಳಿ ಕಬ್ಬಿಣಕಂತಿಮಠದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ, ತಿಪ್ಪಾಯಿಕೊಪ್ಪ ಮಠದ ಮಹಾಂತ ಸ್ವಾಮೀಜಿ, ಗ್ಯಾರಂಟಿ ಯೋಜನೆಯ ಉಪಾಧ್ಯಕ್ಷ ಎಸ್.ಆರ್.ಪಾಟೀಲ, ಮದಗ– ಮಾಸೂರು ಹೋರಾಟ ಸಮಿತಿ ಅಧ್ಯಕ್ಷ ನಿಂಗಪ್ಪ ಚಳಗೇರಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಏಕನಾಥ ಬಾನಾವಳಿ, ಕೊಟ್ರೇಶಪ್ಪ ಬಸಗಣ್ಣಿ ಸೇರಿದಂತೆ ವಿವಿಧ ಜಿಲ್ಲಾ ಹಂತದ ಮುಖಂಡರು, ಸ್ಥಳೀಯ ಮುಖಂಡರು, ಕಾರ್ಯಕರ್ತರು, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕಿನ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ತಾಲ್ಲೂಕಿನ ಜನ ಪಾಲ್ಗೊಂಡಿದ್ದರು.
ಹಲವು ಬೇಡಿಕೆ ಈಡೇರಿಕಗೆ ಪ್ರಾಮಾಣಿಕ ಪ್ರಯತ್ನ ಬಡಕುಟುಂಬಗಳ ಆರ್ಥಿಕ ಪ್ರಗತಿಗೆ ‘ಗ್ಯಾರಂಟಿ’ ಸಹಕಾರ ಮದಗದ ಕೆರೆ ಅಭಿವೃದ್ಧಿಗೆ ₹52 ಕೋಟಿ ಅನುದಾನ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.