ರಟ್ಟೀಹಳ್ಳಿ: ಮಳೆಗಾಲ ಪ್ರಾರಂಭವಾದರೆ ಸಾಕು ರಟ್ಟೀಹಳ್ಳಿ ಪಟ್ಟಣದ ಜನತೆ ಕೈಯಲ್ಲಿ ಜೀವ ಹಿಡಿದುಕೊಂಡು ನಡೆದಾಡುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಪಟ್ಟಣದ ಬಹುತೇಕ ರಸ್ತೆಗಳಲ್ಲಿ ದೊಡ್ಡ-ದೊಡ್ಡ ಗುಂಡಿಗಳು ಬಿದ್ದು, ಗುಂಡಿಗಳಲ್ಲಿ ಮಳೆನೀರು ನಿಂತು ಪಟ್ಟಣದ ಬೀದಿಗಳಲ್ಲಿ ಸಂಚರಿಸುವುದೇ ಒಂದು ದೊಡ್ಡ ಸಾಹಸವಾಗಿದೆ.
ಇನ್ನೊಂದೆಡೆ ದ್ವಿಚಕ್ರ ವಾಹನ ಸವಾರರು ಪರಿಸ್ಥಿತಿ ಏನು ವಿಭಿನ್ನವಾಗಿಲ್ಲ. ಪಟ್ಟಣದ ಹೊಸ್ ಬಸ್ ನಿಲ್ದಾಣ ರಸ್ತೆ, ಕುರಬಗೇರಿ ರಸ್ತೆ, ಕೋಟೆ ಕದಂಬ ನಗರ, ಟೀಪುನಗರ, ತರಳುಬಾಳು ಬಡಾವಣೆ, ಟಾಕೀಸ್ ರಸ್ತೆ, ಸಂತೆ ಮಾರುಕಟ್ಟೆ ಪ್ರದೇಶ, ಬನಶಂಕರಿ ನಗರ, ಶಿರಗಂಬಿ ರಸ್ತೆ, ಶಿವಾಜಿ ರಸ್ತೆ, ಸರ್ಕಾರಿ ಆಸ್ಪತ್ರೆ ಹಿಂಭಾಗ, ಕೆವ್ಹಿಜಿ ಬ್ಯಾಂಕ್ ರಸ್ತೆ, ಹೀಗೆ ಬಹುತೇಕ ಪಟ್ಟಣದ ಎಲ್ಲಕಡೆ ರಸ್ತೆ ಮಧ್ಯದಲ್ಲಿಯೇ ದೊಡ್ಡ ಗುಂಡಿಗಳಿದ್ದು, ರಸ್ತೆಗಳು ಕೆಸರು ಗದ್ದೆಗಳಾಂತಾಗಿವೆ.
ಮಳೆಗಾಲದಲ್ಲಿ ಗುಂಡಿಗಳಲ್ಲಿ ಮಳೆ ನೀರುನಿಂತು ನಿತ್ಯ ಬೀಳುವುದು, ಏಳುವುದು ಸರ್ವೆಸಾಮಾನ್ಯ. ಇನ್ನೂ ದ್ವಿಚಕ್ರ ವಾಹನ ಸವಾರರು ನಿತ್ಯ ಗುಂಡಿಗಳಲ್ಲಿ ಬಿದ್ದು ಕೈ-ಕಾಲು ಮುರಿದುಕೊಳ್ಳುವುದು ಪಟ್ಟಣದ ರಸ್ತೆಯ ದುಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ.
ಮಳೆಗಾಲಕ್ಕೂ ಮುನ್ನ ಎಚ್ಚೆತ್ತುಕೊಳ್ಳದ ಅಧಿಕಾರಿಗಳು: ಪಟ್ಟಣದಲ್ಲಿ ರಸ್ತೆಯ ಮಧ್ಯದಲ್ಲಿಯೇ ದೊಡ್ಡ, ದೊಡ್ಡ ಗುಂಡಿಗಳಿದ್ದು, ಮಳೆಗಾಲಕ್ಕೂ ಮುನ್ನ ಅವುಗಳನ್ನು ಮುಚ್ಚಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕೆಂದು ಸೌಜನ್ಯ ಕೂಡ ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗಾಗಲಿ, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗಾಗಲಿ ಇಲ್ಲದಿರುವುದು ನಾಚೀಕಗೇಡಿನ ವಿಷಯ.
ಪಟ್ಟಣವು ತಾಲ್ಲೂಕು ಕೇಂದ್ರವಾಗಿದೆ. ಅಲ್ಲದೇ ಗ್ರಾಮ ಪಂಚಾಯಿತಿಯಿಂದ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿ ನಾಲ್ಕು ವರ್ಷ ಕಳೆದಿದೆ. ಪಟ್ಟಣದ ನಿವಾಸಿಗಳು ಈ ಹಿಂದಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಪಟ್ಟಣ ಪಂಚಾಯಿತಿಗೆ ತೆರಿಗೆ ರೂಪದಲ್ಲಿ ಹಣಸಂದಾಯ ಮಾಡುತ್ತಿದ್ದಾರೆ. ಪಟ್ಟಣ ಪಂಚಾಯಿತಿಯಾಗಿರುವ ಕಾರಣದಿಂದಾಗಿ ಸರ್ಕಾರದಿಂದ ಕೂಡ ಹಲವಾರು ಯೋಜನೆಗಳಿಗೆ ದೊಡ್ಡ ಪ್ರಮಾಣದಲ್ಲಿ ಅನುದಾನ ಬರುತ್ತದೆ ಹೀಗಿದ್ದೂ ಪಟ್ಟಣದಲ್ಲಿ ರಸ್ತೆ ಮಧ್ಯದಲ್ಲಿನ ಗುಂಡಿಗಳ ದುರಸ್ತಿ ಕಾರ್ಯಮಾಡದೆ ಇರುವುದಕ್ಕೆ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಅತೃಪ್ತಿ ವ್ಯಕ್ತಪಡಿಸುತ್ತಿದ್ದಾರೆ.
‘ಪಟ್ಟಣ ಪಂಚಾಯಿತಿಗೆ ಸಾಕಷ್ಟು ಪ್ರಮಾಣದಲ್ಲಿ ಕರ (ಟ್ಯಾಕ್ಸ್) ವಸೂಲಿಯಾಗುತ್ತಿದ್ದು, ಹೀಗಿದ್ದೂ ಇಲ್ಲಿನ ನಿವಾಸಿಗಳ ಸುರಕ್ಷತೆಗೆ ಆದ್ಯತೆ ನೀಡದಿರುವುದು ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತದೆ. ಸಮಸ್ಯೆ ಕುರಿತು ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗುತ್ತಿಲ್ಲ‘ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ರಟ್ಟೀಹಳ್ಳಿ ಪಟ್ಟಣ ವ್ಯಾಪ್ತಿಯ ಎಲ್ಲ ಬಡಾವಣೆಗಳಲ್ಲಿ ರಸ್ತೆಗಳು ಸುಮಾರು ವರ್ಷಗಳಿಂದ ಹಾಳಾಗಿದ್ದು, ರಸ್ತೆಯ ಮಧ್ಯದಲ್ಲಿಯೇ ಗುಂಡಿಗಳಿವೆ. ಚರಂಡಿಗಳು ಸ್ವಚ್ಚವಾಗಿಲ್ಲ. ರಸ್ತೆಗೆ ಹೊಂದಿಕೊಂಡೆ ಮುಳ್ಳುಗಿಡ-ಗಂಟೆಗಳು ಬೆಳೆದು ನಿತ್ಯ ಸಂಚರಿಸುವ ಪಾದಚಾರಿಗಳಿಗೆ, ಮಕ್ಕಳಿಗೆ, ವೃದ್ಧರಿಗೆ, ಮಹಿಳೆಯರಿಗೆ, ವಾಹನ ಸವಾರರಿಗೆ ಯಮಲೋಕ ದರ್ಶನವಾಗುತ್ತಿದೆ. ಪಟ್ಟಣ ಪಂಚಾಯ್ತಿ ಸಿಬ್ಬಂದಿ ಪಟ್ಟಣದ ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಕುಡಿಯುವ ನೀರು, ಚರಂಡಿ ಸ್ಚಚ್ಚತೆ, ರಸ್ತೆ, ಬೀದಿದೀಪ ಮುಂತಾದ ಸಾರ್ವಜನಿಕರ ಅಗತ್ಯ ಸೌಕರ್ಯಗಳನ್ನು ಒದಗಿಸುವ ಕೆಲಸ ಮಾಡಬೇಕು‘ ಎನ್ನುತ್ತಾರೆ ಬನಶಂಕರಿ ನಗರ ನಿವಾಸಿ ನಿವೃತ್ತ ಶಿಕ್ಷಕ ಎಸ್.ಎಂ. ಮಠದ.
‘ರಟ್ಠೀಹಳ್ಳಿ ಪಟ್ಟಣ ತಾಲ್ಲೂಕು ಕೇಂದ್ರವಾಗಿದೆ. ಪಟ್ಟಣ ಪಂಚಾಯ್ತಿಯಾಗಿ ಮೇಲ್ದರ್ಜೆಗೇರಿದೆ ಹೀಗಾಗಿ ಮೊದಲಿಗಿಂತಲೂ ಈಗ ಹೆಚ್ಚಿನ ತೆರಿಗೆಯನ್ನು ಸಾರ್ವಜನಿಕರು ಪಂಚಾಯ್ತಿಗೆ ಕಟ್ಟುತ್ತಿದ್ದಾರೆ. ತೆರಿಗೆ ಸಂದಾಯ ತಡವಾದರೆ ಬಡ್ಡಿ ಸಮೇತ ತೆರಿಗೆ ವಸೂಲಿ ಮಾಡುತ್ತಾರೆ. ಯಾವುದೇ ಅಗತ್ಯ ಕಾಗದ ಪತ್ರ ಪಂಚಾಯ್ತಿಯಿಂದ ಪಡೆಯಲು ಸಾರ್ವಜನಿಕರು ಹೋದಲ್ಲಿ ಮೊದಲು ಟ್ಯಾಕ್ಸ್ ಕ್ಲಿಯರ್ ಮಾಡುವಂತೆ ಸೂಚಿಸುತ್ತಾರೆ. ಆದರೆ ಪಟ್ಟಣದ ಅಭಿವೃದ್ಧಿ ಮಾತ್ರ ಶೂನ್ಯವಾಗಿದೆ. ಹೀಗಿದ್ದೂ ಇಲ್ಲಿನ ಜನತೆಗೆ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಮೂಲ ಸೌಕರ್ಯ ಒದಗಿಸುವಲ್ಲಿ ವಿಫಲರಾಗಿದ್ದಾರೆ. ರಸ್ತೆ ಮಧ್ಯದಲ್ಲಿರುವ ಗುಂಡಿಗಳನ್ನು ಮುಚ್ಚಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು‘ ಎನ್ನುತ್ತಾರೆ ಅಖಿಲ ಕರ್ನಾಟಕ ಹಿಂದುಳಿದ ಜನಾಂಗ ಜಾಗೃತ ಕಟ್ಟಡ ಮತ್ತು ಇತರೇ ನಿರ್ಮಾಣ ಕಾರ್ಮಿಕರ ಸಂಘದ ರಾಜ್ಯಧ್ಯಕ್ಷ ಶಿವಕುಮಾರ ಉಪ್ಪಾರ.
ಪಟ್ಟಣ ಪಂಚಾಯಿತಿ ಅಧಿಕಾರಿಗಳು ಮೂಲ ಸೌಕರ್ಯ ಒದಗಿಸುವಲ್ಲಿ ವಿಫಲರಾಗಿದ್ದಾರೆ. ರಸ್ತೆ ಮಧ್ಯದಲ್ಲಿರುವ ಗುಂಡಿಗಳನ್ನು ಮುಚ್ಚಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು-ಶಿವಕುಮಾರ ಉಪ್ಪಾರ, ಅಖಿಲ ಕರ್ನಾಟಕ ಹಿಂದುಳಿದ ಜನಾಂಗ ಜಾಗೃತ ಕಟ್ಟಡ ಮತ್ತು ಇತರೇ ನಿರ್ಮಾಣ ಕಾರ್ಮಿಕರ ಸಂಘದ ರಾಜ್ಯಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.