ADVERTISEMENT

ಏಕಾಗ್ರತೆಯಿಂದ ಓದಿ, ಪರೀಕ್ಷೆಯಲ್ಲಿ ಯಶಸ್ವಿಯಾಗಿ: ಮೋಹನ ದಂಡಿನ

‘ಪ್ರಜಾವಾಣಿ’ ಫೋನ್‌–ಇನ್‌ ಕಾರ್ಯಕ್ರಮ : ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಮೋಹನ ದಂಡಿನ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2026, 6:06 IST
Last Updated 12 ಫೆಬ್ರುವರಿ 2026, 6:06 IST
<div class="paragraphs"><p>ಹಾವೇರಿಯಲ್ಲಿ ಬುಧವಾರ ನಡೆದ ಪೋನ್‌ ಇನ್‌ ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಮೋಹನ ದಂಡಿನ</p></div>

ಹಾವೇರಿಯಲ್ಲಿ ಬುಧವಾರ ನಡೆದ ಪೋನ್‌ ಇನ್‌ ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಮೋಹನ ದಂಡಿನ

   

ಹಾವೇರಿ: ವಿಷಯವಾರು ಅಧ್ಯಯನ, ಪ್ರಶ್ನೆ ಪತ್ರಿಕೆಗಳ ಸ್ವರೂಪ, ಸಮಯ ನಿರ್ವಹಣೆ ಸೇರಿದಂತೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಸಂಬಂಧಿಸಿದ ತಮ್ಮ ಗೊಂದಲಗಳನ್ನು ವಿದ್ಯಾರ್ಥಿಗಳು ‘ಪ್ರಜಾವಾಣಿ’  ಬುಧವಾರ ಆಯೋಜಿಸಿದ್ದ ಫೋನ್‌ಇನ್‌ ಕಾರ್ಯಕ್ರಮದಲ್ಲಿ ಪರಿಹರಿಸಿಕೊಂಡರು.

ವಿವಿಧ ವಿಷಯಗಳ ಕುರಿತು ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ವಿಷಯ ತಜ್ಞ ಶಿಕ್ಷಕರು ಉತ್ತರಿಸಿದರು. ಪರೀಕ್ಷೆಗೆ ಸಿದ್ಧತೆ, ಮಾದರಿ ಪ್ರಶ್ನೆ ಪತ್ರಿಕೆ ಬಿಡಿಸುವುದರಿಂದ ಆಗುವ ಅನುಕೂಲಗಳ ಕುರಿತು ಮಾಹಿತಿ ನೀಡಿದರು. 

ADVERTISEMENT

ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಮೋಹನ ದಂಡಿನ, ‘ಈ ಬಾರಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಮೂರು ಬಾರಿ ಪೂರ್ವ ಸಿದ್ಧತಾ ಪರೀಕ್ಷೆ ಎದುರಿಸಬೇಕಿದೆ. ಇದರಿಂದ ವಾರ್ಷಿಕ ಪರೀಕ್ಷೆಯ ಭಯ ದೂರವಾಗಲಿದೆ. ಮಾದರಿ ಪ್ರಶ್ನೆ, ಉತ್ತರಗಳನ್ನು ಅನುಸರಿಸಿದರೆ ಪರೀಕ್ಷೆ ಬರೆಯುವುದು ಸುಲಭವಾಗಲಿದೆ’ ಎಂದರು. 

‘ಪೂರ್ವ ಸಿದ್ಧತಾ ಪರೀಕ್ಷೆಗಳನ್ನು ಅಂತಿಮ ಪರೀಕ್ಷೆ ಮಾದರಿಯಲ್ಲಿ ಮಾಡಲಾಗುತ್ತದೆ. ಈಗಾಗಲೇ ಎರಡು ಪರೀಕ್ಷೆಗಳು ಮುಗಿದಿವೆ. ಒಂದನೇ ಪರೀಕ್ಷೆಗೆ ಹೋಲಿಸಿದರೆ ಎರಡನೇ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಫಲಿತಾಂಶ ಸುಧಾರಣೆಯಾಗಿದೆ. ಒಂದು ವಾರದಲ್ಲಿ ಮೂರನೇ ಪರೀಕ್ಷೆ ನಡೆಯಲಿದೆ’ ಎಂದರು.

‘ಈ ಬಾರಿ ಶೇ 95ರಷ್ಟು ಫಲಿತಾಂಶ ಪಡೆಯುವ ಗುರಿ ಹೊಂದಲಾಗಿದ್ದು, ಇದಕ್ಕೆ ತಕ್ಕಂತೆ ಇಲಾಖೆ ಶ್ರಮ ವಹಿಸುತ್ತಿದೆ. ಪೂರ್ವ ಸಿದ್ಧತಾ ಪರೀಕ್ಷೆಯಲ್ಲಿ ಸಾಧಾರಣ ಫಲಿತಾಂಶ ಬಂದಿರುವ ಶಾಲೆಗಳಿಗೆ ಅಧಿಕಾರಿಗಳು ಮತ್ತು ವಿಷಯ ತಜ್ಞ ಶಿಕ್ಷಕರು ಆದ್ಯತೆ ನೀಡುತ್ತಿದ್ದಾರೆ. 8 ಸಾವಿರ ಪ್ರಶ್ನೆ ಮತ್ತು ಉತ್ತರಗಳನ್ನು ಇಲಾಖೆ ಬಿಡುಗಡೆ ಮಾಡಿದೆ’ ಎಂದು ತಿಳಿಸಿದರು.

‘ವೆಬ್‌ ಕಾಸ್ಟಿಂಗ್‌ ವ್ಯವಸ್ಥೆ  ಪರೀಕ್ಷೆ ವ್ಯವಸ್ಥೆಯ ಪರಿಣಾಮ ಬೀರುತ್ತಿದೆ. ನಕಲು ನಿಯಂತ್ರಣಗೊಂಡಿದೆ’ ಎಂದು ಅವರು ಹೇಳಿದರು.

ಪಾಠ ಆಧಾರಿತ ಮೌಲ್ಯಾಂಕನ (ಎಲ್‌ಬಿಎ) ಪ್ರಶ್ನೆಗಳ ಬಗ್ಗೆ ವಿದ್ಯಾರ್ಥಿಗಳು ಗಮನ ಹರಿಸಬೇಕು. ಅನ್ವಯಿಕ ಪ್ರಶ್ನೆಗಳಿಗೆ 20 ಅಂಕಗಳಿದ್ದು, ಇದು ವಿದ್ಯಾರ್ಥಿಗಳಿಗೆ ಅಂಕ ಹೆಚ್ಚಿಸಿಕೊಳ್ಳುವ ಸುಲಭ ಮಾರ್ಗವಾಗಿದೆ ಎಂದರು.

ಡಯಟ್‌ ಜಿಲ್ಲಾ ಉಪ ನಿರ್ದೇಶಕ ಜೆ.ಎಂ. ಖಾಜಿ ಮಾತನಾಡಿ, ‘ಜಿಲ್ಲೆಯ 111 ಶಾಲೆಗಳನ್ನು ದತ್ತು ಪಡೆದು ಪೂರ್ವಸಿದ್ಧತಾ ಪರೀಕ್ಷೆಯ ಫಲಿತಾಂಶ ಹೆಚ್ಚಿಸುವ ಪ್ರಯತ್ನ ಮಾಡಲಾಗುತ್ತಿದೆ. ಎಲ್ಲ ವಿಷಯಗಳಲ್ಲಿ ಅಂಕ ಗಳಿಸುವ ಬಗ್ಗೆ ತಿಳಿಸಿಕೊಡಲಾಗುತ್ತಿದೆ’ ಎಂದು ಹೇಳಿದರು.

ಪರೀಕ್ಷೆ ಫಲಿತಾಂಶ ಸುಧಾರಣೆಗೆ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.  ವಿದ್ಯಾರ್ಥಿಗಳ ಓದಿಗೆ ಅನುಕೂಲಕ್ಕಾಗಿ ಸಂಪನ್ಮೂಲ ವ್ಯಕ್ತಿಗಳ ಮೊಬೈಲ್‌ ಸಂಖ್ಯೆಗಳನ್ನು ನೀಡಲಾಗುತ್ತಿದೆ. ಪರೀಕ್ಷೆ ಗೊಂದಲ ನಿವಾರಿಸಲು ‘ಪ್ರಜಾವಾಣಿ’ ಪೋನ್‌ಇನ್ ಕಾರ್ಯಕ್ರಮ ಹೆಚ್ಚು ಉಪಯುಕ್ತವಾಗಿದೆ ಎಂದರು.

ವಿದ್ಯಾರ್ಥಿಗಳ ಪ್ರಶ್ನೆಗೆ ವಿಷಯ ತಜ್ಞ ಶಿಕ್ಷಕ ಉತ್ತರ ಕೆಳಕಂಡಂತಿದೆ

* ಪಲ್ಲವಿ, ಬೆನಕನಗೊಂಡ: ಓದಿದ್ದನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದು ಹೇಗೆ?

–ಓದಿದ್ದನ್ನು ಬರೆಯಬೇಕು. ನಂತರ ಪುಸ್ತಕ ನೋಡಿ ಬರೆದಿದ್ದನ್ನು ಖಚಿತಪಡಿಸಿಕೊಳ್ಳಬೇಕು. ಬಾಯಿಪಾಠ ಬೇಡ. ಬಿಡುವಿನ ವೇಳೆ ಒಂದು ಅಂಕದ ಉತ್ತರ ಸ್ಮರಿಸಿಕೊಳ್ಳಿ. ರಾತ್ರಿ ಮಲಗುವಾಗ ಶಾಂತಚಿತ್ತದಿಂದ ಪಠ್ಯಗಳ ಸ್ಮರಣೆ ಮಾಡಿ.

*ಅಕ್ಷತಾ, ಕಾಟೇನಹಳ್ಳಿ: ಗಣಿತ ವಿಷಯದ ಸೂತ್ರಗಳನ್ನು ನೆನಪಿಟ್ಟುಕೊಳ್ಳುವುದು ಹೇಗೆ?

– ಸೂತ್ರಗಳ ಬಾಯಿಪಾಠ ಜತೆಗೆ ಸೂತ್ರ ಸಿದ್ಧಗೊಂಡ ಮೂಲ ಅರಿತುಕೊಳ್ಳಬೇಕು. ಇದರಿಂದ ಸೂತ್ರ ನೆನಪಿನಲ್ಲಿ ಉಳಿಯುತ್ತದೆ.

* ದಿನೇಶಗೌಡ, ಬನ್ನೂರ: ಎಲ್ಲ ವಿಷಯಗಳಲ್ಲಿ ಶೇ 100ರಷ್ಟು ಅಂಕ ಗಳಿಸಲು ಏನು ಮಾಡಬೇಕು?

– ಶಿಕ್ಷಕರ ಮಾರ್ಗದರ್ಶನ, ವ್ಯವಸ್ಥಿತ ಓದು, ಪ್ರಚಲಿತ ವಿಷಯಗಳ ಮೇಲಿನ ಸಾಮಾನ್ಯ ಜ್ಞಾನ, ಎಲ್‌ಬಿಎ ಪ್ರಶ್ನೆಗಳನ್ನು ತಿಳಿದುಕೊಳ್ಳುವುದು ಮತ್ತು ಪರೀಕ್ಷೆಯಲ್ಲಿ ಸಮಯ ನಿರ್ವಹಣೆ ಮಾಡಿದರೆ ಶೇ 100ರಷ್ಟು ಅಂಕ ಪಡೆಯಲು ಸಾಧ್ಯ.

* ಐಶ್ವರ್ಯ, ಸಂಗೂರ: ಬೆಳಿಗ್ಗೆ ಓದಲು ಕೂತಾಗ ನಿದ್ದೆ ಬರುತ್ತದೆ. ಇದರಿಂದ ಓದಿನಲ್ಲಿ ಗಮನ ಹರಿಸಲು ಸಾಧ್ಯವಾಗುತ್ತಿಲ್ಲ

– ಓದಿನ ಜತೆಗೆ ಕೆಲಸ ಸಮಯ ಧ್ಯಾನ, ವ್ಯಾಯಾಮ ಮಾಡಬೇಕು. ಇಷ್ಟವಾದ ವಿಷಯವನ್ನು ಮೊದಲು ಓದಲು ಪ್ರಾರಂಭಿಸಬೇಕು.

* ಮಂಜುನಾಥ, ತಿಮ್ಮಾಪುರ: ಕನ್ನಡ ವಿಷಯದಲ್ಲಿ ನೂರು ಅಂಕ ಪಡೆಯಲು ಏನು ಮಾಡಬೇಕು?

– ಪ್ರಬಂಧ, ವ್ಯಾಕರಣ, ಪಠ್ಯದಲ್ಲಿನ ಎಲ್ಲ ವಿಷಯ ಓದಿಕೊಂಡು ಸಮಯಕ್ಕೆ ಅವಕಾಶ ನೀಡಿ ಸಮರ್ಪಕವಾಗಿ ಬರೆದಾಗ ಸಂಪೂರ್ಣ ಅಂಕ ಸಿಗುತ್ತದೆ.

* ಸುಮಾ, ಕೂಸನೂರ: ಪರೀಕ್ಷೆಗೆ 35 ದಿನಗಳು ಮಾತ್ರ ಬಾಕಿ ಉಳಿದಿವೆ. ತಯಾರಿ ಹೇಗಿರಬೇಕು?

– ಪೂರ್ವ ಸಿದ್ಧತಾ ಪರೀಕ್ಷೆಯಲ್ಲಿ ಕಷ್ಟವಾದ ಪ್ರಶ್ನೆಗಳಿಗೆ ಸಂಬಂಧಿಸಿದಂತೆ ಶಿಕ್ಷಕರಿಂದ ಮಾರ್ಗದರ್ಶನ ಪಡೆದು ಗೊಂದಲ ಪರಿಹರಿಸಿಕೊಳ್ಳಬೇಕು. ಕಳೆದ ವರ್ಷದ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳನ್ನು ಇಲಾಖೆ ಹೊರತಂದಿದೆ. ಅವುಗಳನ್ನು ಪರಿಶೀಲಿಸಿ.

* ಜ್ಞಾನೇಶ್ವರಿ, ನೆಲೋಗಲ್‌: ಪೂರ್ವಸಿದ್ಧತಾ ಪರೀಕ್ಷೆಯಲ್ಲಿ ಓದಿದ್ದು ನೆನಪಿಗೆ ಬರುತ್ತಿಲ್ಲ. ಏನು ಮಾಡಬೇಕು?

– ಮೊದಲು ಗೊತ್ತಿರುವ ಪ್ರಶ್ನೆಗಳಿಗೆ ಉತ್ತರಿಸಿ. ಇದರಿಂದ ಪರೀಕ್ಷೆ ಭಯ ದೂರವಾಗುತ್ತದೆ. ಕ್ರಮೇಣ ಓದಿದ್ದು ಎಲ್ಲವೂ ನೆನಪಿಗೆ ಬರುತ್ತದೆ.

* ಅಕ್ಷತಾ, ಬೈಚವಳ್ಳಿ: ಎಲ್‌ಬಿಎ ಪ್ರಶ್ನೆಗಳನ್ನು ಹೊರತುಪಡಿಸಿ ಪೂರ್ವಸಿದ್ಧತಾ ಪರೀಕ್ಷೆಯಲ್ಲಿ ಬೇರೆ ಪ್ರಶ್ನೆಗಳು ಬರುತ್ತಿವೆ. ಇವುಗಳನ್ನು ಹೇಗೆ ಬಿಡಿಸಬೇಕು 

– ಎಲ್‌ಬಿಎ ಮಾದರಿಯಲ್ಲಿ ಪ್ರಶ್ನೆಗಳಿರುತ್ತವೆ. ಆದರೆ, ಕೆಲವು ಬದಲಾವಣೆ ಮಾಡಿರುತ್ತಾರೆ. ಇದು ವಿದ್ಯಾರ್ಥಿಗಳ ಸಾಮಾನ್ಯ ಜ್ಞಾನದ ಮೇಲೆ ನಿರ್ಧಾರವಾಗುತ್ತದೆ. ಪ್ರಶ್ನೆಗಳನ್ನು ಸ್ಪಷ್ಟವಾಗಿ ಓದಿಕೊಂಡು, ಉತ್ತರಿಸಬೇಕು

ಫೋನ್‌ಇನ್‌ನಲ್ಲಿ ಹಾನಗಲ್ ಬಿಇಒ ಆರ್‌.ವಿ. ಚಿನ್ನಿಕಟ್ಟಿ, ಬ್ಯಾಡಗಿ ಬಿಇಒ ಸುರೇಶಬಾಬು ಕೋಟಿ, ಹಾವೇರಿ ಬಿಇಒ ಎಂ.ಎಚ್‌. ಪಾಟೀಲ, ಹಿರೇಕೆರೂರ ಬಿಇಒ ಶ್ರೀಧರ ಎನ್‌., ರಾಣೆಬೆನ್ನೂರ ಬಿಇಒ ಶ್ಯಾಮಸುಂದರ ಅಡಿಗ, ಸವಣೂರ ಬಿಇಒ ಎಂ.ಎಫ್‌. ಬಾರ್ಕಿ, ಶಿಗ್ಗಾವಿ ಬಿಇಒ ಎಂ.ಬಿ. ಅಂಬಿಗೇರ ಪಾಲ್ಗೊಂಡಿದ್ದರು.

ಪೋನ್‌ ಇನ್‌ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜಿಲ್ಲೆಯ ವಿವಿಧ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ವಿಷಯವಾರು ತಜ್ಞ ಶಿಕ್ಷಕರ ತಂಡ
ಪೋನ್‌ ಇನ್‌ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಪ್ರಶ್ನೆಗೆ ಉತ್ತರಿಸಲು ಸಿದ್ಧಗೊಂಡ ಶಿಕ್ಷಣ ಇಲಾಖೆ ಅಧಿಕಾರಿಗಳು

2026 ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ ವೇಳಾಪಟ್ಟಿ

ಮಾರ್ಚ್‌ 18; ಪ್ರಥಮ ಭಾಷೆ (ಕನ್ನಡ ಉರ್ದು ಇಂಗ್ಲಿಷ್‌) ಮಾರ್ಚ್‌ 23; ವಿಜ್ಞಾನ ಮಾರ್ಚ್‌ 25; ದ್ವಿತೀಯ ಭಾಷೆ (ಇಂಗ್ಲಿಷ್‌ ಕನ್ನಡ) ಮಾರ್ಚ್‌ 28; ಗಣಿತ ಮಾರ್ಚ್‌ 30; ತೃತೀಯ ಭಾಷೆ (ಹಿಂದಿ ಉರ್ದು ಇಂಗ್ಲಿಷ್‌) ಏಪ್ರಿಲ್‌ 02; ಸಮಾಜ ವಿಜ್ಞಾನ

ವಿದ್ಯಾರ್ಥಿಗಳಿಗೆ ಸಲಹೆಗಳು

* ಸಮಯ ನಿರ್ವಹಣೆಗೆ  ಗಮನ ಕೊಡಿ

* ಅಂಕಗಳಿಗೆ ಅನುಗುಣವಾಗಿ ಉತ್ತರ ಬರೆಯಿರಿ

* ಅನ್ವಯಿಕ ಪ್ರಶ್ನೆಗಳು 20 ಅಂಕಗಳನ್ನು ಹೊಂದಿದ್ದು ಅವುಗಳತ್ತ ಆಸಕ್ತಿ ವಹಿಸಿ

* ಒಂದೇ ವಿಷಯದ ಕುರಿತು ಹೆಚ್ಚು ಹೊತ್ತು ಓದುವುದು ಬೇಡ

* ಓದಿನ ಜತೆಗೆ  ಅರ್ಧ ಮುಕ್ಕಾಲು ಗಂಟೆಗೊಮ್ಮೆ ಬಿಡುವು ಪಡೆಯಿರಿ

* ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ 40 ಪ್ಲಸ್‌ ಅಳವಡಿಕೆ ಉತ್ತಮವಾಗಿದೆ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.