ADVERTISEMENT

ಬಾಕಿ ವೇತನ ಬಿಡುಗಡೆಗೆ ಆಗ್ರಹ: ಗ್ರಾ.ಪಂ.ನೌಕರರ ಸಂಘದಿಂದ ಪ್ರತಿಭಟನೆ

ಎಲ್ಲ ಸಿಬ್ಬಂದಿಯನ್ನು ‘ಇಎಫ್‌ಎಂಎಸ್‌’ಗೆ ಒಳಪಡಿಸಿ

​ಪ್ರಜಾವಾಣಿ ವಾರ್ತೆ
Published 16 ಜುಲೈ 2021, 13:22 IST
Last Updated 16 ಜುಲೈ 2021, 13:22 IST
ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ಜಿಲ್ಲಾ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಿ, ಹಾವೇರಿ ಜಿಲ್ಲಾಡಳಿತ ಭವನದ ಮುಂಭಾಗ ಜಿಲ್ಲಾ ಪಂಚಾಯ್ತಿ ಸಿಇಒ ಮೊಹಮ್ಮದ್‌ ರೋಶನ್‌ ಅವರಿಗೆ ಮನವಿ ಸಲ್ಲಿಸಲಾಯಿತು 
ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ಜಿಲ್ಲಾ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಿ, ಹಾವೇರಿ ಜಿಲ್ಲಾಡಳಿತ ಭವನದ ಮುಂಭಾಗ ಜಿಲ್ಲಾ ಪಂಚಾಯ್ತಿ ಸಿಇಒ ಮೊಹಮ್ಮದ್‌ ರೋಶನ್‌ ಅವರಿಗೆ ಮನವಿ ಸಲ್ಲಿಸಲಾಯಿತು    

ಹಾವೇರಿ: ‘ಜಿಲ್ಲೆಯ 223 ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 1753 ಸಿಬ್ಬಂದಿಗಳಲ್ಲಿ ಶೇ 80ರಷ್ಟು ಮಂದಿಗೆ ಸುಮಾರು 20 ತಿಂಗಳ ವೇತನ ಕೊಡುವುದು ಬಾಕಿ ಇದೆ. ಬೆಲೆ ಏರಿಕೆಯಿಂದ ಸಂಕಷ್ಟ ಎದುರಿಸುತ್ತಿರುವ ನಮಗೆ ಕೂಡಲೇ ವೇತನ ಬಿಡುಗಡೆ ಮಾಡಬೇಕು’ ಎಂದು ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ಜಿಲ್ಲಾ ಸಮಿತಿ ವತಿಯಿಂದ ಪ್ರತಿಭಟನೆ ನಡೆಯಿತು.

ದೇವಗಿರಿ ಜಿಲ್ಲಾಡಳಿತ ಭವನದ ಮುಂಭಾಗ ಶುಕ್ರವಾರ ಪ್ರತಿಭಟನೆ ನಡೆಸಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೊಹಮ್ಮದ್‌ ರೋಶನ್‌ ಅವರಿಗೆ ಮನವಿ ಸಲ್ಲಿಸಿದರು.

ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಗದೀಶ ಕೋಟಿ ಮಾತನಾಡಿ, ಎಲ್ಲ ಸಿಬ್ಬಂದಿಯನ್ನು ‘ಎಲೆಕ್ಟ್ರಾನಿಕ್‌ ಫಂಡ್‌ ಮ್ಯಾನೇಜ್‌ಮೆಂಟ್‌ ಸಿಸ್ಟಂ’ (e-FMS)ಗೆ ಸೇರ್ಪಡೆ ಮಾಡಬೇಕು.ಜಿಲ್ಲಾ ಪಂಚಾಯಿತಿ ಅನುಮೋದನೆಗೆ ಬಂದಂತಹ ಕಡತಗಳಿಗೆ ಕೂಡಲೇ ಅನುಮೋದನೆ ಕೊಡಬೇಕು. ಎರಡು ವರ್ಷಗಳಿಂದ ಅನುಮೋದನೆಗೆ ಬಂದಂತಹ ಕಡತಗಳ ಸಂಖ್ಯೆ, ಅನುಮೋದನೆ ನೀಡಿದ ಕಡತಗಳ ಸಂಖ್ಯೆ, ಬಾಕಿ ಉಳಿದಿರುವ ಕಡತಗಳ ಸಂಖ್ಯೆ, ಬಾಕಿ ಉಳಿಯಲು ಕಾರಣವನ್ನು ಸಂಘಟನೆಗೆ ಕೊಡಬೇಕು’ ಎಂದು ಆಗ್ರಹಿಸಿದರು.

ADVERTISEMENT

‘15ನೇ ಹಣಕಾಸಿನಲ್ಲಿ ಮತ್ತು ವಸೂಲಾತಿಯಲ್ಲಿ ಶೇ 40ರಷ್ಟು ಹಣವನ್ನು ಸಿಬ್ಬಂದಿ ವೇತನಕ್ಕಾಗಿ ಕೊಡಬೇಕೆಂಬ ಆದೇಶವಿದ್ದರೂ ಗ್ರಾಮ ಪಂಚಾಯಿತಿಗಳಲ್ಲಿ ವೇತನ ಕೊಡುತ್ತಿಲ್ಲ. ಪಾವತಿ ಮಾಡದೇ ಇರುವ ಅಭಿವೃದ್ಧಿ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು. ಬಾಕಿ ಉಳಿದ ವೇತನವನ್ನು ಕೂಡಲೇ ಪಾವತಿ ಮಾಡಬೇಕು. ಪಿಂಚಣಿ ಮತ್ತು ಭವಿಷ್ಯನಿಧಿ ಸೌಲಭ್ಯ ದೊರಕಿಸಬೇಕು’ ಎಂದು ಆಗ್ರಹಿಸಿದರು.

ಸಿಬ್ಬಂದಿಗೆ ಆಗುತ್ತಿರುವ ಕಿರುಕುಳ, ಮಾನಸಿಕ ಹಿಂಸೆಯನ್ನು ತಪ್ಪಿಸಬೇಕು. ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು. ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತರುವಾಗ ಗ್ರಾಮ ಪಂಚಾಯಿತಿಯ ಎಲ್ಲ ಸಿಬ್ಬಂದಿಗಳನ್ನು ಒಳಪಡಿಸಬೇಕು. ಗ್ರಾಮ ಪಂಚಾಯಿತಿ ಬಿಲ್‌ ಕಲೆಕ್ಟರ್‌/ ಗುಮಾಸ್ತ ಹುದ್ದೆಯಿಂದ ಗ್ರೇಡ್‌–2 ಕಾರ್ಯದರ್ಶಿ/ ದ್ವಿತೀಯ ದರ್ಜೆ ಲೆಕ್ಕಸಹಾಯಕರ ಹುದ್ದೆಗೆ ಆಯ್ಕೆ ಮೂಲಕ ನೇರ ನೇಮಕಾತಿಗೆ ಸಂಬಂಧಿಸಿದಂತೆ 2021ರ ಜುಲೈ 3ರಂದು ಹೊರಡಿಸಿದ್ದ ಸರ್ಕಾರದ ಆದೇಶವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಪಂಚಾಯಿತಿ ಸಿಇಒ ಮೊಹಮ್ಮದ್‌ ರೋಶನ್‌ ಅವರು ಮನವಿ ಸ್ವೀಕರಿಸಿ, ‘ಜಿಲ್ಲೆಯ ಎಲ್ಲ ಪಿಡಿಒ ಮತ್ತು ಕಾರ್ಯನಿರ್ವಹಣಾಧಿಕಾರಿಗಳ ಸಭೆ ಕರೆದು, ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳುತ್ತೇನೆ’ ಎಂದು ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ ಬಿ.ಐ.ಈಳಗೇರ, ಅಂದಾನಪ್ಪ ಹೆಬಸೂರ, ವಿನಾಯಕ ಕುರುಬರ, ನಾರಾಯಣ ಕಾಳೆ, ಪರಮೇಶ ಪುರದ, ವಿಜಯಕುಮಾರ ಮಿಳ್ಳಿ, ಮಲ್ಲೇಶಪ್ಪ, ಪ್ರಕಾಶ ಸತಗಿಹಳ್ಳಿ, ಚಂದ್ರಪ್ಪ ತಂಬ್ಳೇರ ಮುಂತಾದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.