ADVERTISEMENT

ಶಬರಿ ಪರೀಕ್ಷೆ; ವಿದ್ಯಾರ್ಥಿಗಳ ಮಧ್ಯೆ ತಾರತಮ್ಯ–ಆರೋಪ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2024, 18:39 IST
Last Updated 4 ಏಪ್ರಿಲ್ 2024, 18:39 IST
ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿಗಳು ‘ಶಬರಿ ಪರೀಕ್ಷೆ’ ಬರೆಯುತ್ತಿರುವ ದೃಶ್ಯ 
ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿಗಳು ‘ಶಬರಿ ಪರೀಕ್ಷೆ’ ಬರೆಯುತ್ತಿರುವ ದೃಶ್ಯ    

ಹಾವೇರಿ: ಸ್ಪರ್ಧಾತ್ಮಕ ಪರೀಕ್ಷೆ ತಯಾರಿಗಾಗಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಅನುಕೂಲ ಆಗುವಂತೆ ರಾಜ್ಯ ಸರ್ಕಾರ ‘ಶಬರಿ ಪರೀಕ್ಷೆ’ ಯೋಜನೆ ಜಾರಿಗೊಳಿಸಿದೆ. ಆದರೆ, ಈ ಸೌಲಭ್ಯದಿಂದ ಸಮಾಜ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯ ಹಾಸ್ಟೆಲ್‌ ವಿದ್ಯಾರ್ಥಿಗಳು ವಂಚಿತರಾಗಿದ್ದಾರೆ ಎಂದು ಭಾರತ ವಿದ್ಯಾರ್ಥಿ ಒಕ್ಕೂಟದ (ಎಸ್‌ಎಫ್‌ಐ) ಮುಖಂಡರು ದೂರಿದ್ದಾರೆ.

‘ಶಬರಿ ಸರಣಿ ಸ್ಪರ್ಧಾತ್ಮಕ ಪರೀಕ್ಷೆ ಯೋಜನೆಯಿಂದ ಸಾವಿರಾರು ವಿದ್ಯಾರ್ಥಿಗಳಿಗೆ ಅನುಕೂಲವಾಗಿದ್ದರೂ ದಲಿತರು, ಅಲಸಂಖ್ಯಾತರು ಮತ್ತು ಹಿಂದುಳಿದ ವರ್ಗಗಳಿಗೆ ಸೇರಿದ ಲಕ್ಷಾಂತರ ಬಡ ವಿದ್ಯಾರ್ಥಿಗಳು ಈ ಸೌಲಭ್ಯದಿಂದ ವಂಚಿತರು ಆಗಿದ್ದಾರೆ. ಖಾಸಗಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರಗಳಲ್ಲಿ ಸಾವಿರಾರು ರೂಪಾಯಿ ಖರ್ಚು ಮಾಡಿ, ಪರೀಕ್ಷೆಗೆ ಸಿದ್ಧತೆ ನಡೆಸುವ ಅನಿವಾರ್ಯ ಎದುರಾಗಿದೆ. ಹಾಸ್ಟೆಲ್‌ ವಿದ್ಯಾರ್ಥಿಗಳಲ್ಲಿ ತಾರತಮ್ಯ ಮಾಡದೇ ಎಲ್ಲರಿಗೂ ಸೌಲಭ್ಯ ವಿಸ್ತರಿಸಬೇಕು’ ಎಂದು ಎಸ್‌ಎಫ್‌ಐ ಜಿಲ್ಲಾ ಘಟಕದ ಸಹ ಕಾರ್ಯದರ್ಶಿ ಬಸವರಾಜ ಎಸ್‌. ಆಗ್ರಹಿಸಿದ್ದಾರೆ. 

‘ರಾಣೆಬೆನ್ನೂರು ಸೇರಿ ಕೆಲ ಕಡೆ ಒಂದೇ ಕಟ್ಟಡದಲ್ಲಿ ಸಮಾಜ ಕಲ್ಯಾಣ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವಿದ್ಯಾರ್ಥಿಗಳು ಇದ್ದಾರೆ. ‘ಎಸ್‌ಟಿ’ ವಿದ್ಯಾರ್ಥಿಗಳು ಮಾತ್ರ ಪರೀಕ್ಷೆ ಬರೆಯುತ್ತಿದ್ದು, ‘ಎಸ್‌ಸಿ’ ವಿದ್ಯಾರ್ಥಿಗಳು ಪರೀಕ್ಷೆಯಿಂದ ವಂಚಿತರಾಗಿದ್ದಾರೆ’ ಎಂದು ಅವರು ತಿಳಿಸಿದ್ದಾರೆ.

ADVERTISEMENT

ಏನಿದು ಯೋಜನೆ?

ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯ ಮೆಟ್ರಿಕ್‌ ನಂತರದ ಬಾಲಕ/ ಬಾಲಕಿಯರ ವಿದ್ಯಾರ್ಥಿನಿಲಯಗಳಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವ ಆಸಕ್ತ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಹೇಗೇ ಎದುರಿಸಬೇಕು ಎಂಬುದನ್ನು ಮನದಟ್ಟು ಮಾಡಲು ಪ್ರತಿ ಗುರುವಾರ ಕಿರು ಪರೀಕ್ಷೆ ನಡೆಸಿ, ಮೌಲ್ಯಮಾಪನ ಮಾಡುವುದು ‘ಶಬರಿ ಪರೀಕ್ಷೆ’ ಯೋಜನೆಯ ಉದ್ದೇಶ.

ಪ್ರತಿ ಹಾಸ್ಟೆಲ್‌ಗೆ 705 ಪುಟಗಳ 20 ಸ್ಪರ್ಧಾತ್ಮಕ ಪರೀಕ್ಷೆ ಪುಸ್ತಕಗಳನ್ನು ಪೂರೈಸಲಾಗಿದೆ. ಈ ಪುಸ್ತಕದ ಆಧಾರದ ಮೇಲೆ ಪ್ರತಿ ವಾರ 50 ಪುಟ ಒಳಗೊಂಡಂತೆ ಪ್ರಶ್ನೆಪತ್ರಿಕೆ ಸಿದ್ಧಪಡಿಸಿ ವಿದ್ಯಾರ್ಥಿಗಳಿಗೆ ಕಿರು ಪರೀಕ್ಷೆ ನಡೆಸಲಾಗುತ್ತಿದೆ. ಕನ್ನಡ ಮಾಧ್ಯಮದಲ್ಲಿರುವ ‌ಪ್ರಶ್ನೆ ಪತ್ರಿಕೆ 40 ಅಂಕಗಳದ್ದು ಆಗಿದ್ದು, 30 ನಿಮಿಷಗಳಲ್ಲಿ ಉತ್ತರಿಸಬೇಕು.

ಹಾವೇರಿ ಜಿಲ್ಲೆಯ ಪರಿಶಿಷ್ಟ ಪಂಗಡಗಳ ಐದು ಹಾಸ್ಟೆಲ್‌ಗಳ 473 ವಿದ್ಯಾರ್ಥಿಗಳು ಶಬರಿ ಪರೀಕ್ಷೆ ಸೌಲಭ್ಯ ಪಡೆದಿದ್ದಾರೆ. ಈ ಯೋಜನೆ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಅನುಕೂಲಕಾರಿಯಾಗಿದೆ
– ಮಂಜನಾಯ್ಕ ಜಿಲ್ಲಾ ಪರಿಶಿಷ್ಟ ಪಂಗಡಗಳ ಕಲ್ಯಾಣಾಧಿಕಾರಿ ಹಾವೇರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.