
ಹಾವೇರಿ: ‘ತ್ರಿಪದಿ ವಚನ ಸಾಹಿತ್ಯದ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದಿದ್ದು ಕವಿ ಸರ್ವಜ್ಞ. ಎಲ್ಲರೂ ಒಂದೇ ಎಂಬ ಸಂದೇಶ ನೀಡಿದ ಅವರು ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದರು’ ಎಂದು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಸಮಿತಿ ಅಧ್ಯಕ್ಷ ಎಂ.ಎಂ. ಹೀರೆಮಠ ಹೇಳಿದರು.
ನಗರದ ಗಾಂಧಿ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಹಾವೇರಿ ಜಿಲ್ಲಾ ಕುಂಬಾರ ಸಂಘದ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ತ್ರಿಪದಿ ಕವಿ ಸರ್ವಜ್ಞ ಅವರ ಜಯಂತಿ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಸರ್ವಜ್ಞ, ವೈಚಾರಿಕ ತ್ರಿಪದಿಗಳ ಚಕ್ರವರ್ತಿ. ನಾಡು ಕಂಡ ಶ್ರೇಷ್ಠ ಕವಿ. ಜೀವನದ ಸಾರವನ್ನು ತಮ್ಮ ವಚನಗಳ ಮೂಲಕ ಸರಳವಾಗಿ ತಿಳಿಸಿದ್ದಾರೆ. ಸರ್ವಜ್ಞ ಅವರು ಈ ಜಿಲ್ಲೆಯಲ್ಲಿ ಜನಿಸಿದ್ದರು ಎಂಬುದು ನಮಗೆಲ್ಲ ಹೆಮ್ಮೆಯ ವಿಷಯ. ಇಂದಿನ ಯುವಜನತೆ ಇಂತಹ ಮಹಾನ ವ್ಯಕ್ತಿಗಳ ಕುರಿತು ತಿಳಿದುಕೊಳ್ಳಬೇಕು. ಸಮಾಜ ಸುಧಾರಣೆಗೆ ಎಲ್ಲರೂ ಕೈಜೋಡಿಸಬೇಕು’ ಎಂದು ಹೇಳಿದರು.
ಜಿಲ್ಲಾ ಕುಂಬಾರ ಸಂಘದ ಅಧ್ಯಕ್ಷ ರೇವಣೆಪ್ಪ ಚಕ್ರಸಾಲಿ ಮಾತನಾಡಿ, ‘ಸರ್ವಜ್ಞ ಅವರು ಜಾತಿ ವ್ಯವಸ್ಥೆಯನ್ನು ಕಟುವಾಗಿ ಟೀಕಿಸಿದ್ದರು. ಸಮಾಜದ ಓರೆಕೋರೆಗಳನ್ನು ಎತ್ತಿತೋರಿಸಿದ ದಿಟ್ಟ ಕವಿಯಾಗಿದ್ದರು. ಕುಂಬಾರ ಸಮುದಾಯ ಬಹಳ ಹಿಂದುಳಿದ ಸಮುದಾಯವಾಗಿದೆ. ಸಮಾಜದವರು ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕು’ ಎಂದರು.
ಮಲ್ಲೇಶಪ್ಪ ಗುತ್ತೆಣ್ಣನವರ ಅವರು ‘ತ್ರಿಪದಿ ಕವಿ ಸರ್ವಜ್ಞರ ಜೀವನ ಮೌಲ್ಯ, ಸಾಧನೆ ಹಾಗೂ ವಚನಗಳು’ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಭೂ ಮಾಪನ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜ ಚಕ್ರಸಾಲಿ, ಸರ್ವಜ್ಞ ಪ್ರಾಧಿಕಾರದ ಸದಸ್ಯರು, ಸಮಾಜದ ಮುಖಂಡರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.