ADVERTISEMENT

ಕವಿಯ ಬಾಯಿ ಮುಚ್ಚಿಸಲು ಸಾಧ್ಯವಿಲ್ಲ: ಸತೀಶ ಕುಲಕರ್ಣಿ

ಹಾವೇರಿ ಜಿಲ್ಲಾ 12ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿ

​ಪ್ರಜಾವಾಣಿ ವಾರ್ತೆ
Published 28 ಜನವರಿ 2020, 15:43 IST
Last Updated 28 ಜನವರಿ 2020, 15:43 IST
ಹಾವೇರಿ ಜಿಲ್ಲಾ 12ನೇ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ಕವನ ವಾಚನ ಮಾಡಿದ ಕವಿಗಳನ್ನು ಸನ್ಮಾನಿಸಲಾಯಿತು 
ಹಾವೇರಿ ಜಿಲ್ಲಾ 12ನೇ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ಕವನ ವಾಚನ ಮಾಡಿದ ಕವಿಗಳನ್ನು ಸನ್ಮಾನಿಸಲಾಯಿತು    

ಹಾವೇರಿ: ‘ಕವಿ ಯಾವಾಗಲೂ ಸ್ವತಂತ್ರ ಜೀವಿ. ಯಾರೇ ಆಗಲಿ ಕವಿಯ ಬಾಯಿ ಮುಚ್ಚಿಸಲು ಎಂದಿಗೂ ಸಾಧ್ಯವಿಲ್ಲ’ ಎಂದು ಸಾಹಿತಿ ಸತೀಶ ಕುಲಕರ್ಣಿ ಹೇಳಿದರು.

ನಗರದ ರಜನಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಜಿಲ್ಲಾ 12ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪ್ರಸಕ್ತ ಸಮಸ್ಯೆಗಳಿಗೆ ಸ್ಪಂದಿಸುವ ಸಾಮಾಜಿಕ ಹೊಣೆಗಾರಿಕೆ ಕವಿಗಳ ಮೇಲಿದೆ. ಹೊಸ ಪದಗಳನ್ನು ಕಟ್ಟುವ ಮೂಲಕ ಕಾವ್ಯಾಸಕ್ತರಿಗೆ ನವಿರಾದ ಸಂದೇಶವನ್ನು ಕವಿ ನೀಡುತ್ತಾನೆ. ಅಂತರಂಗದ ಮಾತುಗಳಿಗೆ ಕಿವಿಗೊಡಬೇಕಿದೆ. ಪ್ರಭುತ್ವಕ್ಕೆ ಮಣಿಯದೆ ಸ್ವತಂತ್ರ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕಿದೆ ಎಂದರು.

ADVERTISEMENT

‘ನಿನ್ನ ಮನಸ್ಸು ನಿರ್ಮಲವಿದ್ದರೆ, ಯಾವ ದೇವರಿಗೂ ಹಾಲು ತುಪ್ಪ ಎರೆಯಬೇಕಿಲ್ಲ, ನಿನ್ನ ನಡೆ ನಿರ್ದೋಷವಾಗಿದ್ದರೆ, ಯಾವ ದೇವರಿಗೂ ಹೂ ಪತ್ರೆ ಏರಿಸಬೇಕಿಲ್ಲ...’ ಎಂದು ಡಾ.ಸೋಮಲಿಂಗಪ್ಪ ಚಿಕ್ಕಳ್ಳವರಕವನ ವಾಚನ ಮಾಡಿದರು. ಕವನ ರಚನೆಯಷ್ಟೇ ಕವನ ವಾಚನ ಕೂಡ ಒಂದು ಕಲೆ. ಏರಿಳಿತಗಳ ಮೂಲಕ ಕಾವ್ಯದ ರಸಾನುಭಾವವನ್ನು ಕಾವ್ಯಾಸಕ್ತರ ಮನಕ್ಕೆ ಮುಟ್ಟಿಸಬೇಕು. ಆಗ ಮಾತ್ರ ಕವಿತೆಗೆ ಅರ್ಥ ಬರುತ್ತದೆ ಎಂದು ಹೇಳಿದರು.

‘ಬದುಕಿನುದ್ದಕ್ಕೂ ಪಾಲಿಸಬೇಕಾದ ವಿಚಾರಗಳ ಮಹಾಪುರುಷರ ಚಿತ್ರಕ್ಕೆ ಹಾರ ತುರಾಯಿಗಳನೇರಿಸಿದ ಬಾಬುತ್ತು ತೋರಿಸಿ, ರಜೆ ಘೋಷಿಸಿ, ಮೆರವಣಿಗೆ ಹೊರಡಿಸಿ, ಹುಗ್ಗಿ–ಹೋಳಿಗೆ ತಿಂದು, ತೇಗಿದರಾಯ್ತೇ ಜಯಂತಿ? ಎಂದು ವಾಗೀಶ ಹೂಗಾರ ಕವನ ವಾಚನ ಮಾಡುವ ಮೂಲಕ ನಿಜ ಅರ್ಥದಲ್ಲಿ ಜಯಂತಿಗಳನ್ನು ಹೇಗೆ ಆಚರಿಸಬೇಕು ಎಂಬುದನ್ನು ಮನನ ಮಾಡಿಕೊಟ್ಟರು.

‘ಮಸ್ತಕದ ಪುಸ್ತಕ ಹಸ್ತದಲಿ ಕಾಣದೆ ಚಾಕು ಚೂರಿ ತಲ್ವಾರ್‌ ಬಯಲಲ್ಲಿ ತಾಲೀಮು ನಡೆಸಿವೆ. ಯಾರೋ ಹೇಳಿದರು ನೀನು ಬೀದಿನಾಯಿ ಆಗುತ್ತೀಯಾ.. ನಾನು ಹೇಳಿದೆ ನಿಯತ್ತಿಗಾಗಿಯೇ ಬಂದಿದ್ದೇನೆ’ ಎಂದು ನೂರ್‌ ಅಹಮದ್‌ ನಾಗನೂರ್‌ ಅವರು ಗಜಲ್‌ ನುಡಿಯುತ್ತಿದ್ದಂತೆ ಪ್ರೇಕ್ಷಕರಿಂದ ಕರತಾಡನ ಮೊಳಗಿತು.

ಹೊಡೆದು ತಿನ್ನುವವರಿಗೆ ಭ್ರಷ್ಟಾಚಾರವೇ ಮನೆ, ಸಾವು ಕಾಣದ ಸಾಧನೆ ನೀನಾಗು, ನಮಿಸೋಣ ರೈತನಿಗೆ ಮುಂತಾದ ಕವನದ ಸಾಲುಗಳು ಕಾವ್ಯಾಸಕ್ತರ ಗಮನಸೆಳೆದವು. ‘ಭಾರವೆನ್ನದ ಸಿರಿ ಗರ್ಭ ಹೊತ್ತಿತು ತಿಂಗಳು ಒಂಬತ್ತು, ಉಸಿರು ಪಣಕ್ಕಿಟ್ಟು ನೀಡಿತು ಜೀವ ಅಮೃತವು ಅವಳಿಟ್ಟ ಕೈತುತ್ತು’ ಎಂದು ಕವಯತ್ರಿ ಶಕುಂತಲಾ ಕೋಣನವರ ಅವರು ತಾಯಿಯ ತ್ಯಾಗ, ಪ್ರೀತಿಯ ಬಗ್ಗೆ ಮನಮುಟ್ಟುವಂತೆ ಕವನ ವಾಚನ ಮಾಡಿದರು.

ಮಹಿಳೆಯರ ಮೇಲಿನ ದಬ್ಬಾಳಿಕೆ, ರೈತನ ಸಂಕಷ್ಟ, ಸೈನಿಕರ ತ್ಯಾಗ, ಪ್ರಿಯತಮೆಯ ಅನುರಾಗ, ಕನ್ನಡ ಭಾಷಾ ಪ್ರೇಮ ಮತ್ತು ಪೌರತ್ವ ಕಾಯ್ದೆ ವಿರೋಧ ಮುಂತಾದ ವಿಷಯಗಳ ಬಗ್ಗೆ ಕವಿತೆಗಳು ಮೊಳಗಿದವು.ಸವಣೂರಿನ ಮಂಜುಳಾ ಸಂಶಿ, ಬ್ಯಾಡಗಿಯ ಸುಮಾ ಹೂಲಿಹಳ್ಳಿ, ರಟ್ಟಿಹಳ್ಳಿಯ ಅಶ್ವಿನಿ ಕೆ.ಎಸ್., ಲಕ್ಷ್ಮಣ ಬಡಿಗೇರ, ಬಸವರಾಜ ಪೂಜಾರ, ಶಿವಾನಂದ ಅಣ್ಣಿಗೇರಿ ಸೇರಿದಂತೆ ಒಟ್ಟು 53 ಕವಿಗಳು ಕವನ ವಾಚನ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.