ಸವಣೂರು: ಶ್ರೀ ದೇವಿ ಗಂಗಮಾಳವ್ವ ಮೂರ್ತಿಯ ಪುರ ಪ್ರವೇಶದ ನಂತರ ಭವ್ಯ ಮೆರವಣಿಗೆ ಶನಿವಾರ ಸಂಜೆ ಪಟ್ಟಣದಲ್ಲಿ ಸಂಭ್ರಮದಿಂದ ನಡೆಯಿತು.
ಪಟ್ಟಣದ ಸಿಂಪಿಗಲ್ಲಿ ಗಣೇಶ ದೇವಸ್ಥಾನದಿಂದ ಹೊರಟ ದೇವಿ ಮೂರ್ತಿ ಮೆರವಣಿಗೆ ವಿಶೇಷ ದಿವಟಗಿ ಸೇವೆ, ಕುದರಿಕಾರರ ಸೇವೆ, ಪೂರ್ಣ ಕುಂಭ ಮೇಳ, ಡೊಳ್ಳು, ಭಜನೆ ಸೇರಿದಂತೆ ವಿವಿಧ ವಾದ್ಯಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಯಲ್ಲಿ ಸಂಚರಿಸಿ ಮೈಲಾರಲಿಂಗೇಶ್ವರ ದೇವಸ್ಥಾನ ತಲುಪಿತು.
ಮೆರವಣಿಗೆಯುದ್ದಕ್ಕೂ ಪಟಾಕಿ ಸದ್ದು, ಕುದರಿಕಾರರ ಕುಣಿತ, ದಿವಟಗಿ ಸೇವೆ ವಿಶೇಷವಾಗಿತ್ತು. ನಂತರ ರಾತ್ರಿ ಜಲಾಧಿವಾಸ, ಧಾನ್ಯಾಧಿವಾಸ, ದೀಪಾಧಿವಾಸ, ಪುಷ್ಪಧಿವಾಸ ಹಾಗೂ ಶಯನಾಧಿವಾಸ ಕಾರ್ಯಕ್ರಮಗಳು ನಡೆದವು.
ಭಾನುವಾರ ಶ್ರೀಶೈಲ ಶಾಖಾಮಠದ ಹಾವೇರಿ ಹರಸೂರ ಬಣ್ಣದಮಠದ ಅಭಿನವ ರುದ್ರಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಪುಟ್ಟಯ್ಯ ಹಿರೇಮಠ ಅವರ ನೇತೃತ್ವದಲ್ಲಿ ಶ್ರೀದೇವಿಯ ಮೂರ್ತಿ ಪ್ರಾಣ ಪ್ರತಿಷ್ಠಾಪನೆ, ಹೋಮ ಹಾಗೂ ವಿಶೇಷ ಪೂಜೆ, ಪುಷ್ಪಾಲಂಕಾರ ಸೇರಿದಂತೆ ವಿವಿಧ ವೈಧಿಕ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆದವು.
ಇದೇ ಸಂದರ್ಭದಲ್ಲಿ ನೂರಾರು ಭಕ್ತರ ಸಮ್ಮುಖದಲ್ಲಿ ಮೈಲಾರಲಿಂಗೇಶ್ವರ ಹಾಗೂ ಗಂಗಮಾಳವ್ವ ದೇವರ ಕಲ್ಯಾಣೋತ್ಸವ ಶಾಸ್ತ್ರೋಕ್ತವಾಗಿ ನೆರವೇರಿತು. ನಂತರ, ಭಕ್ತರಿಗೆ ಅನ್ನಸಂತರ್ಪಣೆ ಕಾರ್ಯ ನಡೆಯಿತು.
ಮೈಲಾರಲಿಂಗೇಶ್ವರ ದೇವಸ್ಥಾನದ ಸೇವಾ ಸಮಿತಿಯ ಎಲ್ಲ ಪದಾಧಿಕಾರಿಗಳು, ಸ್ಥಳೀಯ ಮುಖಂಡರು, ವರ್ತಕರು, ಯುವಕರು ಸೇರಿದಂತೆ ಪಟ್ಟಣದ ಭಕ್ತರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.