ADVERTISEMENT

ಸವಣೂರು ನಗರಸಭೆಯಾಗಿ ಮೇಲ್ದರ್ಜೆಗೆ ಏರಿಸಿ: ಶಾಸಕ ಪಠಾಣ್

ಹುಲಗೂರ, ತಡಸ ಪಟ್ಟಣ ಪಂಚಾಯಿತಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2025, 2:06 IST
Last Updated 18 ಡಿಸೆಂಬರ್ 2025, 2:06 IST
ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆದ ಚಳಿಗಾಲ ಅಧಿವೇಶನದಲ್ಲಿ ಶಿಗ್ಗಾವಿ-ಸವಣೂರು ಶಾಸಕ ಯಾಸೀರ ಅಹ್ಮದಖಾನ ಪಠಾಣ ಮಾತನಾಡಿದರು.
ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆದ ಚಳಿಗಾಲ ಅಧಿವೇಶನದಲ್ಲಿ ಶಿಗ್ಗಾವಿ-ಸವಣೂರು ಶಾಸಕ ಯಾಸೀರ ಅಹ್ಮದಖಾನ ಪಠಾಣ ಮಾತನಾಡಿದರು.   

ಸವಣೂರು: ಸವಣೂರು ಪುರಸಭೆಯನ್ನು ನಗರಸಭೆಯನ್ನಾಗಿ, ಹುಲಗೂರ ಮತ್ತು ತಡಸ ಗ್ರಾಮ ಪಂಚಾಯಿತಿಗಳನ್ನು ಪಟ್ಟಣ ಪಂಚಾಯತಿಗಳನ್ನಾಗಿ ಮೇಲ್ದರ್ಜೆಗೇರಿಸಬೇಕು ಎಂದು ಶಾಸಕ ಯಾಸೀರ್ ಅಹ್ಮದಖಾನ ಪಠಾಣ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

‌ಬೆಳಗಾವಿಯಲ್ಲಿ ನಡೆದ ಚಳಿಗಾಲ ಅಧೀವೇಶನದಲ್ಲಿ ಮಾತನಾಡಿದ ಅವರು, ಉಪಚುನಾವಣೆಯಲ್ಲಿ ನೀಡಿದ ಭರವಸೆಯಂತೆ, ಕಳೆದ ಅಧಿವೇಶನದಲ್ಲಿ ಶಿಗ್ಗಾವಿ-ಸವಣೂರು ಬಂಕಾಪುರ ಕುಡಿಯುವ ನೀರಿನ ತೊಂದರೆಯನ್ನು ಮನವರಿಕೆ ಮಾಡಿಲಾಗಿತ್ತು. ರಾಜ್ಯದ ಮುಖ್ಯಮಂತ್ರಿಗಳು ಮೂರು ಪಟ್ಟಣಗಳ ಕುಡಿಯುವ ನೀರಿನ ಯೋಜನೆಗೆ ₹ 351 ಕೋಟಿ ಅನುದಾನ ಹಾಗೂ ವಿವಿಧ ಬೇಡಿಕೆ ಕಲ್ಪಿಸಿ್ದಕ್ಕಾಗಿ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದರು.

ಅತಿ ಶೀಘ್ರದಲ್ಲಿ ಮೂರು ಪಟ್ಟಣಗಳ ಕುಡಿಯುವ ನೀರಿನ ಯೋಜನೆ ಕಾಮಗಾರಿ ಪ್ರಾರಂಭವಾಗಲಿದೆ. ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಶಿಥಿಲಾವ್ಯಸ್ಥೆಯಲ್ಲಿ ಇರುವದರಿಂದ ನೂತನ ಕಟ್ಟಡ ನಿರ್ಮಾಣಕ್ಕಾಗಿ ಬೇಡಿಕೆ ಸಲ್ಲಿಸಲಾಗಿತ್ತು.

ADVERTISEMENT

ಶಿಗ್ಗಾವಿ-ಸವಣೂರ ವಿಧಾನಸಭಾ ಕ್ಷೇತ್ರದಲ್ಲಿ ವಾಸಿಸುತ್ತಿರುವ ಸುಮಾರು 20 ಸಾವಿಕ್ಕಿಂತಲೂ ಹೆಚ್ಚಿನ ಜನರ ಮನೆಗಳ ಪಟ್ಟಾ ಇರಲಿಲ್ಲ. ಕಂದಾಯ ಸಚಿವರಾದ ಕೃಷ್ಣ ಭೈರೇಗೌಡ ಅವರು ತಂದ ಯೋಜನೆ ವಾಸಿಸುವವನೇ ಮನೆಯ ಒಡೆಯ ಎಂಬ ಯೋಜನೆಯಿಂದ ₹ 20 ಸಾವಿರ ಕುಟುಂಬಗಳಿಗೆ ಪಟ್ಟಾ ದೊರಕುವಂತಾಗಿದೆ. ಈಗಾಗಲೇ 6 ಸಾವಿರ ಮನೆಗಳ ಪಟ್ಟಾ ತಯಾರಾಗಿದ್ದು, ಮುಂಬರುವ ದಿನಗಳಲ್ಲಿ ಸಂಪೂರ್ಣ ಪಟ್ಟಾ ತಯಾರಿಸಿ ವಿತರಣೆ ಮಾಡಲಾಗುವುದು.

ವರದಾ-ಬೆಡ್ತಿ ನದಿ ಸಮುದ್ರ ಸೇರುವ ಬದಲಾಗಿ ಇಲ್ಲಿನ ಈ ಎರಡು ನದಿ ಜೋಡಣೆಯಿಂದ ಹಾವೇರಿ, ಗದಗ, ಹುಬ್ಬಳ್ಳಿ-ಧಾರವಾಡ ಜನರಿಗೆ ಕುಡಿಯುವ ನೀರಿನ ಜೊತೆಗೆ ಕೃಷಿ ಪ್ರಗತಿಗೆ ಸಹಕಾರಿಯಾಗಲಿದೆ. ಆದ್ದರಿಂದ, ಉತ್ತರ ಕನ್ನಡ ಜಿಲ್ಲೆಯ ಶಾಸಕರು ಹಾಗೂ ಸಚಿವರು ಸಹಕರಿಸಬೇಕು ಎಂದು ಮನವಿ ಮಾಡಿದರು.

ಶಿಗ್ಗಾವಿ-ಸವಣೂರು ವಿಧಾನಸಭಾ ಕ್ಷೇತ್ರದಲ್ಲಿ ಬಹಳಷ್ಟು ದೊಡ್ಡ ಜನರು ಪ್ರತಿನಿಧಿಸಿದರು ಕೂಡಾ ಹಿಂದುಳಿದ ಕ್ಷೇತ್ರವಾಗಿದೆ. ಆದ್ದರಿಂದ, ಸವಣೂರು ಏತ ನೀರಾವರಿ ಯೋಜನೆಯನ್ನು ಬಹುಬೇಗನೆ ಪ್ರಾರಂಭಿಸಲು ಅನೂಕೂಲ ಕಲ್ಪಿಸಲು ಉಪ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಯಿತು.

18ನೇ ಶತಮಾನದ ದಾರ್ಶನಿಕರಾದ ಶಿಶುವಿನಹಾಳ ಶರೀಫರು ನಮ್ಮ ಸಮಾಜದಲ್ಲಿ ಸಮಾನತೆ ಸಾರಿದ ಮಹಾಪುರುಷರಾಗಿದ್ದಾರೆ. ಆದ್ದರಿಂದ, ಶಿಶುನಾಳ ಶರೀಫರ ಪ್ರಾಧಿಕಾರ ರಚನೆ ಮಾಡಿ ಕ್ಷೇತ್ರದ ಅಭಿವೃದ್ಧಿಗೆ ಸಹಕರಿಸಬೇಕೆಂದು ಮುಖ್ಯ ಮಂತ್ರಿಗಳಿಗೆ ಮನವಿ ಮಾಡಿದರು.

ಹಾವೇರಿ ಜಿಲ್ಲೆಯಲ್ಲಿ ಸಾಕಷ್ಟು ಕಾರ್ಮಿಕರು ತೊಂದರೆಗೆ ಒಳಗಾಗಿದ್ದಾರೆ. ಆದ್ದರಿಂದ, ಒಂದು ಪೈಲೆಟ್ ಯೋಜನೆಯನ್ನು ರೂಪಿಸಿ ಕಾರ್ಮಿಕರ ಸಮಸ್ಯೆಯನ್ನು ಪರಿಹರಿಸಬೇಕು. ಕ್ಷೇತ್ರಕ್ಕೆ ಬೃಹತ್ ಉದ್ಯಮಗಳನ್ನು ಒದಗಿಸಬೇಕು. ಪೌರ ಕಾರ್ಮಿಕರ, ಶಿಕ್ಷಕರ, ಆಶಾ, ಅಂಗನವಾಡಿ, ಎನ್‍ಆರ್‌ಎಲ್‍ಎಂ ಕಾರ್ಯಕರ್ತರಿಗೆ ಸೇವಾ ಭದ್ರತೆ ಒದಗಿಸಬೇಕು ಎಂದು ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.