ADVERTISEMENT

‘ಕೈ ತುತ್ತಿನ ಋಣ ಮರೆಯಬೇಡಿ’

ಬೀಳ್ಕೊಡುಗೆ ಸಮಾರಂಭ: ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ ಸಲಹೆ

​ಪ್ರಜಾವಾಣಿ ವಾರ್ತೆ
Published 11 ಜನವರಿ 2020, 15:46 IST
Last Updated 11 ಜನವರಿ 2020, 15:46 IST
ಹಾವೇರಿಯ ಎಸ್‌.ಜೆ.ಎಂ. ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಬಸವಶಾಂತಲಿಂಗ ಸ್ವಾಮೀಜಿ ಇದ್ದಾರೆ 
ಹಾವೇರಿಯ ಎಸ್‌.ಜೆ.ಎಂ. ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಬಸವಶಾಂತಲಿಂಗ ಸ್ವಾಮೀಜಿ ಇದ್ದಾರೆ    

ಹಾವೇರಿ: ‘ನಿಮ್ಮನ್ನು ಹೆತ್ತು–ಹೊತ್ತು ಸಾಕಿ ಸಲಹಿದ ತಂದೆ–ತಾಯಂದಿರ ಋಣವನ್ನು ಎಂದಿಗೂ ಮರೆಯಬೇಡಿ’ ಎಂದು ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ ಅವರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ನಗರದ ಎಸ್‌ಜೆಎಂ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ 2019–20ನೇ ಸಾಲಿನ ವಾರ್ಷಿಕೋತ್ಸವ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಮುಕ್ತಾಯ ಸಮಾರಂಭ ಹಾಗೂ ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಸಾನ್ನಿಧ್ಯ ವಹಿಸಿ ಮಾತನಾಡಿದರು.

‘ನೀವು ಉನ್ನತ ಶಿಕ್ಷಣ ಪಡೆದು, ಒಳ್ಳೆಯ ಉದ್ಯೋಗ ಪಡೆದ ಹಿಂದೆ ನಿಮ್ಮ ಪೋಷಕರ ಪರಿಶ್ರಮ ಅಡಗಿರುತ್ತದೆ. ಆಸ್ತಿ ಮಾಡುವುದಕ್ಕಿಂತ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿರುತ್ತಾರೆ. ಆದರೆ, ನೀವು ಕಡೆಗಾಲದಲ್ಲಿ ಅವರನ್ನು ಕೈಬಿಡಬೇಡಿ’ ಎಂದು ತಿಳಿ ಹೇಳಿದರು.

ADVERTISEMENT

ಪಿಯುಸಿ ಶೈಕ್ಷಣಿಕವಾಗಿಯಷ್ಟೇ ಅಲ್ಲ, ಜೀವನದಲ್ಲೂ ಪ್ರಮುಖ ಘಟ್ಟ. ಈ ಘಟ್ಟದಲ್ಲಿ ಗಟ್ಟಿತನದ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು. ವಿದ್ಯೆಯ ಜತೆಗೆ ವಿವೇಕ ಮೈಗೂಡಿಸಿಕೊಳ್ಳಬೇಕು. ಸಮಸ್ಯೆಗಳ ನಡುವೆಯೇ ಯಶಸ್ಸನ್ನು ಸಾಧಿಸುವುದು ಹೇಗೆ ಎಂಬುದನ್ನು ಒಂದು ಚಿಕ್ಕ ಕತೆಯ ಮೂಲಕ ಮನದಟ್ಟು ಮಾಡಿಕೊಟ್ಟರು.

ಏಕಾಗ್ರತೆ ಕಸಿಯುವ ಮೊಬೈಲ್‌, ಟಿಕ್‌ಟಾಕ್‌ಗಳಂಥ ವ್ಯಸನಗಳಿಂದ ದೂರವಿರಿ. ನಿಮ್ಮ ಗುರಿಯ ಕಡೆಗೆ ಗಮನ ಕೊಡಿ. ಮುರುಘಾಶ್ರೀ ಬೆಳೆಸಿದ ಈ ಹೆಮ್ಮರ (ವಿದ್ಯಾಸಂಸ್ಥೆ)ದಲ್ಲಿ ಹಲವು ವಿದ್ಯಾರ್ಥಿಗಳು ಉಜ್ವಲ ಭವಿಷ್ಯ ಪಡೆದಿದ್ದಾರೆ. ನಿಮ್ಮ ಬಾಳೂ ಬೆಳಗಲಿ ಎಂದು ಹಾರೈಸಿದರು.

ಡಯಟ್‌ ಪ್ರಾಚಾರ್ಯ ಜಿ.ಎಂ. ಬಸವಲಿಂಗಪ್ಪ, ಸ್ಥಳೀಯ ಆಡಳಿತ ಸಲಹಾ ಸಮಿತಿ ಸದಸ್ಯ ರಾಜೇಂದ್ರ ಸಜ್ಜನ, ಪ್ರಾಂಶುಪಾಲ ಪಿ.ಬಿ. ವಿಜಯಕುಮಾರ ಹಾಗೂ ವಿದ್ಯಾರ್ಥಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.