ಬಂಧನ ( ಸಾಂಕೇತಿಕ ಚಿತ್ರ)
ಹಾವೇರಿ: ಜಿಲ್ಲೆಯ ಹಾನಗಲ್ ತಾಲ್ಲೂಕಿನ ಕೊಪ್ಪರಸಿಕೊಪ್ಪ ಗ್ರಾಮದಲ್ಲಿ ಪ್ರಕಾಶ ಲಕ್ಷ್ಮಣ ಓಲೇಕಾರ (40) ಅವರನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಥಳಿಸಿ ಕೊಲೆ ಮಾಡಿರುವ ಆರೋಪದಡಿ ಏಳು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕೊಪ್ಪರಸಿಕೊಪ್ಪ ಗ್ರಾಮದ ಗದಿಗೆಪ್ಪ ಫಕ್ಕೀರಪ್ಪ ಓಲೇಕಾರ, ಸುಭಾಷ್ ಹನುಮಂತಪ್ಪ ಓಲೇಕಾರ, ಬಸವರಾಜ ಹನುಮಂತಪ್ಪ ಓಲೇಕಾರ, ಪರಶುರಾಮ ಬಸಪ್ಪ ಓಲೇಕಾರ , ಪ್ರಕಾಶ ಹನುಮಂತಪ್ಪ ಓಲೇಕಾರ, ಪುಷ್ಪಾ ಬಸಪ್ಪ ಓಲೇಕಾರ, ಗಿರಿಜಮ್ಮ ಗದಿಗೆಪ್ಪ ಓಲೇಕಾರ, ಅಣ್ಣಪ್ಪ ಬಸಪ್ಪ ಓಲೇಕಾರ, ಆಕಾಶ ಬಸಪ್ಪ ಓಲೇಕಾರ ಬಂಧಿತರು.
‘ಮಹಿಳೆಯೊಬ್ಬರ ಜೊತೆ ಸಲುಗೆ ಇಟ್ಟುಕೊಂಡಿದ್ದಾರೆಂಬ ಕಾರಣಕ್ಕೆ ಪ್ರಕಾಶ್ ಓಲೇಕಾರ್ ಅವರನ್ನು ಗುರುವಾರ ಕಂಬಕ್ಕೆ ಕಟ್ಟಿ ಆರೋಪಿಗಳು ಥಳಿಸಿದ್ದರು. ಕೊರಳಲ್ಲಿ ಚಪ್ಪಲಿ ಹಾರ ಹಾಕಿ ಅವಮಾನ ಮಾಡಿದ್ದರು. ಪ್ರಕಾಶ್ ಸುತ್ತಲೂ ಬೆಂಕಿ ಹಚ್ಚಿ ಕೊಲೆಗೂ ಯತ್ನಿಸಿದ್ದರು. ತೀವ್ರ ಗಾಯಗೊಂಡಿದ್ದ ಪ್ರಕಾಶ್ ಅವರನ್ನು ರಕ್ಷಿಸಿದ್ದ ಪೊಲೀಸರು, ತಾಲ್ಲೂಕು ಆಸ್ಪತ್ರೆಗೆ ಕರೆದೊಯ್ದಿದ್ದರು. ಪ್ರಕಾಶ್ ಮೃತಪಟ್ಟಿರುವುದಾಗಿ ವೈದ್ಯರು ಹೇಳಿದರು’ ಎಂದು ಪೊಲೀಸರು ಮಾಹಿತಿ ನೀಡಿದರು.
‘ಪ್ರಕಾಶ್ ಅವರ ಸಹೋದರ ಫಕ್ಕೀರಪ್ಪ ಹಾಗೂ ಮಹಿಳೆ ಜಯಾ ಮೇಲೆಯೂ ಆರೋಪಿಗಳು ಹಲ್ಲೆ ಮಾಡಿದ್ದರು. ಅವರಿಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಫಕ್ಕೀರಪ್ಪ ನೀಡಿರುವ ದೂರು ಆಧರಿಸಿ 8 ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.