ADVERTISEMENT

KGF2 ಸಿನಿಮಾ ವೀಕ್ಷಣೆ ವೇಳೆ ಶೂಟೌಟ್ ಮಾಡಿದವನ ಹೆಡೆಮುರಿ ಕಟ್ಟಿದ ಹಾವೇರಿ ಪೊಲೀಸ್

​ಪ್ರಜಾವಾಣಿ ವಾರ್ತೆ
Published 19 ಮೇ 2022, 12:51 IST
Last Updated 19 ಮೇ 2022, 12:51 IST
ಆರೋಪಿ ಶಿಗ್ಗಾವಿಯ ಮಂಜುನಾಥ ಪಾಟೀಲ
ಆರೋಪಿ ಶಿಗ್ಗಾವಿಯ ಮಂಜುನಾಥ ಪಾಟೀಲ   

ಹಾವೇರಿ: ಕಳೆದ ಏಪ್ರಿಲ್ 19 ರಂದು ಹಾವೇರಿ ಜಿಲ್ಲೆಯ ಶಿಗ್ಗಾವಿ ಪಟ್ಟಣದ ರಾಜಶ್ರೀ ಚಿತ್ರಮಂದಿರದಲ್ಲಿ ಯುವಕನೊಬ್ಬನ ಮೇಲೆ ಶೂಟೌಟ್ ಮಾಡಿ ಪರಾರಿಯಾಗಿದ್ದವನನ್ನು ಹಾವೇರಿ ಜಿಲ್ಲಾ ಪೊಲೀಸರು ಅಂತೂ ಹೆಡೆಮುರಿಕಟ್ಟಿದ್ದಾರೆ.

ಬಂಧಿತನನ್ನು ಶಿಗ್ಗಾವಿ ಧಖನಿ ಓಣಿಯ ಮಂಜುನಾಥ್ ಶಾಂತಪ್ಪ ಪಾಟೀಲ ಎಂದು ಗುರುತಿಸಲಾಗಿದೆ.ಗುರುವಾರ ನಡೆದ ಸುದ್ದಿಗೋಷ್ಟಿಯಲ್ಲಿ ಎಸ್‌ಪಿ ಹನುಮಂತರಾಯ ಈ ಮಾಹಿತಿ ತಿಳಿಸಿದರು.

ಶಿಗ್ಗಾವಿ ತಾಲೂಕಿನ ಮುಗಳಿ ಗ್ರಾಮದ ವಸಂತಕುಮಾರ ಶಿವಪುರ ಹಾಗೂ ಆತನ ನಾಲ್ವರು ಸ್ನೇಹಿತರು ಏ.19 ರಂದು ರಾತ್ರಿ 9ಕ್ಕೆ ರಾಜಶ್ರೀ ಚಿತ್ರಮಂದಿರಕ್ಕೆ ಕೆಜಿಎಫ್ 2 ಸಿನಿಮಾ ನೋಡಲು ತೆರಳಿದ್ದರು. ಮಧ್ಯಂತರದಲ್ಲಿ ಆರೋಪಿ ಮಂಜುನಾಥ್ ಪಾಟೀಲ ಕ್ಷುಲ್ಲಕ ವಿಷಯವಾಗಿ ವಸಂತಕುಮಾರ ಶಿವಪುರ ಮೇಲೆಕಂಟ್ರಿಮೇಡ್‌ ಪಿಸ್ತೂಲಿನಿಂದ ಐದು ಸುತ್ತು ಗುಂಡು ಹಾರಿಸಿದ್ದ. ಇದರಿಂದ ವಸಂತಕುಮಾರ ಗಂಭೀರವಾಗಿ ಗಾಯಗೊಂಡು ಹುಬ್ಬಳ್ಳಿಯ ಕೀಮ್ಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರು.

ADVERTISEMENT

‘ಆರೋಪಿ ಮಂಜುನಾಥ ಪಾಟೀಲನನ್ನು ಪ್ರಕರಣದ ಸಂಬಂಧ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡದ ಬಸ್ ನಿಲ್ದಾಣದ ಬಳಿ ಮೇ 19 ರಂದು ಬೆಳಿಗ್ಗೆ ಬಂಧಿಸಲಾಗಿದೆ. ಬಂಧಿತನಿಂದ ಒಂದು ಪಿಸ್ತೂಲು ಹಾಗೂ 15 ಜೀವಂತ ಗುಂಡುಗಳನ್ನು, 2 ಖಾಲಿ ಕೋಕಾ, ಒಂದು ಸ್ಕೂಟರ್, ಒಂದು ಮೊಬೈಲ್ ವಶಪಡಿಸಿಕೊಂಂಡು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ’ ಎಂದು ಎಸ್‌ಪಿ ಹನುಮಂತರಾಯ ತಿಳಿಸಿದ್ದಾರೆ.

‘ಆರೋಪಿ ಘಟನೆ ನಡೆದ ದಿನದಿಂದ ನಾಪತ್ತೆಯಾಗಿ ಪೊಲೀಸರ ದಾರಿ ತಪ್ಪಿಸುತ್ತಿದ್ದ.ದಾಂಡೇಲಿ, ಮುಂಡಗೋಡ, ಗೋವಾ, ಮಹಾರಾಷ್ಟ್ರ, ಬಾಂಬೆ ಮುಂತಾದ ಕಡೆ ಓಡಾಡಿದ್ದಾನೆ.ಈತನಿಗೆ ಆಶ್ರಯ ಮತ್ತು ಸಹಕಾರ ನೀಡಿದ ಬಂಕಾಪುರದ ಇಸ್ಮಾಯಿಲ್‌ ಎಂಬಾತನನ್ನು ಬಂಧಿಸಲಾಗಿದೆ’ ಎಂದು ಹಾವೇರಿ ಎಸ್‌ಪಿ ತಿಳಿಸಿದ್ದಾರೆ.

ಬಂಧಿತ ಆರೋಪಿ ಮಂಜುನಾಥ ಪಾಟೀಲನಿಂದ ವಶಪಡಿಸಿಕೊಳ್ಳಲಾದ ಸಲಕರಣೆಗಳು

ಕಂಟ್ರಿಮೇಡ್‌ ಪಿಸ್ತೂಲ್‌

‘ಪರವಾನಗಿ ಇಲ್ಲದೆ ಅಕ್ರಮವಾಗಿ ಕಂಟ್ರಿಮೇಡ್‌ ಪಿಸ್ತೂಲ್‌ ಅನ್ನು ಆರೋಪಿ ಇಟ್ಟುಕೊಂಡಿದ್ದ. ಈ ಪಿಸ್ತೂಲ್‌ ಎಲ್ಲಿಂದ ಬಂತು? ಹೇಗೆ ಬಂತು? ಯಾವ ಉದ್ಧೇಶಕ್ಕೆ ಇಟ್ಟುಕೊಂಡಿದ್ದ ಎಂಬುದು ತನಿಖೆಯಿಂದ ಗೊತ್ತಾಗಬೇಕಿದೆ. ಸಾರ್ವಜನಿಕರು ಅಕ್ರಮವಾಗಿ ಆಯುಧಗಳನ್ನು ಇಟ್ಟುಕೊಳ್ಳಬಾರದು. ಲೈಸೆನ್ಸ್‌ ರಹಿತ ಆಯುದ್ಧಗಳಿದ್ದರೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ’
– ಹನುಮಂತರಾಯ, ಎಸ್ಪಿ

ಮುಂಬೈ ಲಾಡ್ಜ್‌ನಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ

ಮಂಜುನಾಥ ಪಾಟೀಲ ಪೊಲೀಸರಿಂದ ತಲೆಮರೆಸಿಕೊಂಡು ಕೆಲದಿನ ಗೋವಾ ಮಹಾರಾಷ್ಟ್ರದಲ್ಲಿ ಅಲೆದಾಡಿ, ನವೀ ಮುಂಬೈನ ಕಿಂಗ್‌ಸ್ಟಾರ್ ಹೋಟೆಲ್ ಮತ್ತು ಲಾಡ್ಜ್‌ನಲ್ಲಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಮೊಬೈಲ್ ಸಿಗ್ನಲ್ ಆಧಾರ ಮೇಲೆ ಆತನನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

ಆಸ್ಪತ್ರೆಯಿಂದ ಗಾಯಾಳು ಬಿಡುಗಡೆ

ಮೂರು ಗುಂಡೇಟು ತಿಂದು ಗಂಭೀರವಾಗಿ ಗಾಯಗೊಂಡಿದ್ದ ವಸಂತ ಶಿವಪುರ ಹುಬ್ಬಳ್ಳಿ ಕೀಮ್ಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಸುಮಾರು 20ಕ್ಕೂ ಹೆಚ್ಚು ದಿನ ಚಿಕಿತ್ಸೆ ಪಡೆದುಕೊಂಡು ಕಳೆದ ಮೇ 13 ರಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.