
ಶಿಗ್ಗಾವಿ: ‘ನಾಡು, ನುಡಿ ಸೇವೆ ಮಾಡಿ ಜನ್ಮ ನೀಡಿದ ನೆಲದ, ಸಮಾಜ, ನಾಡಿನ ಋಣ ತೀರಿಸುವ ಕಾರ್ಯ ನಮ್ಮದಾಗಬೇಕು’ ಎಂದು ವಿರಕ್ತಮಠದ ಸಂಗನಬಸವ ಸ್ವಾಮೀಜಿ ಹೇಳಿದರು.
ಪಟ್ಟಣದ ಸಂಸ್ಕೃತಿ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಎಂಪಿಎಂ ಶಿಕ್ಷಣ ಸಂಸ್ಥೆ ಸಹಯೋಗದಲ್ಲಿ ದಿ. ಹನುಮಂತಗೌಡ್ರ ಪಾಟೀಲ ಹಾಗೂ ದಿ. ಗುರುಶಾಂತಪ್ಪ ಲಕ್ಷ್ಮೇಶ್ವರ ಇವರ ಸ್ಮರಣಾರ್ಥ ಹಮ್ಮಿಕೊಂಡಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾನಿಪ ತಾಲ್ಲೂಕು ಘಟಕದ ಅಧ್ಯಕ್ಷ ವಿಶ್ವನಾಥ ಬಂಡಿವಡ್ಡರ ಮಾತನಾಡಿ, ‘ಮಣ್ಣಿನ ಸೊಗಡನ್ನು ಹಂಚುವ ಮೂಲಕ ಕನ್ನಡದ ಅಭಿಮಾನವನ್ನು ಪ್ರೇರೇಪಿಸುವ ಕಾರ್ಯವನ್ನು ದತ್ತಿ ಕಾರ್ಯಕ್ರಮದಿಂದ ಕಸಾಪ ಮಾಡುತ್ತಿದೆ. ಜತೆಗೆ ಸ್ಥಳೀಯ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುತ್ತಿದೆ’ ಎಂದರು.
ಸರ್ಕಾರಿ ಪ್ರೌಢ ಶಾಲೆ ಮುಖ್ಯ ಶಿಕ್ಷಕಿ ವಿನೋದ ಪಾಟೀಲ ಮಾತನಾಡಿ, ‘ಗಳಿಸಿದ ಸಂಪತ್ತಿನಲ್ಲಿ ದತ್ತಿಗಳನ್ನು ಇಡುವ ಮೂಲಕ ಕನ್ನಡ ನಾಡು ನುಡಿಯ ಸೇವೆಗೆ ಮುಂದಾಗಿರುವ ಪಾಟೀಲ ಮತ್ತು ಲಕ್ಷ್ಮಿ ಈಶ್ವರ ಕುಟುಂಬಗಳು ಇಂದಿನ ಸಮಾಜಕ್ಕೆ ಮಾದರಿಯಾಗಿವೆ. ಸಂತ, ಶರಣರ ನಾಡು, ಸರ್ವಧರ್ಮದ ಸಮನ್ವಯದ ಭೂಮಿಯಲ್ಲಿ ನಾವು ಇದ್ದೇವೆ, ಅದು ನಮ್ಮ ಹೆಮ್ಮೆ, ಪ್ರಾಚೀನ ಭಾಷೆಗಳಲ್ಲಿ ಕನ್ನಡ ಭಾಷೆ ಮೂರನೇ ಭಾಷೆಯಾಗಿದೆ. ಇಂದಿನ ಕಾನೂನುಗಳಲ್ಲಿನ ವಿಷಯಗಳನ್ನು ವಚನಗಳ ಮೂಲಕ 12 ನೇ ಶತಮಾನದಲ್ಲಿಯೇ ಶರಣರು ಸಾರಿದ್ದಾರೆ. ಆಡು ಮುಟ್ಟದ ಸೊಪ್ಪಿಲ್ಲ, ಸಾಹಿತ್ಯ ಮುಟ್ಟದ ಕ್ಷೇತ್ರವೇ ಇಲ್ಲ, ಸಾಮಾಜಿಕ ಶಾಂತಿ ಈ ಕನ್ನಡ ಸಾಹಿತ್ಯದಲ್ಲಿ ಅಡಗಿದೆ, ಆತ್ಮೀಯತೆಯನ್ನ ಬೆಸೆಯುವಲ್ಲಿ ನಮ್ಮ ಕನ್ನಡ ಭಾಷೆ ಪ್ರಮುಖ ಪಾತ್ರವಹಿಸಿದೆ, ಪಾಶ್ಚಾತ್ಯ ಸಂಸ್ಕೃತಿಯ ಭರಾಟೆಯಲ್ಲಿ ನೆಲ, ಜಲ, ನುಡಿಯನ್ನು ಕಾಪಾಡುವ ಕೆಲಸವನ್ನ ಈ ಸಾಹಿತ್ಯ ಪರಿಷತ್ತು ಮಾಡುತ್ತಿದೆ ಎಂದರು.
ಕ.ಸಾ.ಪ ಶಹರ ಘಟಕದ ಅಧ್ಯಕ್ಷೆ ಲಲಿತಾ ಹಿರೇಮಠ, ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ನಾಗಪ್ಪ ಬೆಂತೂರ, ಎಂಪಿಎಂ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಕಾರ್ಯದರ್ಶಿ ದೇವರಾಜ ಸುಣಗಾರ ಮಾತನಾಡಿದರು. ನಿಖಿತಾ ಕಂಕಣವಾಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಂಪಿಎಂ ಶಿಕ್ಷಣ ಸಂಸ್ಥೆ ಅಧ್ಯಕ್ಷ ಮಂಜುನಾಥ ಮೊರಬದ, ದತ್ತಿ ದಾನಿಗಳ ಕುಟುಂಬದ ಸುಶೀಲಕ್ಕ ಪಾಟೀಲ, ಐಶ್ವರ್ಯ ಲಕ್ಷ್ಮೇಶ್ವರ, ಮುಖ್ಯ ಶಿಕ್ಷಕಿ ಅನಿತಾ ಹಿರೇಮಠ, ಬಸವರಾಜ ಹೆಸರೂರ, ಎಂ.ಎಂ. ದೇವಕ್ಕಿಗೌಡ್ರ, ಶಂಭು ಕೇರಿ, ಸ್ವಪ್ನಾ ಪಠ್ಯೆದ, ಶಿಕ್ಷಕಿ ಸವಿತಾ ಗೌರಿಮಠ, ಲಕ್ಷ್ಮಿ ಹಗಲೂರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.