ಶಿಗ್ಗಾವಿ: ಸಂತರು ಹಾಗೂ ದಾರ್ಶನಿಕರು ನಡೆದಾಡಿರುವ ನಾಡು ಶಿಗ್ಗಾವಿ. ಇತಿಹಾಸದ ಪುಟಗಳನ್ನು ತೆರೆದು ನೋಡಿದಾಗ, ಹಿಂದೂ ಹಾಗೂ ಮುಸ್ಲಿಂರ ಸಹೋದರತ್ವದ ಭಾವ್ಯಕ್ಯ ಕಣ್ಮುಂದೆ ಬರುತ್ತದೆ. ಶಿಗ್ಗಾವಿ ಪಟ್ಟಣ ಹಾಗೂ ತಾಲ್ಲೂಕಿನಲ್ಲಿರುವ ಹಲವು ಗ್ರಾಮಗಳು, ಇಂದಿಗೂ ಭಾವ್ಯಕ್ಯದ ಸ್ಥಳಗಳಾಗಿ ಸಮಾಜಕ್ಕೆ ಮಾದರಿಯಾಗಿವೆ. ಇಂಥ ಊರುಗಳಲ್ಲಿ, ಹುಲಗೂರು ಗ್ರಾಮವೂ ಒಂದು.
ತಾಲ್ಲೂಕು ಕೇಂದ್ರದಿಂದ 15 ಕಿ.ಮೀ. ದೂರದಲ್ಲಿರುವ ಹುಲಗೂರು, ಗುರುಗೋವಿಂದಭಟ್ಟರು–ಶಿಶುನಾಳ ಷರೀಪರ ಊರಿನಿಂದ 7 ಕಿ.ಮೀ. ಅಂತರದಲ್ಲಿದೆ. ಹುಲಗೂರಿನಲ್ಲಿರುವ ಸೈಯದ್ ಹಜರತ್ ಷಾ ಖಾದ್ರಿ ದರ್ಗಾ ಹಾಗೂ ಪ್ರಾಚೀನ ಕಾಲದ ಕಲ್ಮೇಶ್ವರ ದೇವಸ್ಥಾನಗಳು, ಜನರ ಆರಾಧನಾ ಸ್ಥಳಗಳಾಗಿವೆ.
ಆಧುನಿಕ ಜಗತ್ತಿನಲ್ಲಿ ನಗರಗಳು ಬೆಳೆದಂತೆ ಹಲವು ಕಡೆಗಳಲ್ಲಿ ಕೋಮು ಸೌಹಾರ್ದಕ್ಕೆ ಧಕ್ಕೆ ತರುವ ಕೆಲಸಗಳಾಗುತ್ತಿವೆ. ಇಂಥ ಪ್ರಯತ್ನಗಳನ್ನು ಮೆಟ್ಟಿ ನಿಲ್ಲುವ ರೀತಿಯಲ್ಲಿ ಹುಲಗೂರು ಬೆಳೆಯುತ್ತಿದೆ. ಹಿಂದೂ ಹಾಗೂ ಮುಸ್ಲಿಂ ಸಮುದಾಯದ ಜನರು, ಹಬ್ಬ–ಹರಿದಿನಗಳನ್ನು ಒಟ್ಟಾಗಿ ಮಾಡುತ್ತಿದ್ದಾರೆ. ಸಂತರು–ದಾರ್ಶನಿಕರು ಓಡಾಡಿರುವ ಈ ನೆಲದಲ್ಲಿ ಭಾವ್ಯಕ್ಯದ ಹೆಜ್ಜೆ ಗುರುತುಗಳು ಕಾಣಸಿಗುತ್ತವೆ.
ಹುಲ್ಲುಗಾವಲಿನಿಂದ ಕೂಡಿದ್ದ ಈ ಗ್ರಾಮಕ್ಕೆ ಪುಲಗೂರು ಹಾಗೂ ಪುಲ್ಲಂಗೂರ ಎಂಬ ಹೆಸರಿತ್ತು. ಕಾಲಾಂತರದಿಂದ ಹುಲಗೂರು ಎಂಬ ನಾಮಕರಣ ಪಡೆಯಿತು. ರಾಷ್ಟ್ರಕೂಟರ ಕಾಲದ ಸುಮಾರು 17 ಶಾಸನಗಳು ಈ ಗ್ರಾಮದಲ್ಲಿ ಕಂಡುಬಂದಿವೆ.
ಸರ್ವಧರ್ಮದ ದರ್ಗಾ: ಗ್ರಾಮದಲ್ಲಿರುವ ಸೈಯದ್ ಹಜರತ್ ಷಾ ಖಾದ್ರಿ ದರ್ಗಾಕ್ಕೆ ನಿತ್ಯವೂ ನೂರಾರು ಭಕ್ತರು ಬಂದು ಹೋಗುತ್ತಾರೆ. ಜಿಲ್ಲೆ, ಹೊರ ಜಿಲ್ಲೆ ಹಾಗೂ ಹೊರ ರಾಜ್ಯದಲ್ಲಿಯೂ ದರ್ಗಾ ಭಕ್ತರಿದ್ದಾರೆ.
ಹಿಂದೂ ಹಾಗೂ ಮುಸ್ಲಿಂರು ಇಬ್ಬರೂ ದರ್ಗಾದ ಭಕ್ತರಾಗಿ, ದೇವರನ್ನು ಪ್ರಾರ್ಥಿಸುತ್ತಿದ್ದಾರೆ. ಇಷ್ಟಾರ್ಥಗಳ ಈಡೇರಿಕೆಗಾಗಿ ಹರಕೆ ಕಟ್ಟಿಕೊಳ್ಳುತ್ತಿದ್ದಾರೆ. ಇಷ್ಟಾರ್ಥ ಈಡೇರಿದಾಗ, ಕುಟುಂಬದ ಜೊತೆಯಲ್ಲಿ ಬಂದು ಹರಕೆ ತೀರಿಸುತ್ತಿದ್ದಾರೆ.
ಪ್ರತಿವರ್ಷವೂ ದರ್ಗಾದಲ್ಲಿ ನಡೆಯುವ ಝಂಡಾ ಕಾರ್ಯಕ್ರಮ, ಭಕ್ತರ ಸಮಾಗಮನಕ್ಕೆ ಸಾಕ್ಷಿಯಾಗುತ್ತದೆ. ಸದ್ಯ ಹೆಸ್ಕಾಂನ ಅಧ್ಯಕ್ಷರಾಗಿರುವ ಸೈಯದ್ ಅಜ್ಜಂಪೀರ ಖಾದ್ರಿ ಹಾಗೂ ಅವರ ವಂಶಸ್ಥರೇ, ಈ ದರ್ಗಾದ ಧರ್ಮಗುರುಗಳಾಗಿದ್ದಾರೆ.
ಹುಲಗೂರಿನ ಹಳ್ಳಿಕಟ್ಟಿ ಹೊಲದಲ್ಲಿ ಕಲ್ಯಾಣ ಚಾಲುಕ್ಯರ ಶೈಲಿಯ ಈಶ್ವರಲಿಂಗವಿದೆ. ಎದುರಿಗೆ ನಂದಿ ಶಿಲ್ಪವಿದೆ. ಅರಳಿಮರದ ಬುಡದಲ್ಲಿ ಪ್ರಾಚೀನ ಶಿಲ್ಪಗಳಿವೆ. ಉಪ್ಪಾರ ಹೊಲದಲ್ಲಿ ಕಲ್ಮಠ ದೇವಾಲಯವಿದ್ದು, ಅದು ಶಿಥಿಲಾವಸ್ಥೆಯಲ್ಲಿದೆ. ಕಲ್ಮಠದಲ್ಲಿ ಪಾಳು ಬಿದ್ದಿರುವ ಮಂಟಪವಿದೆ. ಈ ಊರಿನಲ್ಲಿ ಒಮ್ಮೆ ಸುತ್ತಾಡಿದರೆ, ಭಾವೈಕ್ಯದ ಗಾಳಿ ಮನಸ್ಸಿಗೆ ಬೀಸುತ್ತದೆ.
ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನ ಹುಲಗೂರಿನಲ್ಲಿರುವ ಸೈಯದ್ ಹಜರತ್ ಷಾ ಖಾದ್ರಿ ದರ್ಗಾ
ಕಲ್ಮೇಶ್ವರ ದೇವಸ್ಥಾನ ನವೀಕರಣ
ಗ್ರಾಮದಲ್ಲಿರುವ ಕಲ್ಲೇಶ್ವರ ದೇವಸ್ಥಾನವೂ ಪ್ರಾಚೀನ ಇತಿಹಾಸ ಹೇಳುತ್ತಿದೆ. ದಂಡನಾಯಕ ದೇವಪಾಲ ಅರಸು ಪುಲ್ಲುಂಗೂರನ್ನು ಆಳುವಾಗ ಕೆರೆಗಳಿಗೆ ಜಾಗ ದಾನ ಮಾಡಿದ್ದರು. ಕಲಚೂರಿಯರ ಆಳ್ವಿಕೆಯಲ್ಲಿ ರಾಮೇಶ್ವರ ದೇವರಿಗೆ ಪೆರ್ಗಡೆ ಏಚಯ್ಯ ಮಾಯಣ ಹಾಗೂ ದಂಡನಾಯಕ ಮಾಹೇಶ್ವರರು ದಾನ ಕೊಟ್ಟಿದ್ದನ್ನು ಶಾಸನದಲ್ಲಿ ಕಾಣಬಹುದು. ವಿವಿಧ ರಾಜಮನೆತನಗಳು ತಮ್ಮ ಆಳ್ವಿಕೆಯಲ್ಲಿ ದಾನ ನೀಡಿರುವುದು ಇತಿಹಾಸದಲ್ಲಿದೆ. ಕಲ್ಮೇಶ್ವರ ದೇವಾಲಯವು ಶಿಥಿಲಾವಸ್ಥೆಯಲ್ಲಿದ್ದು ನವೀಕರಣದ ಕೆಲಸ ನಡೆದಿದೆ. ದೇವಸ್ಥಾನದಲ್ಲಿ ಅಂತರಾಳ ಮತ್ತು ಸಭಾ ಮಂಟಪಗಳ ಮಾಳಿಗೆಗಳಿವೆ. ಲಿಂಗ ನಂದಿ ಅನಂತಶಯನ ಗಣಪತಿ ಸಪ್ತಮಾತೃಕೆಯರ ಫಲಕ ಶಿಲ್ಪಗಳಿವೆ. ಅದರ ಪಕ್ಕದಲ್ಲಿ ರಾಷ್ಟ್ರಕೂಟರ ಕಾಲದ 7 ಶಾಸನಗಳಿವೆ. ಮಂಗಳ ಸೂಚಕ ಪಂಚ ಚಿಹ್ನೆಗಳನ್ನು ಬಿಡಿಸಲಾಗಿದೆ. ಬ್ರಹ್ಮನ ಗಜಲಕ್ಷ್ಮೀ ಶಿಲ್ಪಗಳೂ ಇವೆ.
ಸಂತ ಶರೀಫ ಶಿವಯೋಗಿಯವರು ನಡೆದಾಡಿದ ಪುಣ್ಯ ನೆಲವಿದು. ಭಾವೈಕ್ಯದಲ್ಲಿ ಜಗತ್ತಿಗೆ ಮಾದರಿಯಾಗುವ ಗ್ರಾಮ ನಮ್ಮದು. ದೇಶ–ವಿದೇಶದ ಜನರೂ ನಮ್ಮೂರನ್ನು ಕೊಂಡಾಡುತ್ತಿದ್ದಾರೆ.ಅಶೋಕ ದೇಸಾಯಿ, ಗ್ರಾಮಸ್ಥ
ಹುಲಗೂರು ಭಾವೈಕ್ಯದ ಬೀಡು. ಹಿಂದೂ–ಮುಸ್ಲಿಂ ಇಬ್ಬರೂ ಸೇರಿಕೊಂಡು ಪ್ರತಿಯೊಂದು ಕಾರ್ಯಕ್ರಮಗಳನ್ನು ಆಚರಿಸುತ್ತಿದ್ದೇವೆ. ಈ ನೆಲದಲ್ಲಿ ಜನಿಸಿರುವುದು ನಮ್ಮ ಪುಣ್ಯ.ಜಾಫರ್ ಭಾಗವಾನ, ಗ್ರಾಮಸ್ಥ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.