
ಶಿಗ್ಗಾವಿ: ತಾಲ್ಲೂಕಿನ ಶಿಶುವಿನಹಾಳ ಗ್ರಾಮದ ಶರೀಫಗಿರಿಯಲ್ಲಿ ಗುರುವಾರ ಸಂತ ಶರೀಫ ಶಿವಯೋಗಿಗಳ ಮತ್ತು ಗುರುಗೋವಿಂದ ಭಟ್ಟರ ರಥೋತ್ಸವ ಭಕ್ತ ಸಮೂಹದ ಜಯಘೋಷದ ನಡುವೆ ವಿಜೃಂಭಣೆಯಿಂದ ನಡೆಯಿತು.
ಸಂಜೆ 6 ಗಂಟೆಗೆ ರಥೋತ್ಸವಕ್ಕೆ ಭಕ್ತರು ವಿಶೇಷ ಪೂಜೆ ಸಲ್ಲಿಸಿದ ನಂತರ ಆರಂಭವಾಯಿತು. ಹಿಂದೂ, ಮುಸ್ಲಿ ಭಕ್ತರು ಭಾವೈಕ್ಯದಿಂದ ‘ಹರ ಹರ ಮಹಾದೇವ’ , ‘ಓಂ ನಮಃ ಶಿವಾಯ’ ಎಂದು ಜಯ ಘೋಷ ಕೂಗಿದರು. ರಥಕ್ಕೆ ಉತ್ತುತ್ತಿ, ಬಾಳೆಹಣ್ಣನ್ನು ಎಸೆದು ಭಕ್ತಿ ಸಮರ್ಪಿಸಿದರು. ಅಲ್ಲದೇ ರಥ ನಿಲ್ಲಿಸಿದ ಗುಡಿಯ ಮುಂಭಾಗದಲ್ಲಿ ಹಣ್ಣು ಎರಿಚಿ, ಕಾಯಿಗಳನ್ನು ಒಡೆದು ಹರಕೆ ಸಲ್ಲಿಸಿದರು.
ಇದಕ್ಕೂ ಮೊದಲು ಸೂಫಿಸಂತ ಪರಂಪರೆಯ ಗದ್ದುಗೆಗೆ ನಮಿಸಿ ಭಕ್ತರು ಆಶೀರ್ವಾದ ಪಡೆದರು. ಸಕ್ಕರೆ, ಭಸ್ಮ, ಅಂಗಾರ ಪ್ರಸಾದ ಪಡೆದರು. ಗುಡಿಯ ಬಳಿ ನೆರೆದಿದ್ದ ಶರಣರು, ಸಂತರು, ಸೂಫಿಗಳು, ಫಕ್ಕೀರರ ಆಶೀರ್ವಾದ ಪಡೆದರು.
ಪಲ್ಲಕ್ಕಿ ಮಹೋತ್ಸವ: ರಥೋತ್ಸವಕ್ಕೂ ಮೊದಲು ಗುರು ಗೋವಿಂದ ಭಟ್ಟರು ಹಾಗೂ ಶಿಶನಾಳ ಶರೀಫರ ಮೂರ್ತಿಗಳನ್ನು ಶಿಶುವಿನಹಾಳ ಗ್ರಾಮದಿಂದ ಶರೀಫರ ಗುಡಿಯಿಂದ ಪಲ್ಲಕ್ಕಿ ಮಹೋತ್ಸವದ ಮೂಲಕ ತರಲಾಯಿತು. ಪಲ್ಲಕ್ಕಿ ಗದ್ದುಗೆ ಪ್ರದಕ್ಷಿಣೆ ಹಾಕಿದ ಬಳಿಕ ರಥದಲ್ಲಿ ಪ್ರತಿಷ್ಠಾಪಿಸಿ ರಥವನ್ನು ಭಕ್ತರು ಎಳೆದರು.
ಕುದರೆ ಕುಣಿತ, ಡೊಳ್ಳು ಕುಣಿತ, ಮರಗಾಲು ಕುಣಿತ, ವೀರಗಾಸೆ, ಪುರವಂತರು, ಭಜನೆ, ಮುಳ್ಳಿನ ಪಾದುಕೆಗಳ ಮೇಲೆ ನಿಲ್ಲುವುದು ಸೇರಿ ವಿವಿಧ ಕಲಾವಿದರ ಸಾಮೂಹಿಕ ನೃತ್ಯ ಜನರನ್ನು ಆಕರ್ಷಿಸಿದವು.
ನಾಡಿನ ವಿವಿಧೆಡೆಯಿಂದ ಭಕ್ತ ಸಮೂಹವು ಚಕ್ಕಡಿ, ಟ್ರ್ಯಾಕ್ಟರ್‌ಗಳಲ್ಲಿ ಕುಟುಂಬ ಸಮೇತರಾಗಿ ಬಂದು, ಹರಕೆಯಾಗಿ ತಂದಿರುವ ರೊಟ್ಟಿ ಬುತ್ತಿಯನ್ನು ಜಾತ್ರೆಗೆ ಬಂದ ಭಕ್ತರಿಗೆ ಹಂಚುವ ಮೂಲಕ ವಿಶೇಷ ಭಕ್ತಿ ಮೆರೆದರು. ಇದು ಪರಂಪರಾಗತವಾಗಿ ಬಂದಿರುವ ಹರಕೆ.
ಶಿಶುವಿನಹಾಳ ಗ್ರಾಮದಲ್ಲಿ ಮೂರು ದಿನಗಳ ಕಾಲ ನಡೆಯುವ ಶರೀಫರ ಜಾತ್ರಾ ಮಹೋತ್ಸವಕ್ಕೆ ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಗದಗ, ದಾವಣಗೆರೆ ಹಾಗೂ ಉತ್ತರ ಕನ್ನಡ ಜಿಲ್ಲೆಗಳು ಸೇರಿದಂತೆ ಹತ್ತಿರದ ಮಹಾರಾಷ್ಟ್ರ, ಆಂಧ್ರಪ್ರದೇಶ ಹಾಗೂ ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳಿಂದ ಭಕ್ತರು ಜಾತ್ರೆಯಲ್ಲಿ ಪಾಲ್ಗೊಂಡಿದ್ದರು.
ಶರೀಫ ಶಿವಯೋಗಿಗಳ ಮತ್ತು ಗುರುಗೋವಿಂದ ಶಿವಯೋಗಿಗಳ ಪಂಚಾಗ್ನಿಮಠ ಟ್ರಸ್ಟ್‌ನ ಧರ್ಮದರ್ಶಿಗಳು, ವಿವಿಧ ಭಾಗದ ಮುಖಂಡರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.