ಸವಣೂರು ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಔಷಧಿ ವಿತರಣಾ ಕೊಠಡಿ ಎದುರು ಸಾಲುಗಟ್ಟಿ ನಿಂತಿರುವ ಜನ
ಸವಣೂರು: ಇಲ್ಲಿಯ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯ ಕಟ್ಟಡ ಹಳೆಯದ್ದಾಗಿದ್ದು, ಮಳೆ ಬರುವ ಸಂದರ್ಭದಲ್ಲಿ ಅಲ್ಲಲ್ಲಿ ಸೋರುವುದು ಸಾಮಾನ್ಯವಾಗಿದೆ. ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಇದ್ದು, ಚಿಕಿತ್ಸೆ ಪಡೆಯುವಷ್ಟರಲ್ಲಿ ಜನರು ಹೈರಾಣಾಗುತ್ತಿದ್ದಾರೆ.
ತಾಲ್ಲೂಕು ಕೇಂದ್ರವಾಗಿರುವ ಸವಣೂರು ಪಟ್ಟಣದ ಮಧ್ಯ ಭಾಗದಲ್ಲಿರುವ ಆಸ್ಪತ್ರೆ 80 ವರ್ಷಗಳ ಇತಿಹಾಸ ಹೊಂದಿದೆ. ಈ ಆಸ್ಪತ್ರೆಗೆ ನಿತ್ಯ 500ರಿಂದ 600 ಜನರು ಬಂದು ಹೋಗುತ್ತಾರೆ. ಕಟ್ಟಡ ದುರಸ್ತಿ ಕಾಣದಿದ್ದರಿಂದ ಜನರು, ಜೀವ ಭಯದಲ್ಲಿ ಚಿಕಿತ್ಸೆ ಪಡೆಯುವಂತ ಸ್ಥೀತಿ ನಿರ್ಮಾಣವಾಗಿದೆ.
80 ವರ್ಷದ ಹಳೆಯ ಕಟ್ಟಡದ ಚಾವಣಿಯಿಂದ ನೀರು ಸೋರುತ್ತಿದೆ. ಚಾವಣಿಯಿಂದ ನೀರು ಹರಿದು ಹೋಗಲು ಹಾಕಿರುವ ಪೈಪ್‌ಗಳಲ್ಲಿ ಕಸ ತುಂಬಿಕೊಂಡಿದ್ದು, ಈ ನೀರು ಕಟ್ಟಡದ ಗೋಡೆ ಮೇಲೆ ಬೀಳುತ್ತಿದೆ. ಇದರಿಂದಾಗಿ ಗೋಡೆಗಳಲ್ಲಿ ಅಲ್ಲಲ್ಲಿ ಸಸಿಗಳು ಬೆಳೆಯುತ್ತಿವೆ.
ನೀರು ಜಿನುಗುತ್ತಿರುವುದರಿಂದ ಗೋಡೆಗಳು ಬಿರುಕು ಬಿಟ್ಟು, ಚಾವಣಿ ಯಲ್ಲಿನ ನೀರು ಗೋಡೆ ಮೂಲಕ ಹರಿದು ಇನ್ನಷ್ಟು ಆತಂಕವನ್ನು ಸೃಷ್ಟಿ ಸಿದೆ. ಆಸ್ಪತ್ರೆಯ ಹಳೆಯ ಕಟ್ಟಡವನ್ನು ತೆರವುಗೊಳಿಸಿ ಹೊಸ ಕಟ್ಟಡವನ್ನು ನಿರ್ಮಾಣ ಮಾಡುವಂತೆ ಸಾರ್ವಜ ನಿಕರು ಹಲವಾರು ಬಾರಿ ಮನವಿ ಮಾಡಿ ಕೊಂಡಿದ್ದಾರೆ. ಆದರೆ, ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಜನರು ಆರೋಪಿಸುತ್ತಿದ್ದಾರೆ.
ವೈದ್ಯರ ಕೊರತೆ: ಆಸ್ಪತ್ರೆಯಲ್ಲಿ ಕೆಲಸ ಮಾಡಲು 13 ವೈದ್ಯರು, 20 ಶುಶ್ರೂಷಕಿಯರು, 32 ಡಿ–ದರ್ಜೆ ಸಿಬ್ಬಂದಿ ಹುದ್ದೆಗಳು ಮಂಜೂರಾಗಿವೆ. ಆದರೆ, ಸದ್ಯ 8 ವೈದ್ಯರು, 12 ಶುಶ್ರೂಷಕಿಯರು ಹಾಗೂ 24 ಡಿ–ದರ್ಜೆ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಸಿಬ್ಬಂದಿ ಕೊರತೆಯಿಂದ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಚಿಕಿತ್ಸೆ ಪಡೆಯಲು ಗಂಟೆಗಟ್ಟಲೇ ಸರದಿಯಲ್ಲಿ ಕಾಯುತ್ತಿದ್ದಾರೆ.
ಚರ್ಮರೋಗ, ಎಲುಬು–ಕೀಲು ಹಾಗೂ ತುರ್ತು ಚಿಕಿತ್ಸಾ ವೈದ್ಯರ ಹುದ್ದೆಗಳು ಖಾಲಿ ಇವೆ. ಆದರೆ, ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಸ್ಪತ್ರೆಗೆ ಬರುತ್ತಿದ್ದಾರೆ. ವೈದ್ಯರ ಕೊರತೆಯಿಂದಾಗಿ ಜನರು, ಹಾವೇರಿ ಹಾಗೂ ಹುಬ್ಬಳ್ಳಿಗೆ ತೆರಳುತ್ತಿದ್ದಾರೆ. ಅನಿವಾರ್ಯವಾಗಿ ಖಾಸಗಿ ಆಸ್ಪತ್ರೆಗೂ ಹೋಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಆಸ್ಪತ್ರೆ ಕಟ್ಟಡದಲ್ಲಿಯೇ ಔಷಧಿ ವಿತರಣಾ ಕೊಠಡಿ ಇದೆ. ಕೊಠಡಿ ಎದುರು ನಿತ್ಯವೂ ಜನರು ಸಾಲು ಗಟ್ಟಿ ನಿಲ್ಲುವ ಸ್ಥಿತಿ ಇದೆ. ನಿರಂತರ ಮಳೆ ಹಾಗೂ ಬದಲಾದ ವಾತಾವರಣ ದಿಂದಾಗಿ ತಾಲ್ಲೂಕಿನ ಹಲವು ಜನರು ಕೆಮ್ಮು, ನೆಗಡಿ, ಜ್ವರದಿಂದ ಬಳಲುತ್ತಿದ್ದಾರೆ. 25ಕ್ಕೂ ಹೆಚ್ಚು ಜನರನ್ನು ಚಿಕಿತ್ಸೆಗಾಗಿ ಒಳರೋಗಿ ವಿಭಾಗಕ್ಕೆ ದಾಖಲಿಸಿಕೊಳ್ಳಲಾಗಿದೆ. ಡೆಂಗಿ ಪ್ರಕರಣ ಗಂಭೀರವಾಗಿ ಪರಿಗಣಿಸಿ, ಪ್ರತ್ಯೇಕ ವಾರ್ಡ್‌ಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿ ಶಂಕರಗೌಡ ಹಿರೇಗೌಡ್ರ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.