
ಹಾನಗಲ್: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಉದ್ಯೋಗಕ್ಕೆ ಕತ್ತರಿ ಹಾಕಿದೆ. ದೇಶವನ್ನು ಪ್ರಗತಿಯತ್ತ ತರಲು ಹಿಂದಿನ ಸರ್ಕಾರದ ರೂಪಿಸಿದ್ದ ಬಹುಪಾಲು ಯೋಜನೆಗಳನ್ನು ಬುಡಮೇಲು ಮಾಡಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹರಿಹಾಯ್ದರು.
ತಾಲ್ಲೂಕಿನ ಗಡೆಗುಂಡಿಯಲ್ಲಾಪುರ ಗ್ರಾಮದಲ್ಲಿ ಶುಕ್ರವಾರ ನಡೆದ ಬಮ್ಮನಹಳ್ಳಿ ಜಿಲ್ಲಾ ಪಂಚಾಿತಿ ವ್ಯಾಪ್ತಿಯ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಉತ್ತರದ ರಾಜ್ಯಗಳಿಗೆ ಬೆಣ್ಣೆ, ದಕ್ಷಿಣದ ರಾಜ್ಯಗಳಿಗೆ ಸುಣ್ಣ ಎನ್ನುವ ಅರ್ಥದಲ್ಲಿ ಕೇಂದ್ರ ಸರ್ಕಾರ ನಡೆದುಕೊಳ್ಳುತ್ತಿದೆ. ನಮ್ಮ ರಾಜ್ಯದಿಂದ ಪ್ರತಿವರ್ಷ ಕೇಂದ್ರ ಸರ್ಕಾರ ತೆರಿಗೆ ರೂಪದಲ್ಲಿ ₹4.5 ಲಕ್ಷ ಕೋಟಿ ಸಂಗ್ರಹಿಸುತ್ತಿದ್ದು, ಮರಳಿ ಕೇವಲ ₹65 ಸಾವಿರ ಕೋಟಿ ನೀಡುತ್ತಿದೆ. ನ್ಯಾಯಸಮ್ಮತ ಅನುದಾನ, ಪರಿಹಾರ ಮೊತ್ತವನ್ನು ನ್ಯಾಯಾಲಯದ ಮೆಟ್ಟಿಲೇರಿ ಪಡೆಯುವಂತ ಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.
ಇದೀಗ ಮನರೇಗಾ ಯೋಜನೆ ಹೆಸರು, ಸ್ವರೂಪ ಬದಲಿಸಿ ಕೇಂದ್ರ ಸರ್ಕಾರ ಗ್ರಾಮ ಭಾರತದ ಮೇಲೆ ಗದಾಪ್ರಹಾರ ನಡೆಸಿದೆ. ಪ್ರತಿ ಗ್ರಾಮ ಪಂಚಾಯಿತಿಗಳು ಈ ಯೋಜನೆಯಡಿ ಪ್ರತಿವರ್ಷ ಕನಿಷ್ಠ ಒಂದು ಕೋಟಿ ಅನುದಾನ ಪಡೆಯುತ್ತಿದ್ದವು ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹನುಮಂತಪ್ಪ ಮರಗಡಿ ಮಾತನಾಡಿ, ಬ್ಲಾಕ್ ಮತ್ತು ಜಿಲ್ಲಾ ಪಂಚಾಯಿತಿ ವ್ಯಾಪ್ತಿಗಳಲ್ಲಿ ಸಭೆ ನಡೆಸುವ ಮೂಲಕ ಕಾರ್ಯಕರ್ತರ ಭಾವನೆಗಳಿಗೆ ಸ್ಪಂದಿಸಲಾಗುತ್ತಿದೆ. ಪಕ್ಷದ ಬೇರುಗಳನ್ನು ಇನ್ನಷ್ಟು ಗಟ್ಟಿಗೊಳಿಸಲಾಗುತ್ತಿದೆ ಎಂದರು.
ಕೆಪಿಸಿಸಿ ಸದಸ್ಯ ಖ್ವಾಜಾಮೊಹಿದ್ದೀನ್ ಜಮಾದಾರ, ನಗರ ಕಾಂಗ್ರೆಸ್ ಅಧ್ಯಕ್ಷ ಮತೀನ್ ಶಿರಬಡಗಿ, ಕೆಡಿಪಿ ಸದಸ್ಯ ಹನೀಫ್ ಬಂಕಾಪೂರ, ಮುಖಂಡರಾದ ಚನ್ನಬಸಣ್ಣ ಬಿದರಗಡ್ಡಿ, ಎಂ.ಎಸ್.ಪಾಟೀಲ, ರಾಮಚಂದ್ರ ರಾಮಜಿ, ಬಸವಣ್ಣೆಪ್ಪ ಓಲೇಕಾರ, ವಸಂತ ಕಿರವಾಡಿ, ಶಿವಣ್ಣ ಗೊಲ್ಲರ, ಪುಟ್ಟಪ್ಪ ಆರೆಗೊಪ್ಪ, ಸುರೇಶ ಪಾಳಾ, ಮಕ್ತೇಶ್ವರ ಹಸನಾಬಾದಿ, ಅಶೋಕ ಜಾಧವ, ರಾಮಣ್ಣ ಓಲೇಕಾರ, ಅಶೋಕ ಓಣಿಕೇರಿ, ಉಮೇಶ ದೊಡ್ಡಮನಿ, ಶಿವನಾಗಪ್ಪ ಎಲಿಗಾರ, ಪ್ರವೀಣ ಹಿರೇಮಠ, ಬಸವರಾಜ ಕೋಲಕಾರ, ಉಮೇಶ ದಾನಪ್ಪನವರ, ಮಕ್ಬೂಲ್ ಬಡಗಿ, ಶಿವು ಭದ್ರಾವತಿ, ಭರತ್ ಜಾಧವ, ಫಕ್ಕೀರಪ್ಪ ಹರಿಜನ, ಶಬ್ಬೀರ್ ಬಮ್ಮನಹಳ್ಳಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.