ADVERTISEMENT

ನಾನು ರಾಜಕೀಯಕ್ಕೆ ಬರಲು ಆದಿಚುಂಚನಗಿರಿ ಶ್ರೀ ಕಾರಣ: ಜಮೀರ್‌ ಅಹಮದ್‌ ಖಾನ್‌

​ಪ್ರಜಾವಾಣಿ ವಾರ್ತೆ
Published 26 ಜುಲೈ 2022, 4:58 IST
Last Updated 26 ಜುಲೈ 2022, 4:58 IST
ಜಮೀರ್‌ ಅಹಮದ್‌ ಖಾನ್‌, ಶಾಸಕ 
ಜಮೀರ್‌ ಅಹಮದ್‌ ಖಾನ್‌, ಶಾಸಕ    

ಹಾವೇರಿ: ‘ನಾನು ರಾಜಕೀಯಕ್ಕೆ ಬರುವುದಕ್ಕೆ ಕಾರಣ ಮುಸ್ಲಿಂ ಗುರುಗಳಲ್ಲ. ಆದಿಚುಂಚನಗಿರಿ ಸ್ವಾಮಿಗಳು. ನಾನು 4 ಬಾರಿ ಶಾಸಕ, 2 ಬಾರಿ ಮಂತ್ರಿಯಾಗಿದ್ದೇನೆ. ಒಕ್ಕಲಿಗರ ಮಠದಲ್ಲಿ ಬೆಳೆದ ಹುಡುಗ ನಾನು’ ಎಂದು ಶಾಸಕ ಜಮೀರ್‌ ಅಹಮದ್‌ ಖಾನ್‌ಹೇಳುವ ಮೂಲಕ ಒಕ್ಕಲಿಗರ ವಿರೋಧಿಯಲ್ಲ ಎಂಬುದನ್ನು ಸ್ಪಷ್ಟಪಡಿಸಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಆದಿಚುಂಚನಗಿರಿ ಸ್ವಾಮೀಜಿಗಳ ಆದೇಶದ ಮೇರೆಗೆ ನಾನು ಜೆಡಿಎಸ್‌ಗೆ ಹೋಗಿದ್ದು. ಸ್ವಾಮೀಜಿ ಹಾಗೂ ಒಕ್ಕಲಿಗರ ಜೊತೆ ನನಗೆ ಎಂಥ ಬಾಂಧವ್ಯವಿದೆ ಎಂಬುದನ್ನು ಆ ಮಠದಲ್ಲಿ ಹೋಗಿ ಕೇಳಿ ನಿಮಗೆ ಗೊತ್ತಾಗುತ್ತೆ’ ಎಂದರು.

ದೇವೇಗೌಡರು ರಾಜಕೀಯ ಗುರು:‘ನಾನು ಕಾಂಗ್ರೆಸ್ ಪಕ್ಷದಲ್ಲಿ ಇದ್ದೇನೆ. ಆದರೂ ನನ್ನ ರಾಜಕೀಯ ಗುರುಗಳು ದೇವೇಗೌಡರು. 2005ರಲ್ಲಿ ನನ್ನನ್ನು ಗೆಲ್ಲಿಸಿ ಈ ಮಟ್ಟಕ್ಕೆ ಬೆಳೆಸಿದ್ದಾರೆ. ದೇವೇಗೌಡರಿಂದಲೇ ನಾನು ಈ ಮಟ್ಟಕ್ಕೆ ಬೆಳೆದಿರೋದು. ಜಾತಿಗಳನ್ನು ಚೀಪಾಗಿ ನೋಡ್ತಿರೋದು ಬಿಜೆಪಿಯವರು’ ಎಂದು ಜಮೀರ್‌ ಹೇಳುವ ಮೂಲಕ ಸಚಿವ ಆರ್‌.ಅಶೋಕ್‌ ಹೇಳಿಕೆಗೂ ತಿರುಗೇಟು ನೀಡಿದರು.

ADVERTISEMENT

ಸಿ.ಟಿ.ರವಿಗೆ ಖುರ್ಚಿ ಮೇಲೆ ಪ್ರೀತಿ: ‘ಭಾರತ್ ಮಾತಾ ಕೀ ಜೈ ಅಂದರೆ ಮಾತ್ರ ಉಳಿಗಾಲ’ ಎಂಬ ಸಿ.ಟಿ ರವಿ ಹೇಳಿಕೆಗೆ ಸಂಬಂಧಿಸಿದಂತೆ,‘ಸಿ.ಟಿ. ರವಿಗೆ ಹಿಂದೂಗಳ ಮೇಲೂ ಪ್ರೀತಿ ಇಲ್ಲ, ಮುಸಲ್ಮಾನರ ಮೇಲೂ ಪ್ರೀತಿ ಇಲ್ಲ. ಅವರಿಗೆ ಪ್ರೀತಿ ಇರೋದು ಕೇವಲ ಅಧಿಕಾರ ಹಾಗೂ ಖುರ್ಚಿ ಮೇಲೆ ಅಷ್ಟೆ’ ಎಂದು ಆರೋಪಿಸಿದರು.

ಭಾರತ್ ಮಾತಾ ಕಿ ಜೈ ಅನ್ನೋದು ಆಗಲೂ ಇದೆ, ಅದನ್ನು ಹೇಳಿಯೇ ಕಾಂಗ್ರೆಸ್ ಇದುವರೆಗೂ ಮತ ಪಡೆದಿದೆ. ಈ ರೀತಿ ಮಾತನಾಡಿ ಬಿಜೆಪಿಯರವರು ದೇಶ ಹಾಳು ಮಾಡಿದ್ದಾರೆ. ಹಿಂದೂ-ಮುಸಲ್ಮಾನರ ನಡುವೆ ಜಗಳ ತಂದಿಟ್ಟು, ಅಧಿಕಾರಕ್ಕೆ ಬರುತ್ತಾರೆ ಎಂದು ಟೀಕಿಸಿದರು.

ಋಣ ತೀರಿಸಬೇಕಿದೆ: ಸಿದ್ದರಾಮಯ್ಯ ಅವರು ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ₹3150 ಕೋಟಿ ಅನುದಾನ ನೀಡಿದ್ದಾರೆ. ಹೀಗಾಗಿ ಅವರ ಋಣ ತೀರಿಸಬೇಕಿದೆ. ಸಿದ್ದರಾಮಯ್ಯನವರ ಹುಟ್ಟುಹಬ್ಬಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಅಲ್ಪಸಂಖ್ಯಾತರು ಬರಬೇಕು ಎಂದರು.

ಡಿ.ಕೆ.ಶಿವಕುಮಾರ್‌ ಹುಟ್ಟುಹಬ್ಬವನ್ನೂ ಇಷ್ಟೇ ಉತ್ಸಾಹದಿಂದ ಆಚರಿಸುತ್ತೀರಾ ಎಂಬ ಪತ್ರಕರ್ತರ ಪ್ರಶ್ನೆಗೆ, ‘ಅವರು ನಮ್ಮ ಕೆಪಿಸಿಸಿ ಅಧ್ಯಕ್ಷರು. ನಾವೆಲ್ಲ ಸೇರಿ ಖಂಡಿತ ಮಾಡುತ್ತೇವೆ’ ಎಂದು ಜಮೀರ್‌ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.