ADVERTISEMENT

ಹಾವೇರಿ| ದರ ಕುಸಿತ; ಕಾರ್ಖಾನೆಗೆ ‘ಕಹಿ’ ತಂದ ‘ಸಕ್ಕರೆ’

ಸಗಟು ಮಾರುಕಟ್ಟೆಯಲ್ಲಿ ದರ ಇಳಿಕೆ; ಬಿಲ್ ಪಾವತಿ ವಿಳಂಬ | ಎಥೆನಾಲ್ ಉತ್ಪಾದನೆಗೂ ಕೇಂದ್ರದ ಮಿತಿ

ಸಂತೋಷ ಜಿಗಳಿಕೊಪ್ಪ
Published 4 ಜನವರಿ 2026, 8:03 IST
Last Updated 4 ಜನವರಿ 2026, 8:03 IST
<div class="paragraphs"><p>ಹಾವೇರಿ ಜಿಲ್ಲೆಯ ಸಂಗೂರು ಕಾರ್ಖಾನೆ ಎದುರು ಸಾಲುಗಟ್ಟಿ ನಿಂತಿರುವ ಕಬ್ಬು ಸಾಗಣೆ ಟ್ರ್ಯಾಕ್ಟರ್‌ಗಳು </p></div>

ಹಾವೇರಿ ಜಿಲ್ಲೆಯ ಸಂಗೂರು ಕಾರ್ಖಾನೆ ಎದುರು ಸಾಲುಗಟ್ಟಿ ನಿಂತಿರುವ ಕಬ್ಬು ಸಾಗಣೆ ಟ್ರ್ಯಾಕ್ಟರ್‌ಗಳು

   

ಪ್ರಜಾವಾಣಿ ಚಿತ್ರ/ ಮಾಲತೇಶ ಇಚ್ಚಂಗಿ

ಹಾವೇರಿ: ಸಗಟು ಮಾರುಕಟ್ಟೆಯಲ್ಲಿ ಸಕ್ಕರೆ ದರ ದಿಢೀರ್ ಕುಸಿತವಾಗಿದ್ದು, ಇದರಿಂದಾಗಿ ಕಾರ್ಖಾನೆಗಳ ಹಣಕಾಸು ವಹಿವಾಟಿಗೆ ದೊಡ್ಡ ಪೆಟ್ಟು ಬಿದ್ದಿದೆ. ರೈತರಿಗೆ ನಿಗದಿತ ದಿನದಂದು ಬಿಲ್ ಪಾವತಿ ಮಾಡಲು ಹಲವು ಕಾರ್ಖಾನೆ ಆಡಳಿತ ಮಂಡಳಿಗಳು ಸತಾಯಿಸುತ್ತಿವೆ.

ADVERTISEMENT

‘ಕಬ್ಬು ಕಟಾವು ಮಾಡಿ ಕಾರ್ಖಾನೆಗೆ ಪೂರೈಸಿದ ದಿನದಿಂದ 14 ದಿನದೊಳಗೆ ರೈತರ ಖಾತೆಗೆ ಹಣ ಜಮೆ ಮಾಡಬೇಕು’ ಎಂದು ರಾಜ್ಯ ಸರ್ಕಾರ ನಿಯಮ ಮಾಡಿದೆ. ಆದರೆ, ಜಿಲ್ಲೆಯ ಎರಡು ಕಾರ್ಖಾನೆಗಳಲ್ಲಿ ಬಿಲ್ ಪಾವತಿ ವಿಳಂಬವಾಗುತ್ತಿದೆ. ಇದರಿಂದ ಅಸಮಾಧಾನಗೊಂಡಿರುವ ರೈತರು, ಕಾರ್ಖಾನೆಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಬಿಲ್ ಪಾವತಿ ವಿಳಂಬದ ಬಗ್ಗೆ ಪ್ರತಿಕ್ರಿಯಿಸುತ್ತಿರುವ ಕಾರ್ಖಾನೆ ಆಡಳಿತ ಮಂಡಳಿಯವರು, ‘ಸಗಟು ಮಾರುಕಟ್ಟೆ ದರದಲ್ಲಿ ಸಕ್ಕರೆ ದರ ಹೆಚ್ಚು ಕುಸಿದಿದೆ. ಇದರಿಂದಾಗಿ, ಕಾರ್ಖಾನೆಗೆ ಬರಬೇಕಿದ್ದ ಹಣವೂ ಕಡಿಮೆಯಾಗಿದೆ. ಇದರಿಂದಾಗಿ, ಬಿಲ್‌ ಪಾವತಿಯಲ್ಲಿ ವ್ಯತ್ಯಾಸವಾಗುತ್ತಿದೆ’ ಎಂದು ಹೇಳುತ್ತಿದ್ದಾರೆ.

ಜಿಲ್ಲೆಯ ಸಂಗೂರು ಹಾಗೂ ರಟ್ಟೀಹಳ್ಳಿ ತಾಲ್ಲೂಕಿನ ಭೈರನಪಾದದಲ್ಲಿ ಜಿ.ಎಂ. ಶುಗರ್ ಆ್ಯಂಡ್ ಎನರ್ಜಿ ಕಂಪನಿಯ ಕಾರ್ಖಾನೆಗಳಿವೆ. ಈ ಕಾರ್ಖಾನೆಗಳಲ್ಲಿ ಉತ್ಪಾದನೆಯಾಗುವ ಸಕ್ಕರೆಯನ್ನು ರಾಜ್ಯದಲ್ಲಿಯೇ ಸಗಟು ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ದರ ಕುಸಿತವಾಗಿರುವುದರಿಂದ, ಕಾರ್ಖಾನೆಯ ನಿರೀಕ್ಷೆಗೆ ತಕ್ಕಷ್ಟು ಹಣ ಬರುತ್ತಿಲ್ಲ. ಇದರಿಂದಾಗಿ ರೈತರಿಗೆ ನೀಡಬೇಕಿದ್ದ ಬಿಲ್‌ ಪಾವತಿಯಲ್ಲೂ ವಿಳಂಬವಾಗುತ್ತಿದೆ.

‘ಕಬ್ಬಿಗೆ ವೈಜ್ಞಾನಿಕ ದರ ನಿಗದಿ ಮಾಡಬೇಕು’ ಎಂದು ರೈತರು ರಾಜ್ಯವ್ಯಾಪಿ ಹೋರಾಟ ಮಾಡಿದ್ದರು. ಅದಕ್ಕೆ ಸ್ಪಂದಿಸಿ ರಾಜ್ಯ ಸರ್ಕಾರ, ದರ ನಿಗದಿ ಮಾಡಿತ್ತು. ಆದರೆ, ಈಗ ಸಕ್ಕರೆ ದರ ಕುಸಿತವಾಗಿದೆ. ಸೂಕ್ತ ದರ ಕೊಡಿಸುವಲ್ಲಿ ಸರ್ಕಾರ ಮೌನವಾಗಿರುವುದಾಗಿ ಕಾರ್ಖಾನೆ ಆಡಳಿತ ಮಂಡಳಿಯವರು ದೂರುತ್ತಿದ್ದಾರೆ.

ಕೆ.ಜಿ.ಗೆ ₹ 36 ದರ: ‘ಸಂಗೂರಿನ ಕಾರ್ಖಾನೆಯಲ್ಲಿ ಸದ್ಯದ ಪರಿಸ್ಥಿತಿಯಲ್ಲಿ 1,000 ಕೆ.ಜಿ. ಕಬ್ಬಿನಿಂದ 90 ಕೆ.ಜಿ ಸಕ್ಕರೆ ಉತ್ಪಾದಿಸಲಾಗುತ್ತಿದೆ. ಈ ಸಕ್ಕರೆಗೆ ಸದ್ಯದ ಸಗಟು ಮಾರುಕಟ್ಟೆಯಲ್ಲಿ ಕೆ.ಜಿ.ಗೆ ಕೇವಲ ₹36 ಬೆಲೆ ಸಿಗುತ್ತಿದೆ. ಇದರಿಂದಾಗಿ, ಅಂದುಕೊಂಡಷ್ಟು ಲಾಭ ಬರುತ್ತಿಲ್ಲ. ಮೊಲಾಸಿಸ್ ಉತ್ಪಾದನೆಯೂ ತಗ್ಗಿದೆ’ ಎಂದು ಕಾರ್ಖಾನೆಯ ಮೂಲಗಳು ತಿಳಿಸಿವೆ.

‘ರೈತರಿಗೆ ಟನ್‌ ಕಬ್ಬಿಗೆ ₹ 2,725 (ಕಟಾವು ಸೇರಿ) ನೀಡುತ್ತಿದ್ದೇವೆ. ಅದೇ ಕಬ್ಬು ಬಳಸಿ ಕಾರ್ಮಿಕರ ಶ್ರಮ ಹಾಗೂ ಯಂತ್ರದ ಸಹಾಯದಿಂದ 90 ಕೆ.ಜಿ. ಸಕ್ಕರೆ ಉತ್ಪಾದಿಸುತ್ತಿದ್ದೇವೆ. ಮಾರುಕಟ್ಟೆ ದರದನ್ವಯ, ಸದ್ಯ 90 ಕೆ.ಜಿ ಸಕ್ಕರೆಗೆ ಕೇವಲ ₹ 3,240 ಸಿಗುತ್ತಿದೆ. ಈ ದರದಲ್ಲಿ ರೈತರಿಗೆ ₹ 2,725 ಕೊಡಬೇಕು. ನಂತರ, ಕೇವಲ ₹ 515 ಉಳಿಯುತ್ತಿದೆ. ಇದರಲ್ಲಿ ಕಾರ್ಖಾನೆಗೆ ನಿರ್ವಹಣೆ, ಕಾರ್ಮಿಕರ ಸಂಬಳ ಎಲ್ಲವನ್ನೂ ಕೊಡಬೇಕು. ಸಕ್ಕರೆಗೆ ದರ ಸಿಗದಿರುವುದರಿಂದ, ಆರ್ಥಿಕ ಹೊರೆಯೇ ಹೆಚ್ಚಾಗುತ್ತಿದೆ’ ಎಂದು ಮೂಲಗಳು ತಿಳಿಸಿವೆ.

ಸಕ್ಕರೆ ರಫ್ತಿಗೆ ತೊಡಕು: ‘2024ರ ಸಮಯದಲ್ಲಿ ಕೆ.ಜಿ. ಸಕ್ಕರೆಗೆ ಸಗಟು ಮಾರುಕಟ್ಟೆಯಲ್ಲಿ ₹ 40ರಿಂದ ₹ 42 ಇತ್ತು. ಆದರೆ, ಈ ವರ್ಷ ಸಕ್ಕರೆ ಉತ್ಪಾದನೆ ಹೆಚ್ಚಾಗಿದೆ. ಸಕ್ಕರೆ ರಫ್ತಿಗೆ ನಾನಾ ತೊಡಕುಗಳು ಎದುರಾಗಿವೆ. ಹೀಗಾಗಿ, ರಾಜ್ಯದಲ್ಲಿಯೇ ಸಕ್ಕರೆ ಮಾರಲಾಗುತ್ತಿದೆ. ಇದುವೇ ದರ ಕುಸಿತಕ್ಕೆ ಪ್ರಮುಖ ಕಾರಣವಾಗಿದೆ’ ಎಂದು ಕಾರ್ಖಾನೆ ಮೂಲಗಳು ಹೇಳಿವೆ.

ನ. 10ರವರೆಗೆ ಮಾತ್ರ ಬಿಲ್: ‘ಸಂಗೂರು ಕಾರ್ಖಾನೆಗೆ ಅಕ್ಟೋಬರ್‌ನಿಂದಲೇ ರೈತರು ಕಬ್ಬು ಪೂರೈಕೆ ಮಾಡುತ್ತಿದ್ದಾರೆ. ಹಾವೇರಿ, ಹಾನಗಲ್ ತಾಲ್ಲೂಕಿನ ರೈತರೇ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಖಾನೆಗೆ ಕಬ್ಬು ಕೊಟ್ಟಿದ್ದಾರೆ. ನವೆಂಬರ್ 10ರವರೆಗೆ ಕಬ್ಬು ಪೂರೈಸಿದವರಿಗೆ ಮಾತ್ರ ಬಿಲ್ ಪಾವತಿಸಲಾಗಿದೆ. ಉಳಿದ ರೈತರಿಗೆ ಹೊಸ ವರ್ಷ ಬಂದರೂ ಬಿಲ್ ಪಾವತಿಯಾಗಿಲ್ಲ’ ಎಂದು ರೈತರು ದೂರಿದರು.

‘ರೈತರಿಗೆ ಪ್ರತಿ ಟನ್‌ಗೆ ₹ 2,725 ಬೆಲೆ ನೀಡುವಂತೆ ಜಿಲ್ಲಾಧಿಕಾರಿ ಹೇಳಿದ್ದರು. ಆದರೆ, ಕಾರ್ಖಾನೆಯವರು ನ. 10ರವರೆಗೆ ₹35 ಬಾಕಿ ಇರಿಸಿಕೊಂಡು ಉಳಿದ ಹಣವನ್ನಷ್ಟೇ ನೀಡಿದ್ದಾರೆ. ಇದನ್ನು ಪ್ರಶ್ನಿಸಿದರೆ, ಆರ್ಥಿಕ ವರ್ಷದ ಅಂತ್ಯದಲ್ಲಿ ಬಾಕಿ ಹಣ ಪಾವತಿಸುವುದಾಗಿ ಹೇಳುತ್ತಿದ್ದಾರೆ’ ಎಂದು ಆರೋಪಿಸಿದರು.

ಸಕ್ಕರೆ ದರವನ್ನು ಕೇಂದ್ರ ಸರ್ಕಾರ ನಿಯಂತ್ರಿಸುತ್ತದೆ. ಸಕ್ಕರೆ ದರ ಕುಸಿತದ ಬಗ್ಗೆ ಕೇಂದ್ರ ಸರ್ಕಾರವೇ ಪ್ರತಿಕ್ರಿಯಿಸಬೇಕು
ಶಿವಾನಂದ ಪಾಟೀಲ ಕಬ್ಬು ಅಭಿವೃದ್ಧಿ ಸಕ್ಕರೆ ಸಚಿವ
ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಕ್ವಿಂಟಲ್‌ ಸಕ್ಕರೆಗೆ ₹350ರಿಂದ ₹ 400 ಬೆಲೆ ಕಡಿಮೆಯಾಗಿದೆ. ಸಕ್ಕರೆ ಬೇಡಿಕೆಯೂ ಕಡಿಮೆಯಾಗುತ್ತಿದ್ದು ಆರ್ಥಿಕ ಸ್ಥಿತಿ ಕ್ರಮೇಣ ಶೋಚನೀಯವಾಗುತ್ತಿದೆ
ಸಿಬ್ಬಂದಿ ಸಂಗೂರಿನ ಕಾರ್ಖಾನೆ

ವಿಷದ ಬಾಟಲಿ ಹಿಡಿದು ಬಂದ ರೈತ

‘ಕಬ್ಬು ಪೂರೈಕೆ ಮಾಡಿದ್ದಕ್ಕೆ ಬಿಲ್ ಪಾವತಿ ಮಾಡಿಲ್ಲ’ ಎಂದು ಆರೋಪಿಸಿ ಹಾನಗಲ್ ತಾಲ್ಲೂಕಿನ ಶೀಗಿಹಳ್ಳಿಯ ರೈತರೊಬ್ಬರು ಸಂಗೂರಿನ ಕಾರ್ಖಾನೆಗೆ ವಿಷದ ಬಾಟಲಿ ಸಮೇತ ಬಂದು ಶನಿವಾರ ಪ್ರತಿಭಟನೆ ನಡೆಸಿದರು. ಕಾರ್ಖಾನೆಯ ಕಚೇರಿ ಎದುರು ಕುಳಿತಿದ್ದ ರೈತ ವಿಷದ ಬಾಟಲಿ ಪ್ರದರ್ಶಿಸಿ ಅಳಲು ತೋಡಿಕೊಂಡರು. ‘ಸಾಲ ಮಾಡಿ ಕಬ್ಬು ಬೆಳೆದಿದ್ದೆ. ನ. 4ರಿಂದ ಡಿ. 18ರವರಗೆ ಸುಮಾರು 190 ಕ್ವಿಂಟಲ್ ಕಬ್ಬು ಪೂರೈಕೆ ಮಾಡಿದ್ದೇನೆ. ಆದರೆ ನನ್ನ ಖಾತೆಗೆ ಇದುವರೆಗೂ ಬಿಲ್ ಹಾಕಿಲ್ಲ. ಸಾಲಗಾರರು ಮನೆಗೆ ಬಂದು ಮರುಪಾವತಿಗಾಗಿ ಒತ್ತಾಯಿಸುತ್ತಿದ್ದಾರೆ. ಅವರ ಕಾಟ ತಡೆಯಲಾಗುತ್ತಿಲ್ಲ. ನನ್ನ ಕಬ್ಬಿನ ಹಣವನ್ನು ತ್ವರಿತವಾಗಿ ನೀಡಿದರೆ ಅದನ್ನು ಸಾಲಗಾರರಿಗೆ ಕೊಡುತ್ತೇನೆ’ ಎಂದು ರೈತ ಹೇಳಿದರು. ‘ತ್ವರಿತವಾಗಿ ಬಿಲ್ ನೀಡದಿದ್ದರೆ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ಬರಲಿದೆ. ಇದಕ್ಕೆ ಕಾರ್ಖಾನೆಯವರೇ ಹೊಣೆಯಾಗಬೇಕಾಗುತ್ತದೆ’ ಎಂದು ಎಚ್ಚರಿಸಿದರು. ರೈತರೊಂದಿಗೆ ಮಾತನಾಡಿದ ಕಾರ್ಖಾನೆಯವರು ‘ಸದ್ಯದಲ್ಲೇ ಹಣ ಪಾವತಿಸಲಾಗುವುದು’ ಎಂದು ಭರವಸೆ ನೀಡಿದರು. ನಂತರವೇ ರೈತ ಸ್ಥಳದಿಂದ ಹೊರಟುಹೋದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.