ADVERTISEMENT

ಹಾವೇರಿ | ಲ್ಯಾಬ್‌ನಿಂದ ರೈತರಿಗೆ ಮೋಸ: ನ್ಯಾಯಮೂರ್ತಿ ತನಿಖೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2025, 2:58 IST
Last Updated 14 ನವೆಂಬರ್ 2025, 2:58 IST
ಹಾವೇರಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮೂರೂ ಕಂಪನಿಗಳ ಮಾಲೀಕರು ಹಾಗೂ ಕಬ್ಬು ಬೆಳೆಗಾರರ ನಡುವೆ ಬುಧವಾರ ತಡರಾತ್ರಿ ಸಂಧಾನ ಸಭೆ ನಡೆಯಿತು
ಹಾವೇರಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮೂರೂ ಕಂಪನಿಗಳ ಮಾಲೀಕರು ಹಾಗೂ ಕಬ್ಬು ಬೆಳೆಗಾರರ ನಡುವೆ ಬುಧವಾರ ತಡರಾತ್ರಿ ಸಂಧಾನ ಸಭೆ ನಡೆಯಿತು   

ಹಾವೇರಿ: ‘ಜಿಲ್ಲೆಯ ಮೂರು ಸಕ್ಕರೆ ಕಾರ್ಖಾನೆಗಳ ಸಕ್ಕರೆ ಪ್ರಮಾಣದ ಪರೀಕ್ಷೆ ಮಾಡುವ ಲ್ಯಾಬ್‌ನಿಂದ ರೈತರಿಗೆ ಮೋಸ ಆಗುತ್ತಿದೆ. ಇದೊಂದು ವ್ಯವಸ್ಥಿತ ಜಾಲವಾಗಿದ್ದು, ಈ ಬಗ್ಗೆ ಹೈಕೋರ್ಟ್ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆ ನಡೆಸಬೇಕು’ ಎಂದು ಕಬ್ಬು ಬೆಳೆಗಾರರು ಒತ್ತಾಯಿಸಿದರು.

ನಗರದ ಹೊರವಲಯದಲ್ಲಿರುವ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ತಡರಾತ್ರಿವರೆಗೂ ಮೂರೂ ಕಂಪನಿಗಳ ಮಾಲೀಕರು ಹಾಗೂ ರೈತರ ಸಭೆ ನಡೆಯಿತು. ಬೆಲೆ ನಿಗದಿ ಸಂಧಾನಕ್ಕೆ ಒಪ್ಪಿದ ರೈತರು, ತಮ್ಮ ಇತರೆ ಸಮಸ್ಯೆಗಳನ್ನು ಹೇಳಿಕೊಂಡರು.

‘ಹಾವೇರಿ ತಾಲ್ಲೂಕಿನ ಸಂಗೂರಿನಲ್ಲಿರುವ ಸಕ್ಕರೆ ಕಾರ್ಖಾನೆಯನ್ನು ಈ ಹಿಂದೆ ಸಹಕಾರ ಸಂಘ ನಡೆಸುತ್ತಿತ್ತು. ಆಗ, ಶೇ 10.30ರಿಂದ ಶೇ 11ರಷ್ಟು ಸಕ್ಕರೆ ಇಳುವರಿ ಇರುತ್ತಿತ್ತು. ಆದರೆ, ಕಾರ್ಖಾನೆ ನಿರ್ವಹಣೆಯನ್ನು ಜಿ.ಎಂ. ಶುಗರ್ ಕಂಪನಿಯವರು 30 ವರ್ಷ ಗುತ್ತಿಗೆಗೆ ಪಡೆದಿದ್ದಾರೆ. ಸಹಕಾರ ಸಂಘದ ಸಂದರ್ಭದಲ್ಲಿದ್ದ ಸಕ್ಕರೆ ಇಳುವರಿ, ಈಗ ದಿಢೀರ್ ಕುಸಿತವಾಗಿರುವುದಕ್ಕೆ ಕಾರಣ ಏನು’ ಎಂದು ರೈತರು ಪ್ರಶ್ನಿಸಿದರು.

ADVERTISEMENT

‘18 ವರ್ಷಗಳಿಂದ ಜಿ.ಎಂ. ಶುಗರ್ಸ್‌ನವರು ಕಾರ್ಖಾನೆ ನಡೆಸುತ್ತಿದ್ದಾರೆ. ಕಬ್ಬಿನ ಮಾದರಿಗಳನ್ನು ತಮ್ಮದೇ ಲ್ಯಾಬ್‌ನಲ್ಲಿ ಪರೀಕ್ಷೆ ಮಾಡಿ, ವರದಿ ಸಿದ್ಧಪಡಿಸುತ್ತಿದ್ದಾರೆ. ಪ್ರತಿ ವರ್ಷವೂ ಸಕ್ಕರೆ ಇಳುವರಿ ಕಡಿಮೆಯಾಗಿದೆ. ಕಾರ್ಖಾನೆಯ ಲ್ಯಾಬ್‌ನಿಂದಲೇ ರೈತರಿಗೆ ಮೋಸ ಆಗುತ್ತಿದೆ. ಸರ್ಕಾರ ಹಾಗೂ ರೈತರು ಇಬ್ಬರಿಗೂ ಕಾರ್ಖಾನೆಯವರು ವಂಚನೆ ಮಾಡುತ್ತಿದ್ದಾರೆ’ ಎಂದು ದೂರಿದರು.

‘ಸಕ್ಕರೆ ಇಳುವರಿ ಪರೀಕ್ಷೆ ಮಾಡುವ ಲ್ಯಾಬ್‌ನ ಪರಿಶೀಲನೆ ನಡೆಸಬೇಕು. ವರದಿ ಸಿದ್ಧಪಡಿಸಿದ ಪ್ರತಿಯೊಬ್ಬ ತಂತ್ರಜ್ಞರನ್ನು ವಿಚಾರಣೆ ನಡೆಸಬೇಕು. ನ್ಯಾಯಮೂರ್ತಿ ಅವರ ನೇತೃತ್ವದಲ್ಲಿ ತನಿಖೆ ನಡೆಸಿ ರೈತರಿಗೆ ನ್ಯಾಯ ಒದಗಿಸಬೇಕು. ಕಾರ್ಖಾನೆಯರದ್ದು ತಪ್ಪು ಕಂಡುಬಂದರೆ, ಕಠಿಣ ಕಾನೂನು ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿದರು.

ತೂಕದಲ್ಲೂ ಮೋಸ: ‘ರೈತರ ಜಮೀನಿನಿಂದ ತರುವ ಕಬ್ಬಿನ ವಾಹನಗಳನ್ನು ಕಾರ್ಖಾನೆ ಆವರಣದಲ್ಲಿರುವ ತೂಕದ ಯಂತ್ರದಲ್ಲಿಯೇ ತೂಕ ಮಾಡಲಾಗುತ್ತಿದೆ. ಇದರಲ್ಲೂ ಮೋಸ ಆಗುತ್ತಿದ್ದು, ಕಡಿಮೆ ತೂಕ ತೋರಿಸಿ ರೈತರನ್ನು ವಂಚಿಸಲಾಗುತ್ತಿದೆ’ ಎಂದು ಕಬ್ಬು ಬೆಳೆಗಾರರು ದೂರಿದರು.

‘ಮಾರ್ಗದಲ್ಲಿ ಬರುವಾಗ ಖಾಸಗಿ ತೂಕದ ಯಂತ್ರದಲ್ಲಿ, ಕಬ್ಬಿನ ವಾಹನವನ್ನು ತೂಕ ಮಾಡಿಸಲು ಸಹ ಕಾರ್ಖಾನೆಯವರು ಅವಕಾಶ ನೀಡುವುದಿಲ್ಲ. ನೇರವಾಗಿ ಕಾರ್ಖಾನೆಗೆ ತಂದ ಬಳಿಕವೇ ತೂಕ ಮಾಡುತ್ತಾರೆ. ಈ ವರ್ತನೆ ಅನುಮಾನಕ್ಕೆ ಕಾರಣವಾಗಿದೆ’ ಎಂದು ದೂರಿದರು.

‘ಶಿಗ್ಗಾವಿ ತಾಲ್ಲೂಕಿನ ಕೋಣನಕೇರಿಯ ವಿಐಎನ್‌ಪಿ ಕಂಪನಿಯಿಂದಲೂ ಲ್ಯಾಬ್–ತೂಕದ ಯಂತ್ರದಿಂದ ಮೋಸವಾಗುತ್ತಿದೆ. ಸರ್ಕಾರದಿಂದಲೇ ತೂಕದ ಯಂತ್ರ ಅಳವಡಿಸಬೇಕು. ಲ್ಯಾಬ್ ತೆರೆಯಬೇಕು’ ಎಂದು ರೈತರು ಒತ್ತಾಯಿಸಿದರು.

ರೈತರ ಸಮಸ್ಯೆ ಆಲಿಸಿದ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ, ‘ಸರ್ಕಾರದಿಂದ ಲ್ಯಾಬ್ ಹಾಗೂ ತೂಕದ ಯಂತ್ರ ಅಳವಡಿಸಲು ಅವಕಾಶವಿರುವುದನ್ನು ಪರಿಶೀಲಿಸುತ್ತೇನೆ. ಈ ಬಗ್ಗೆ ಸರ್ಕಾರಕ್ಕೂ ಪ್ರಸ್ತಾವ ಸಲ್ಲಿಸಿ ಆದಷ್ಟು ಬೇಗ ಸಮಸ್ಯೆ ಬಗೆಹರಿಸುತ್ತೇನೆ’ ಎಂದರು.

ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಭುವನೇಶ್ವರ ಶಿಡ್ಲಾಪೂರ, ಹೆಚ್ಚುವರಿ ಜಿಲ್ಲಾಧಿಕಾರಿ ನಾಗರಾಜ, ಹೆಚ್ಚುವರಿ ಎಸ್‌ಪಿ ಲಕ್ಷ್ಮಣ ಶಿರಕೋಳ ಇದ್ದರು.

ಕಾರ್ಖಾನೆ ಮಾಲೀಕರಿಂದಲೂ ಅಳಲು

‘ಸಕ್ಕರೆ ಕಾರ್ಖಾನೆಗಳಲ್ಲಿ ಈಗ ಸ್ಪರ್ಧೆ ಹೆಚ್ಚಾಗಿದೆ. ಕಾರ್ಖಾನೆಯಲ್ಲಿ ತಯಾರಿಸಿದ ಉತ್ಪನ್ನದ ಬೇಡಿಕೆಯೂ ಕುಸಿತವಾಗಿದ್ದು ಆರ್ಥಿಕ ಹೊಡೆತ ಬಿದ್ದಿದೆ’ ಎಂದು ಸಕ್ಕರೆ ಕಾರ್ಖಾನೆ ಮಾಲೀಕರು ಅಳಲು ತೋಡಿಕೊಂಡರು. ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆದ ಸಂಧಾನ ಸಭೆಯಲ್ಲಿ ಮಾತನಾಡಿದ ಮಾಲೀಕರು ‘ನಮ್ಮ ಕಾರ್ಖಾನೆಯಲ್ಲಿ ತಯಾರಿಸಿದ ಸಕ್ಕರೆಯನ್ನು ಬೇರೆ ದೇಶಕ್ಕೆ ರಫ್ತು ಮಾಡಲು ಆಗುತ್ತಿಲ್ಲ. ಬ್ರೇಜಿಲ್ ಸಕ್ಕರೆ ಜೊತೆ ಸ್ಪರ್ಧೆ ಮಾಡುವ ಸಾಮರ್ಥ್ಯ ನಮ್ಮ ಸಕ್ಕರೆಗಿಲ್ಲ’ ಎಂದರು. ‘ನಾವು ಉತ್ಪಾದಿಸುವ ಸಕ್ಕರೆ ಇಥೆನಾಲ್ ಹಾಗೂ ಇತರೆ ಉತ್ಪನ್ನಗಳನ್ನು ಮಾರಲು ಹಲವು ವರ್ಷ ಕಾಯಬೇಕಿದೆ. ಉತ್ಪನ್ನಕ್ಕೆ ಬೇಡಿಕೆ ಇದ್ದರೆ ಮಾತ್ರ ಲಾಭ. ಈಗ ಆ ಸ್ಥಿತಿಯಿಲ್ಲ. ಎಲ್ಲ ಕಾರ್ಖಾನೆಗಳು ನಷ್ಟದಲ್ಲಿವೆ. ಈ ಬಗ್ಗೆ ಸರ್ಕಾರಕ್ಕೂ ನಮ್ಮ ಮನವಿ ಸಲ್ಲಿಸಿದ್ದೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.