ADVERTISEMENT

9 ವರ್ಷದ ಬಾಲಕನಲ್ಲಿ ‘ಗೀಲನ್‌ ಬಾರೆ’ ಸೋಂಕು?

​ಪ್ರಜಾವಾಣಿ ವಾರ್ತೆ
Published 17 ಜನವರಿ 2026, 5:12 IST
Last Updated 17 ಜನವರಿ 2026, 5:12 IST
   

ಹಾವೇರಿ: ಜಿಲ್ಲೆಯ ಹಿರೇಕೆರೂರು ತಾಲ್ಲೂಕಿನ ಹಂಸಬಾವಿಯಲ್ಲಿ 9 ವರ್ಷದ ಬಾಲಕನೊಬ್ಬನ ದೇಹ ಸ್ವಾಧೀನ ಕಳೆದುಕೊಂಡಿದ್ದು, ಈತನಲ್ಲಿ ‘ಗೀಲನ್‌ ಬಾರೆ’(ಜಿಬಿಎಸ್‌) ಸೋಂಕು ಇರುವ ಶಂಕೆ ವ್ಯಕ್ತವಾಗಿದೆ.

ಬಾಲಕನನ್ನು ದಾವಣಗೆರೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲಿಯ ವೈದ್ಯರು ಜಿಬಿಎಸ್ ಪರೀಕ್ಷೆ ಮಾಡಿದ್ದು, ಅದು ದೃಢಪಟ್ಟಿರುವುದಾಗಿ ಕುಟುಂಬಸ್ಥರು ತಿಳಿಸಿದ್ದಾರೆ.

ಬಾಲಕನಲ್ಲೊ ಜಿಬಿಎಸ್ ಇರುವ ಬಗ್ಗೆ ಹಾವೇರಿ ಜಿಲ್ಲಾಡಳಿತದ ಅಧಿಕಾರಿಗಳಿಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ADVERTISEMENT

'ಹಲವು ದಿನಗಳಿಂದ 9 ವರ್ಷದ ಬಾಲಕ ಆರೋಗ್ಯವಾಗಿದ್ದ. ಕೆಲ ದಿನಗಳ ಹಿಂದೆಯಷ್ಟೇ ಬೆಳಿಗ್ಗೆ ಹಾಸಿಗೆಯಿಂದ ಎದ್ದಿರಲಿಲ್ಲ. ಪೋಷಕರು ಎಬ್ಬಿಸಿ ಕೂರಿಸಿದ್ದರು. ಅಷ್ಟಾದರೂ ಬಾಲಕ ಕುಳಿತುಕೊಂಡಿರಲಿಲ್ಲ. ಸ್ವಾಧೀನ ಕಳೆದುಕೊಂಡು ಬಿದ್ದಿದ್ದ' ಎಂದು ಬಾಲಕನ ಪರಿಚಯಸ್ಥರೊಬ್ಬರು ಹೇಳಿದರು.

'ಗಾಬರಿಗೊಂಡಿದ್ದ ಬಾಲಕನನ್ನು ಹಾವೇರಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಅಲ್ಲಿಯ ವೈದ್ಯರು ತಮ್ಮಲ್ಲಿ ಚಿಕಿತ್ಸೆ ಇಲ್ಲವೆಂದು ಹೇಳಿದ್ದರು. ಹೀಗಾಗಿ, ಬಾಲಕನನ್ನು ಸದ್ಯ ದಾವಣಗೆರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ' ಎಂದರು.

'‘ಗೀಲನ್‌ ಬಾರೆ’(ಜಿಬಿಎಸ್‌) ಸೋಂಕು ನರಮಂಡಲಕ್ಕೆ ಸಂಬಂಧಪಟ್ಟ ಅಪರೂಪದ ಆರೋಗ್ಯ ಸಮಸ್ಯೆ. ಇದು ಮನುಷ್ಯನ ದೇಹದೊಳಗಿನ ರೋಗ ನಿರೋಧಕ ವ್ಯವಸ್ಥೆಯ ನರಗಳನ್ನು ಹಾಳು ಮಾಡುತ್ತದೆ. ಜಿಬಿಎಸ್‌ಗೆ ತುತ್ತಾದ ರೋಗಿಯು ದೇಹದ ಸ್ವಾಧೀನ ಕಳೆದುಕೊಳ್ಳುತ್ತಾನೆ. ಆತ ಆರೋಗ್ಯವಾಲು ಸಾಕಷ್ಡು ಸಮಯ ಬೇಕಾಗುತ್ತದೆ. ಆರೋಗ್ಯ ಸರಿಯಾದರೂ ಯಾವುದಾದರೊಂದು ಅಂಗದ ಸಮಸ್ಯೆ ಇದ್ದೇ ಇರುತ್ತದೆಂದು ವೈದ್ಯರು ಹೇಳುತ್ತಿದ್ದಾರೆ. ಬಾಲಕ ಸಹ ಚೇತರಿಸಿಕೊಳ್ಳಲು ತಿಂಗಳು ಹಾಗೂ ಹಲವು ವರ್ಷ ಬೇಕಾಗಬಹುದೆಂದು ಹೇಳುತ್ತಿದ್ದಾರೆ' ಎಂದು ಬಾಲಕನ ಪರಿಚಯಸ್ಥರು ಹೇಳಿದರು.

ಹಂಸಬಾವಿಯ ಬಾಲಕನಲ್ಲಿ ಜಿಬಿಎಸ್ ಇರುವ ಬಗ್ಗೆ ಸದ್ಯಕ್ಕೆ ಮಾಹಿತಿ ಸಿಕ್ಕಿಲ್ಲ. ಈ ಬಗ್ಗೆ ಪರಿಶೀಲಿಸಲಾಗುವುದು.

ಡಾ. ಜಯಾನಂದ, ಜಿಲ್ಲಾ ಆರೋಗ್ಯಾಧಿಕಾರಿ (ಪ್ರಭಾರ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.