ADVERTISEMENT

ಹಾವೇರಿ | ಟಿಇಟಿ ಕಡ್ಡಾಯ: 1.50 ಲಕ್ಷ ಶಿಕ್ಷಕರಲ್ಲಿ ಆತಂಕ: ಶಿಡೇನೂರ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2025, 2:41 IST
Last Updated 8 ಡಿಸೆಂಬರ್ 2025, 2:41 IST
ಬಿ.ಪಿ. ಶಿಡೇನೂರ
ಬಿ.ಪಿ. ಶಿಡೇನೂರ   

ಹಾವೇರಿ: ‘2016ಕ್ಕಿಂತಲೂ ಮೊದಲು ನೇಮಕಗೊಂಡ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಟಿಇಟಿ (ಶಿಕ್ಷಕರ ಅರ್ಹತಾ ಪರೀಕ್ಷೆ) ಕಡ್ಡಾಯಗೊಳಿಸಿ ಸುಪ್ರೀಂಕೋರ್ಟ್ ಆದೇಶ ಹೊರಡಿಸಿದೆ. ಇದರಿಂದಾಗಿ ರಾಜ್ಯದ 1.50 ಲಕ್ಷ ಶಿಕ್ಷಕರು ಆತಂಕದಲ್ಲಿದ್ದಾರೆ’ ಎಂದು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಪಿ. ಶಿಡೇನೂರ ತಿಳಿಸಿದರು.

ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸುಪ್ರೀಂಕೋರ್ಟ್ ಆದೇಶವನ್ನು ಪ್ರಶ್ನಿಸಿ ಸರ್ಕಾರಗಳು ಮೇಲ್ಮನವಿ ಸಲ್ಲಿಸಬೇಕು. ಜೊತೆಗೆ, ಶಿಕ್ಷಕರಿಗೆ ಟಿಇಟಿ ಕಡ್ಡಾಯಗೊಳಿಸದಂತೆ ಕಾಯ್ದೆ ರೂಪಿಸಿ ಜಾರಿಗೆ ತರಬೇಕು’ ಎಂದು ಆಗ್ರಹಿಸಿದರು.

‘ಪ್ರಕರಣವೊಂದರ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್, ಶಿಕ್ಷಕರಿಗೆ ಟಿಇಟಿ ಕಡ್ಡಾಯಗೊಳಿಸಿ ಸೆ. 1ರಂದು ಆದೇಶ ಹೊರಡಿಸಿದೆ. ಈ ಆದೇಶ ಶಿಕ್ಷಕರಿಗೆ ಆಘಾತವನ್ನುಂಟು ಮಾಡಿದೆ. ಸುಮಾರು ವರ್ಷಗಳಿಂದ ಶಿಕ್ಷಕರಾಗಿ ಕೆಲಸ ಮಾಡುತ್ತಿರುವ ಪ್ರತಿಯೊಬ್ಬ ಶಿಕ್ಷಕರು, ಟಿಇಟಿ ಬರೆಯುವುದನ್ನು ಕಡ್ಡಾಯಗೊಳಿಸಲಾಗಿದೆ. ಎರಡು ವರ್ಷಗಳ ಅವಧಿಯಲ್ಲಿ ಟಿಇಟಿ ಉತ್ತೀರ್ಣರಾಗದಿದ್ದರೆ ಅಂಥ ಶಿಕ್ಷಕರನ್ನು ಸೇವೆಯಿಂದ ನಿವೃತ್ತಿಗೊಳಿಸುವ ಹಾಗೂ ವಜಾಗೊಳಿಸುವಂತೆಯೂ ಆದೇಶದಲ್ಲಿ ತಿಳಿಸಿರುವುದು ಆತಂಕವನ್ನುಂಟು ಮಾಡಿದೆ’ ಎಂದರು.

ADVERTISEMENT

‘2016ಕ್ಕಿಂತಲೂ ಮೊದಲು ಸಿಇಟಿ ನಡೆಯುತ್ತಿತ್ತು. ಅದೇ ಸಂದರ್ಭದಲ್ಲಿ ಹಲವರು ಶಿಕ್ಷಕರಾಗಿ ನೇಮಕಗೊಂಡು, ಇಂದಿಗೂ ಶಾಲೆಗಳಲ್ಲಿ ಪಾಠ ಮಾಡುತ್ತಿದ್ದಾರೆ. 25 ವರ್ಷದಿಂದ 40 ವರ್ಷದ ಅನುಭವ ಹೊಂದಿದ್ದಾರೆ. ಇಂಥ ಶಿಕ್ಷಕರಿಗೆ ಟಿಇಟಿ ಕಡ್ಡಾಯ ಮಾಡುತ್ತಿರುವುದು ಸರಿಯಲ್ಲ. ಬೋಧನೆಯಲ್ಲಿ ಪಳಗಿರುವ ಶಿಕ್ಷಕರಿಗೆ ಪರೀಕ್ಷೆ ಮೂಲಕ ಅಪಮಾನ ಮಾಡಲಾಗುತ್ತಿದೆ. ಈ ಟಿಇಟಿ ಕಡ್ಡಾಯ ಆದೇಶವನ್ನು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಪ್ರಶ್ನಿಸಬೇಕು. ತಮ್ಮ ವ್ಯಾಪ್ತಿಯಲ್ಲಿ ಕಾಯ್ದೆಯನ್ನು ರೂಪಿಸಿ, ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಬೇಕು’ ಎಂದು ಆಗ್ರಹಿಸಿದರು.

‘ಕಾಯ್ದೆ ರೂಪಿಸುವ ಬಗ್ಗೆ ಪ್ರಧಾನ ಮಂತ್ರಿ, ಕಾನೂನು ಮಂತ್ರಿ ಹಾಗೂ ಸಂಸದರಿಗೆ ಮನವಿ ಸಲ್ಲಿಸಲಾಗಿದೆ. ಈಗಾಗಲೇ ಆರಂಭವಾಗಿರುವ ಲೋಕಸಭೆ ಅಧಿವೇಶನದಲ್ಲಿ ಟಿಇಟಿ ಬಗ್ಗೆ ಚರ್ಚಿಸಿ ಕಾಯ್ದೆ ರೂಪಿಸುವ ಬಗ್ಗೆ ತೀರ್ಮಾನಿಸುವಂತೆ ಸಂಸದ ಬಸವರಾಜ ಬೊಮ್ಮಾಯಿ ಅವರಿಗೂ ಮನವಿ ನೀಡಲಾಗಿದೆ’ ಎಂದರು.

‘ಶಿಕ್ಷಕರಿಗೆ ಟಿಇಟಿ ಕಡ್ಡಾಯ ಮಾಡುವುದಿಲ್ಲವೆಂದು ರಾಜ್ಯ ಸರ್ಕಾರ ಈಗಾಗಲೇ ಸಚಿವ ಸಂಪುಟದಲ್ಲಿ ತೀರ್ಮಾನಿಸಿರುವುದು ಸ್ವಾಗತಾರ್ಹ. ಆದರೆ, ಈ ತೀರ್ಮಾನ ಕಾಯ್ದೆ ರೂಪದಲ್ಲಿ ಜಾರಿಯಾಗಬೇಕು’ ಎಂದು ಅವರು ಒತ್ತಾಯಿಸಿದರು.

‘ರಾಜ್ಯದ 1.50 ಲಕ್ಷ ಶಿಕ್ಷಕರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ, ಶಿಕ್ಷಕರು ಗಂಭೀರ ಸ್ವರೂಪದ ಹೋರಾಟಕ್ಕೆ ಸಿದ್ಧರಾಗಬೇಕಾದ ಪರಿಸ್ಥಿತಿ ಬರಬಹುದು’ ಎಂದು ಅವರು ಎಚ್ಚರಿಸಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಬಸವರಾಜ ಚಲ್ಲಾಳ, ಸಹ ಕಾರ್ಯದರ್ಶಿ ಈರನಗೌಡ ಅಗಸಿಬಾಗಿಲ, ಶಿವಯೋಗಿ ಆಲದಕಟ್ಟಿ, ಮಕ್ಬುಲ್ ಲಿಂಗದಹಳ್ಳಿ ಪತ್ರಿಕಾಗೋಷ್ಠಿಯಲ್ಲಿದ್ದರು.

‘ಶೇ 80ರಷ್ಟು ಶಾಲೆಗಳಲ್ಲಿ ಮುಖ್ಯ ಶಿಕ್ಷಕರಿಲ್ಲ’

‘ಶಿಕ್ಷಕರಿಗೆ ಮುಂಬಡ್ತಿ ನೀಡುವಲ್ಲಿ ಸರ್ಕಾರ ಆಸಕ್ತಿ ತೋರುತ್ತಿಲ್ಲ. ಜಿಲ್ಲೆಯಲ್ಲಿರುವ ಪ್ರಾಥಮಿಕ ಶಾಲೆಗಳ ಪೈಕಿ ಶೇ 80ರಷ್ಟು ಶಾಲೆಗಳಲ್ಲಿ ಮುಖ್ಯಶಿಕ್ಷಕರಿಲ್ಲ. ಲಭ್ಯವಿರುವ ಶಿಕ್ಷಕರೇ ಮುಖ್ಯ ಶಿಕ್ಷಕ ಹುದ್ದೆ ನಿರ್ವಹಣೆ ಮಾಡುತ್ತಿದ್ದಾರೆ’ ಎಂದು ಬಿ.ಪಿ. ಶಿಡೇನೂರ ತಿಳಿಸಿದರು. ‘ಮುಖ್ಯ ಶಿಕ್ಷಕರು ಇಲ್ಲದಿದ್ದರಿಂದ ಪ್ರಮುಖ ತೀರ್ಮಾನಗಳನ್ನು ಕೈಗೊಳ್ಳಲು ಆಗುತ್ತಿಲ್ಲ. ಆಡಳಿತಾತ್ಮಕವಾಗಿಯೂ ಕೆಲಸಕ್ಕೆ ತೊಂದರೆ ಉಂಟಾಗಿದೆ. ಸರ್ಕಾರ ಕೂಡಲೇ ಅರ್ಹ ಶಿಕ್ಷಕರಿಗೆ ಬಡ್ತಿ ನೀಡಿ ಮುಖ್ಯ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಬೇಕು’ ಎಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.