ADVERTISEMENT

ಹಾನಗಲ್: ಗ್ರಾಮೀಣ ವಿದ್ಯಾರ್ಥಿಗಳ ಆಶಾಕಿರಣ

ಮಲ್ಲಿಗಾರ ಗುಡ್ಡದ ಸರ್ಕಾರಿ ಕಾಲೇಜಿಗೆ ‘ರೂಸಾ’ ಅಡಿಯಲ್ಲಿ ₹2 ಕೋಟಿ ಅನುದಾನ ಬಿಡುಗಡೆ

ಮಾರುತಿ ಪೇಟಕರ
Published 8 ಏಪ್ರಿಲ್ 2021, 15:27 IST
Last Updated 8 ಏಪ್ರಿಲ್ 2021, 15:27 IST
ಹಾನಗಲ್‌ ಸಮೀಪದ ಮಲ್ಲಿಗಾರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು 
ಹಾನಗಲ್‌ ಸಮೀಪದ ಮಲ್ಲಿಗಾರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು    

ಹಾನಗಲ್: ಪಟ್ಟಣಕ್ಕೆ ಸಮೀಪದ ಮಲ್ಲಿಗಾರ ಗುಡ್ಡದಲ್ಲಿ ಸ್ಥಾಪಿತವಾಗಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಗ್ರಾಮೀಣ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಪೂರಕವಾಗಿ ಅಗತ್ಯ ಶೈಕ್ಷಣಿಕ ಸೌಲಭ್ಯಗಳನ್ನು ಅಳವಡಿಸಿಕೊಂಡಿದೆ.

2007–08ನೇ ಸಾಲಿನಲ್ಲಿ ಆರಂಭಗೊಂಡ ಕಾಲೇಜು ತಾತ್ಕಾಲಿಕ ಕಟ್ಟಡದಲ್ಲಿ ನಡೆಯುತ್ತಿತ್ತು. 2012ರಲ್ಲಿ ಮಲ್ಲಿಗಾರದಲ್ಲಿ ಬೃಹತ್‌ ಕಾಲೇಜು ಕಟ್ಟಡ ಮೈದಳೆಯಿತು. ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಂಡ ಬಳಿಕ ಕಾಲೇಜಿನಲ್ಲಿ ಶೈಕ್ಷಣಿಕ ವಾತಾವರಣ ಸಾಕಷ್ಟು ಅಭಿವೃದ್ಧಿ ಕಂಡಿದೆ. ಬಿ.ಎ, ಬಿ.ಕಾಂ ಜೊತೆಗೆ ಇತ್ತೀಚೆಗೆ ಬಿಎಸ್‌ಸಿ ಪದವಿ ಕೋರ್ಸ್‌ಗಳು, ಎಂ.ಎ ಕನ್ನಡ ಮತ್ತು ಎಂ.ಕಾಂ ಸ್ನಾತಕೋತ್ತರ ವಿಭಾಗಗಳು ಆರಂಭಗೊಂಡಿವೆ.

ಈ ಕಾಲೇಜಿನಲ್ಲಿ ಒಟ್ಟು 898 ವಿದ್ಯಾರ್ಥಿಗಳಿದ್ದಾರೆ. ಎನ್‌.ಎಸ್.‌ಎಸ್‌ ಘಟಕ, ಯೂತ್‌‌ ರೆಡ್‌ಕ್ರಾಸ್‌, ಸ್ಕೌಟ್ಸ್‌ ಅಂಡ್‌ ಗೈಡ್ಸ್‌ ಮತ್ತಿತರ ಸಾಂಸ್ಕೃತಿಕ ಚಟುವಟಿಕೆಗಳ ಪ್ರತ್ಯೇಕ ಘಟಕಗಳಿದ್ದು, ಪಠ್ಯೇತರ ಚಟುವಟಿಕೆಗಳಿಗೂ ಆದ್ಯತೆ ನೀಡಲಾಗುತ್ತಿದೆ.

ADVERTISEMENT

10 ಬೋಧಕ ಮತ್ತು 3 ಜನ ಬೋಧಕೇತರ ಸಿಬ್ಬಂದಿ ಇದ್ದಾರೆ. 5 ಶಿಕ್ಷಕರು ಹೊರಗುತ್ತಿಗೆ ಮೇಲೆ ಸೇವೆ ಸಲ್ಲಿಸುತ್ತಿದ್ದಾರೆ. ಕಾಲೇಜು ಆವರಣದಲ್ಲಿ ಕಾಲೇಜು ಸಿಬ್ಬಂದಿ ವಸತಿ ಗೃಹಗಳ ಸಂಕೀರ್ಣ ಇರುವುದು ಈ ಕಾಲೇಜಿನ ವಿಶೇಷತೆ.

ಗ್ರಂಥಾಲಯ, ಗಣಕಯಂತ್ರ ಪ್ರಯೋಗಾಲಯವನ್ನು ಅಭಿವೃದ್ಧಿಪಡಿಸಲಾಗಿದೆ. ವಿದ್ಯಾರ್ಥಿಗಳ ಬರಹ ಕೌಶಲಕ್ಕಾಗಿ ‘ಜ್ಞಾನ ದೀವಿಗೆ’ ಪತ್ರಿಕೆ ಹೊರತರಲಾಗುತ್ತಿದೆ. ತರಗತಿ ಕೊಠಡಿಗಳಲ್ಲಿ ಪ್ರೊಜೆಕ್ಟರ್‌, ಸ್ಮಾಟ್‌ಬೋರ್ಡ್‌ ಅಳವಡಿಸಲಾಗಿದೆ. ಸ್ಪೋಕನ್ ಇಂಗ್ಲೀಷ್‌, ವ್ಯಕ್ತಿತ್ವ ವಿಕಸನ, ಉದ್ಯೋಗ ಕೌಶಲದ ವಿಶೇಷ ತರಗತಿಗಳು ನಡೆಯುತ್ತವೆ. ಉದ್ಯೋಗ ಮೇಳವನ್ನೂ ಆಯೋಜಿಸಲಾಗುತ್ತದೆ.

‘ನಮ್ಮ ಕಾಲೇಜು ಯುಜಿಸಿ ಬಿ ಪ್ಲಸ್‌ ಮಾನ್ಯತೆ ಪಡೆದಿದೆ. ರೂಸಾ (ರಾಷ್ಟ್ರೀಯ ಉಚ್ಚತರ ಶಿಕ್ಷಾ ಅಭಿಯಾನ) 2.0ಗೆ ಸೇರ್ಪಡೆಗೊಂಡಿದೆ. ಹೀಗಾಗಿ ರೂಸಾ ಅಡಿಯಲ್ಲಿ ₹2 ಕೋಟಿ ಅನುದಾನ ಲಭ್ಯವಾಗಿದೆ. ₹1 ಕೋಟಿಯಲ್ಲಿ ಪ್ರತ್ಯೇಕ ಗ್ರಂಥಾಲಯ, ಪ್ರಯೋಗಾಲಯ ಮತ್ತು ₹1 ಕೋಟಿಯಲ್ಲಿ ಕಾಲೇಜು ನವೀಕರಣ, ಐಸಿಟಿ ಅಳವಡಿಸಲಾಗಿದೆ’ ಎಂದು ಕಾಲೇಜು ಪ್ರಾಚಾರ್ಯ ಮಹಮ್ಮದ್‌‌ ಶರೀಫ್‌ ಹಾನಗಲ್‌ ಹೇಳುತ್ತಾರೆ.

ವಿದ್ಯಾರ್ಥಿಗಳ ಮನೋವಿಕಾಸಕ್ಕಾಗಿ ಸಾಂಸ್ಕೃತಿಕ ಕಾರ್ಯಕ್ರಮ, ಕಾಮರ್ಸ್‌ಡೇ, ಕಲಾವೈಭವ, ಗುಂಪು ಚರ್ಚೆ ಹೀಗೆ ವಿವಿಧ ಚಟುವಟಿಕೆಗಳ ಜೊತೆಯಲ್ಲಿ ಹಲವಾರು ಇಲಾಖೆಗಳ ವಿದ್ಯಾರ್ಥಿ ವೇತನ‌‌ ಪಡೆಯಲು ಸಾಧ್ಯವಾಗುವ ಈ ಕಾಲೇಜು ವಿದ್ಯಾರ್ಥಿಗಳ ನೆಚ್ಚಿನ ಶೈಕ್ಷಣಿಕ ಕೇಂದ್ರವಾಗಿದೆ.

ಕುಂದು–ಕೊರತೆ:

ಮಲ್ಲಿಗಾರ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಗರಿಷ್ಠ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ದಾಖಲಾಗುವ ಪರಿಣಾಮ ಸಹಜವಾಗಿ ಮೂಲ ಸೌಕರ್ಯಗಳ ವ್ಯವಸ್ಥೆ ಪಟ್ಟಿ ಬೆಳೆಯುತ್ತಿದೆ. ಮುಖ್ಯವಾಗಿ ಶುದ್ಧ ಕುಡಿಯುವ ನೀರಿನ ಘಟಕ, ಶೌಚಾಲಯ, ಸಾರಿಗೆ ವ್ಯವಸ್ಥೆ, ಕ್ರೀಡಾಂಗಣ, ಗ್ರಂಥಾಲಯಕ್ಕೆ ಪುಸ್ತಕಗಳು, ಭೌತಶಾಸ್ತ್ರ, ರಸಾಯನಶಾಸ್ತ್ರ, ವಿಜ್ಞಾನ ವಿಷಯದ ಉಪಕರಣಗಳ ಕೊರತೆ ಕಾಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.