
ಹಾವೇರಿ: ‘ಸಮಯ ಅತ್ಯಮೂಲ್ಯ. ಅದರ ಸದ್ಬಳಕೆಯೇ ಸಾಧನೆಯ ಮಂತ್ರ. ಸಮಯವನ್ನು ಸರಿಯಾಗಿ ಬಳಸಿಕೊಂಡು ಬದುಕಿನಲ್ಲಿ ಬರುವ ತೊಂದರೆಗಳನ್ನು ಮೆಟ್ಟಿಲು ಮಾಡಿಕೊಂಡು ಎಲ್ಲರೂ ಸಾಧನೆ ಮಾಡಬೇಕು’ ಎಂದು ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ಹೇಳಿದರು.
ತಾಲ್ಲೂಕಿನ ಹೊಸರಿತ್ತಿಯ ಗಾಂಧಿ ಗ್ರಾಮೀಣ ಗುರುಕುಲ ವಸತಿ ಶಾಲೆಯಲ್ಲಿ ‘ಗುಜರಾತ ಅಂಬುಜಾ ಎಕ್ಸ್‌ಪೋರ್ಟ್ ಕಂಪನಿ’ ಪ್ರಾಯೋಜಕತ್ವದಲ್ಲಿ ವಿದ್ಯಾರ್ಥಿಗಳಿಗೆ ಶೌಚಾಲಯ–ಸ್ನಾನಗೃಹ ಕಟ್ಟಡ ನಿರ್ಮಾಣದ ಭೂಮಿ ಪೂಜೆಯಲ್ಲಿ ಇತ್ತೀಚೆಗೆ ಪಾಲ್ಗೊಂಡು ಅವರು ಮಾತನಾಡಿದರು.
‘ಸಾಧನೆಯ ಶಿಖರ ಏರಿದ ಸ್ವಾಮಿ ವಿವೇಕಾನಂದ, ಮಹಾವಿಜ್ಞಾನಿ ಸಿ.ವಿ. ರಾಮನ, ಅಬ್ದುಲ್ ಕಲಾಂ ಹಾಗೂ ಇತರರು ಮೊದ ಮೊದಲು ನಮ್ಮ–ನಿಮ್ಮೆಲ್ಲರಂತೆ ಸಾಮಾನ್ಯರಾಗಿದ್ದರು. ಸಮಯಾವಕಾಶ ಕಲ್ಪಿಸುವಲ್ಲಿ ಆ ಭಗವಂತ ಯಾರಿಗೂ ತಾರತಮ್ಯ ತೋರಿಲ್ಲ. ಪ್ರತಿಯೊಬ್ಬರಿಗೂ 24 ಗಂಟೆ ಸಮಯ ಲಭ್ಯವಾಗುತ್ತದೆ. ಈ ಸಮಯವನ್ನು ಸಾಧ್ಯವಾದಷ್ಟು ಸದ್ಬಳಕೆ ಮಾಡಿಕೊಂಡವರು ಸಿದ್ದಿ ಸಾಧಕರಾಗಿ ಆದರ್ಶಪ್ರಾಯರಾಗುತ್ತಾರೆ’ ಎಂದರು.
ಕಂಪನಿಯ ನಿರ್ದೇಶಕ ಸಂದೀಪ ಅಗರ್ವಾಲ್ ಮಾತನಾಡಿ, ‘ಇಲ್ಲಿಯ ಗಾಂಧಿ ತತ್ವಾದರ್ಶಗಳು ಇನ್ನೂ ಜೀವಂತವಾಗಿರುವುದನ್ನು ನೋಡಿ ಖುಷಿಯಾಗುತ್ತದೆ. ನಮ್ಮ ಪ್ರಾಯೋಜಕತ್ವವೂ ಸಾರ್ಥಕವಾಗಲಿದೆ’ ಎಂದರು.
ಜಿಲ್ಲಾಧಿಕಾರಿ ವಿಜಯ ಮಹಾಂತೇಶ, ಕಂಪನಿಯ ಸಂದೀಪ ಅಗರ್ವಾಲ್, ರಾಜೇಂದ್ರ ಹೊಸಮಠ, ಮಾನವ ಸಂಪನ್ಮೂಲ ಅಧಿಕಾರಿ ಆನಂದ ಹರ್ತಿ ಅವರನ್ನು ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು.
ನಿವೃತ್ತ ಮುಖ್ಯಶಿಕ್ಷಕ ಆರ್.ಎಸ್. ಪಾಟೀಲ, ಗಿರೀಶ ಅಂಕಲಕೋಟಿ, ಶಂಭುಲಿಂಗಪ್ಪ ಅರಳಿ, ದಯಾನಂದ ಕಲಕೋಟಿ, ಪ್ರಭುಲಿಂಗಪ್ಪ ಗೌರಿಮನಿ, ಎಂ.ಎಂ. ವಗ್ಗಣ್ಣನವರ, ಚಂದ್ರಶೇಖರ ಅರಳಿಹಳ್ಳಿ, ನಾಗರಾಜ ನೀಲಣ್ಣನವರ, ಕೃಷಾಜೀ ಡೊಳ್ಳೆಣ್ಣನವರ, ಪ್ರಾಂಶುಪಾಲ ಎಫ್.ಆಯ್. ಶಿಗ್ಲಿ, ಮುಖ್ಯ ಶಿಕ್ಷಕ ಎನ್.ಎಂ. ಹಸರಡ್ಡಿ, ಗೀತಾ ಮರಡೂರ, ಜಿ.ಪಿ. ಕೋರಿ ಹಾಗೂ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.