ADVERTISEMENT

ಹಾವೇರಿ: ಉಕ್ಕಿದ ತುಂಗಭದ್ರಾ: ಬೆಳೆ ಹಾನಿ

​ಪ್ರಜಾವಾಣಿ ವಾರ್ತೆ
Published 24 ಜುಲೈ 2021, 16:32 IST
Last Updated 24 ಜುಲೈ 2021, 16:32 IST
ತುಂಗಭದ್ರಾ ನದಿ ಶನಿವಾರ ಉಕ್ಕಿ ಹರಿದ ಪರಿಣಾಮ ಮಾಕನೂರಿನ ತಿಪ್ಪಣ್ಣ ಗೋವಿಂದಪ್ಪ ಬಾರ್ಕಿ ಅವರಿಗೆ ಸೇರಿದ ಒಂದು ಎಕರೆ ಟೊಮೆಟೊ ಬೆಳೆ ಸಂಪೂರ್ಣವಾಗಿ ಜಲಾವೃತವಾಗಿರುವುದು
ತುಂಗಭದ್ರಾ ನದಿ ಶನಿವಾರ ಉಕ್ಕಿ ಹರಿದ ಪರಿಣಾಮ ಮಾಕನೂರಿನ ತಿಪ್ಪಣ್ಣ ಗೋವಿಂದಪ್ಪ ಬಾರ್ಕಿ ಅವರಿಗೆ ಸೇರಿದ ಒಂದು ಎಕರೆ ಟೊಮೆಟೊ ಬೆಳೆ ಸಂಪೂರ್ಣವಾಗಿ ಜಲಾವೃತವಾಗಿರುವುದು   

ಕುಮಾರಪಟ್ಟಣ: ತುಂಗಭದ್ರಾ ನದಿ ನೀರು ನುಗ್ಗಿ 1 ಎಕರೆ ಕೈಗೆ ಬಂದ ಟೊಮೆಟೊ ಜಲಾವೃವಾಗಿದೆ. ಇದರ ಜೊತೆಗೆ ಬೆಂಡೆ, ಚವಳಿಕಾಯಿ ಸೇರಿದಂತೆ ಚೆಂಡು ಹೂವು ಹಾಳಾಗಿದೆ. ಇದರಿಂದ ₹ 1.5 ಲಕ್ಷ ನಷ್ಟವಾಗಿದೆ ಎಂದು ರೈತ ತಿಪ್ಪಣ್ಣ ಗೋವಿಂದಪ್ಪ ಬಾರ್ಕಿ ಅಳಲು ತೋಡಿಕೊಂಡರು.

ನದಿಯ ಒಳಹರಿವು ಹೆಚ್ಚಾಗಿ ನದಿಪಾತ್ರದ ಗ್ರಾಮಗಳಲ್ಲಿ ಹೊಲ ಗದ್ದೆಗಳಿಗೆ ನೀರು ನುಗ್ಗಿದೆ. ರೈತರ ಬೆಳೆಗಳು ಅಕ್ಷರಶಃ ಜಲಾವೃತಗೊಂಡಿವೆ. ಮಳೆಯ ಪ್ರಮಾಣ ಕಡಿಮೆಯಾದರೂ ಪ್ರವಾಹದ ಭೀತಿ ಕಡಿಮೆಯಾಗಿಲ್ಲ ಎಂದು ರೈತ ಮುಖಂಡ ಹನುಮಂತಪ್ಪ ಕುಂಬಳೂರು ಹೇಳಿದರು.

ಒಂದು ಕಡೆ ಬೆಲೆ ಕುಸಿತ, ಮತ್ತೊಂದು ಕಡೆ ಅತಿವೃಷ್ಟಿ ಹಾಗೂ ಅನಾವೃಷ್ಟಿಗೆ ರೈತರ ಬದುಕು ತುತ್ತಾಗಿದೆ. ಇಂಥ ಸಂಕಷ್ಟದಲ್ಲೂ ರಾಜ್ಯ ಮತ್ತು ಕೇಂದ್ರ ಸರ್ಕಾರ ಸ್ಪಂದಿಸುತ್ತಿಲ್ಲ. ರೈತರನ್ನು ಕಡೆಗಣಿಸಲಾಗಿದೆ ಎಂದು ದೂರಿದರು.
ತುಂಗಭದ್ರಾ ನದಿ ತೀರದ ಜಮೀನುಗಳಲ್ಲಿ ಬೆಳೆದಂತಹ ಸೇವಂತಿಗೆ, ಬೆಳ್ಳುಳ್ಳಿ, ಮೆಕ್ಕೆಜೋಳ, ತರಕಾರಿ ಸೇರಿದಂತೆ ಪ್ರಮುಖ ವಾಣಿಜ್ಯ ಬೆಳೆಗಳಿಗೆ ಹಾನಿಯಾಗಿದೆ. ನೂರಾರು ಎಕರೆ ಕಬ್ಬು, ಭತ್ತ, ಬಾಳೆ, ತೆಂಗು, ಅಡಿಕೆ ಬೆಳೆಗಳು ಜಲಾವೃತಗೊಂಡಿವೆ.ನೆರೆಹಾವಳಿಯಿಂದ ಬೆಳೆ ಕಳೆದುಕೊಂಡ ರೈತರಿಗೆ ವೈಜ್ಞಾನಿಕ ಬೆಲೆ ಮಾದರಿಯಲ್ಲಿ ಬೆಳೆ ನಷ್ಟ ಪರಿಹಾರ ಕೊಡಬೇಕು. ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸಂಘಟನಾ ಕಾರ್ಯದರ್ಶಿ ರವೀಂದ್ರಗೌಡ ಪಾಟೀಲ ತಿಳಿಸಿದರು.

ADVERTISEMENT

ನದಿ ನೀರಿನ ಪ್ರಮಾಣ ಇನ್ನಷ್ಟು ಹೆಚ್ಚಾಗಿ ಅಪಾಯಕ್ಕೆ ಸಿಲುಕುವ ಮುನ್ಸೂಚನೆಯಿದೆ. ಸರ್ಕಾರ ಮತ್ತು ಇಲಾಖೆ ಸೂಚನೆ ಮೇರೆಗೆ ತಗ್ಗು ಪ್ರದೇಶದಲ್ಲಿದ್ದ 5 ಕುಟುಂಬಗಳನ್ನು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ಥಾಪಿಸಿರುವ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಒಟ್ಟು 25 ಜನರಿಗೆ ಊಟ ವಸತಿ ಕಲ್ಪಿಸಲಾಗಿದೆ ಎಂದು ಮಾಕನೂರು ಗ್ರಾಮ ಪಂಚಾಯಿತಿ ಪಿಡಿಒ ನಾಗರಾಜ್ ಬಾತಿ ತಿಳಿಸಿದರು.

ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಚಂದ್ರಪ್ಪ ಬೇವಿನಮರದ, ಗ್ರಾಮ ಲೆಕ್ಕಾಧಿಕಾರಿ ಬಸವರಾಜ್ ಗುಳೇದ, ಸಿಆರ್‌ಪಿ ರಾಜು ಉಕ್ಕುಂದ, ಭೀಮೇಶ್ ಚಿನ್ನಣ್ಣನವರ, ಶಿವನಗೌಡ ಉಳವಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.