ADVERTISEMENT

ಹಂಸಭಾವಿ: ಅಡುಗೆ ಮನೆ, ಶೌಚಾಲಯ ಎದುರು ಪಾಠ

​ಪ್ರಜಾವಾಣಿ ವಾರ್ತೆ
Published 31 ಜುಲೈ 2025, 2:10 IST
Last Updated 31 ಜುಲೈ 2025, 2:10 IST
<div class="paragraphs"><p>ಹಿರೇಕೆರೂರು ತಾಲ್ಲೂಕಿನ ಹಂಸಭಾವಿ ಗ್ರಾಮದ ಹಿರಿಯ ಪ್ರಾಥಮಿಕ ಉರ್ದು ಶಾಲೆಯ ಮಕ್ಕಳು ಅಡುಗೆ ಮನೆಯಲ್ಲಿ ಪಾಠ ಕೇಳುತ್ತಿರುವುದು</p></div>

ಹಿರೇಕೆರೂರು ತಾಲ್ಲೂಕಿನ ಹಂಸಭಾವಿ ಗ್ರಾಮದ ಹಿರಿಯ ಪ್ರಾಥಮಿಕ ಉರ್ದು ಶಾಲೆಯ ಮಕ್ಕಳು ಅಡುಗೆ ಮನೆಯಲ್ಲಿ ಪಾಠ ಕೇಳುತ್ತಿರುವುದು

   

ಹಿರೇಕೆರೂರ: ತಾಲ್ಲೂಕಿನ ಹಂಸಭಾವಿ ಗ್ರಾಮದಲ್ಲಿರುವ ಹಿರಿಯ ಪ್ರಾಥಮಿಕ ಉರ್ದು ಶಾಲೆಯ ಕೊಠಡಿಗಳು ಸಂಪೂರ್ಣ ಶಿಥಿಲಗೊಂಡಿದ್ದು, ಅಡುಗೆ ಮನೆ ಹಾಗೂ ಶೌಚಾಲಯವಿರುವ ಕೊಠಡಿಯಲ್ಲಿ ಮಕ್ಕಳಿಗೆ ಪಾಠ ಮಾಡುವ ಸ್ಥಿತಿಯಿದೆ.

ಹಂಸಬಾವಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಉರ್ದು ಮಾಧ್ಯಮದ ಮಕ್ಕಳ ಶಿಕ್ಷಣಕ್ಕಾಗಿ 1938ರಲ್ಲಿ ಈ ಶಾಲೆ ಪ್ರಾರಂಭಿಸಲಾಗಿತ್ತು. ಸದ್ಯ ಈ ಶಾಲೆಯಲ್ಲಿ 91 ಮಕ್ಕಳು (64–ಬಾಲಕಿಯರು ಹಾಗೂ 27–ಬಾಲಕರು) ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇವರೆಲ್ಲರೂ ಹಾಳಾದ ಕೊಠಡಿಯಲ್ಲಿಯೇ ಜೀವಭಯದಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ.

ADVERTISEMENT

ಹಂಚಿನ ಕೊಠಡಿಗಳಲ್ಲಿ ಶಾಲೆ ಆರಂಭವಾಗಿತ್ತು. ಪ್ರಾರಂಭದ ದಿನಗಳಲ್ಲಿ ಉತ್ತಮ ಸೌಕರ್ಯವೂ ಇತ್ತು. ಮಲೆನಾಡಿಗೆ ಹೊಂದಿಕೊಂಡಿರುವ ಹಂಸಬಾವಿಯಲ್ಲಿ ಹೆಚ್ಚು ಮಳೆ ಸುರಿಯುತ್ತದೆ. ಈ ಮಳೆಯಿಂದಾಗಿ ಹಂಚಿನ ಕೊಠಡಿಗಳು ಕ್ರಮೇಣ ಶಿಥಿಲಗೊಂಡಿವೆ.

ಹಂಚುಗಳು ಹಾರಿ ಹೋಗಿದ್ದು, ಹಂಚಿನ ಕೆಳಗಿನ ಕಟ್ಟಿಗೆಗಳು ಬಾಯ್ತೆರೆದು ಬೀಳುವ ಸ್ಥಿತಿಯಲ್ಲಿವೆ. ಗೋಡೆಗಳು ಬಿರುಕು ಬಿಟ್ಟಿದ್ದು, ಇಟ್ಟಿಗೆಗಳು ಹೊರಗೆ ಕಾಣುತ್ತಿವೆ. 

ಆವರಣದಲ್ಲಿ 9 ಕೊಠಡಿಗಳಿದ್ದವು. ಅದರಲ್ಲಿ 6 ಕೊಠಡಿಗಳು ಶಿಥಿಲಗೊಂಡಿವೆ. ಅವುಗಳ ತೆರವಿಗೆ ಶಾಲೆಯ ಶಿಕ್ಷಕರು, ಶಿಕ್ಷಣ ಇಲಾಖೆಗೆ ಮನವಿ ಸಲ್ಲಿಸಿದ್ದಾರೆ. ಆದರೆ, ಇದುವರೆಗೂ ಕೊಠಡಿ ತೆರವು ಮಾಡಿಲ್ಲ. ಯಾವಾಗ ಬೇಕಾದರೂ ಕೊಠಡಿ ಬೀಳುವ ಆತಂಕವಿದೆ.

ಹಳೇಯ ಅಡುಗೆ ಕೊಠಡಿ, ಶೌಚಾಲಯವಿರುವ ಕೊಠಡಿ ಸೇರಿ ಮೂರು ಕೊಠಡಿಗಳು ಮಾತ್ರ ತಕ್ಕಮಟ್ಟಿಗೆ ಚೆನ್ನಾಗಿವೆ. ಈ ಮೂರು ಕೊಠಡಿಗಳಲ್ಲಿಯೇ 91 ಮಕ್ಕಳು ಪಾಠ ಕೇಳುತ್ತಿದ್ದಾರೆ. ಮೂರು ಕೊಠಡಿಗಳಲ್ಲಿ ಪಾಟಿಕಲ್ಲುಗಳು ಹಾಳಾಗಿವೆ. ಆಗಾಗ ಚೇಳುಗಳು ಕಾಣಿಸಿಕೊಳ್ಳುತ್ತಿವೆ.

ನಳ, ಸ್ವಚ್ಛತಾ ಸಾಮಗ್ರಿ ಹಾಗೂ ಇತರೆ ವಸ್ತುಗಳು ಅಡುಗೆ ಕೊಠಡಿಯಲ್ಲಿವೆ. ಕೆಲ ವರ್ಷಗಳ ಹಿಂದೆ ಕಟ್ಟಿಸಿದ್ದ ಶೌಚಾಲಯದ ಎದುರು ಮಕ್ಕಳನ್ನು ಕೂರಿಸಿ ಪಾಠ ಮಾಡಲಾಗುತ್ತಿದೆ.

ಹೆಸರಿಗಷ್ಟೇ ಹೈಟೆಕ್‌ ಶೌಚಾಲಯ: ಶಾಲಾ ಆವರಣದಲ್ಲೂ ಕಸ ತುಂಬಿದೆ. ಎಲ್ಲೆಂದರಲ್ಲಿ ನೀರು ನಿಂತುಕೊಂಡು ಸೊಳ್ಳೆಗಳ ಕಾಟವೂ ವಿಪರೀತವಾಗಿದೆ. ಶಾಲೆ ಆವರಣದಲ್ಲಿ ಹೈಟೆಕ್ ಹೆಸರಿನಲ್ಲಿ ಶೌಚಾಲಯ ನಿರ್ಮಿಸಲಾಗಿದ್ದು, ಅದು ಸಹ ಕಳಪೆಯಾಗಿದೆ.

ನಿರ್ಮಾಣವಾದ ಕೆಲ ತಿಂಗಳಿನಲ್ಲಿಯೇ ಶೌಚಾಲಯ ಹಾಳಾಗಿದ್ದು, ಬಳಕೆಗೆ ಯೋಗ್ಯವಲ್ಲದ ಸ್ಥಿತಿಗೆ ತಲುಪಿದೆ. ಸೂಕ್ತ ಶೌಚಾಲಯದ ವ್ಯವಸ್ಥೆ ಇಲ್ಲದೇ ಬಾಲಕಿಯರ ಸ್ಥಿತಿ ಚಿಂತಾಜನಕವಾಗಿದೆ.

ಮಕ್ಕಳನ್ನು ಶಾಲೆ ಬಿಡಿಸುತ್ತಿರುವ ಪೋಷಕರು!

ಆರ್ಥಿಕವಾಗಿ ಹಿಂದುಳಿದ ಹಾಗೂ ಗ್ರಾಮೀಣ ಮಕ್ಕಳೇ ಹೆಚ್ಚಾಗಿ ಈ ಶಾಲೆಗೆ ಬರುತ್ತಿದ್ದಾರೆ. ಮಕ್ಕಳ ಸ್ಥಿತಿ ನೋಡಿ ಪೋಷಕರೂ ಮರುಕಪಡುತ್ತಿದ್ದಾರೆ. ಶಾಲೆಗೆ ಹೊಸ ಕಟ್ಟಡ ಮಂಜೂರು ಮಾಡಿಸಲು ಆಗದ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಶಾಲೆಯ ಅವ್ಯವಸ್ಥೆ ಕಂಡು ಕೆಲ ಪೋಷಕರು ಒಬ್ಬೊಬ್ಬರಾಗಿ ಮಕ್ಕಳನ್ನು ಶಾಲೆ ಬಿಡಿಸುತ್ತಿದ್ದಾರೆ.

‘ಸರ್ಕಾರಿ ಉರ್ದು ಶಾಲೆಯ ಸ್ಥಿತಿ ಶೋಚನೀಯವಾಗಿದೆ. ಶಿಥಿಲಾವಸ್ಥೆ ತಲುಪುವ ಸ್ಥಿತಿಯಲ್ಲಿರುವ 3 ಕೊಠಡಿಗಳಲ್ಲಿ ಮಕ್ಕಳಿಗೆ ಪಾಠ ಮಾಡಲಾಗುತ್ತಿದೆ. ಮಕ್ಕಳು ಹಾಗೂ ಶಿಕ್ಷಕರು ಇಬ್ಬರೂ ಜೀವ ಭಯದಲ್ಲಿ ದಿನದೂಡುತ್ತಿದ್ದಾರೆ’ ಎಂದು ಪೋಷಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಶಾಲೆಯ ಸ್ಥಿತಿ ಶೋಚನೀಯವಾಗಿದೆ. ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಪರ್ಯಾಯ ವ್ಯವಸ್ಥೆ ಮಾಡುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗೆ ಸೂಚನೆ ನೀಡಲಾಗಿದೆ.
ಶೇಖರಗೌಡ ಜಿ. ರಾಮತ್ನಾಳ, ಸದಸ್ಯ, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ
ಹಿರೇಕೆರೂರು ತಾಲ್ಲೂಕಿನ ಹಂಸಬಾವಿ ಗ್ರಾಮದ ಹಿರಿಯ ಪ್ರಾಥಮಿಕ ಉರ್ದು ಶಾಲೆಯ ಮಕ್ಕಳು ಶೌಚಾಲಯದ ಎದುರು ಪಾಠ ಕೇಳುತ್ತಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.