ADVERTISEMENT

ಹಾವೇರಿ: ‘ಬನ್ನಿ’ ಕೊಟ್ಟು ‘ಬಂಗಾರ’ವೆಂದ ಜನ

ಆಯುಧ ಪೂಜೆ, ವಿಜಯದಶಮಿ; ಜಿಲ್ಲೆಯಾದ್ಯಂತ ಸಡಗರ, ಸಂಭ್ರಮ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2025, 3:16 IST
Last Updated 3 ಅಕ್ಟೋಬರ್ 2025, 3:16 IST
ಹಾವೇರಿಯ ಹೊಸಮಠದಲ್ಲಿ ವಿಜಯದಶಮಿ ನಿಮಿತ್ತ ಬಸವ ಶಾಂತಲಿಂಗ ಸ್ವಾಮೀಜಿ ಅವರು ಮಕ್ಕಳಿಗೆ ಗುರುವಾರ ‘ಬನ್ನಿ’ ನೀಡಿ ಆಶೀರ್ವಾದ ಮಾಡಿದರು
ಹಾವೇರಿಯ ಹೊಸಮಠದಲ್ಲಿ ವಿಜಯದಶಮಿ ನಿಮಿತ್ತ ಬಸವ ಶಾಂತಲಿಂಗ ಸ್ವಾಮೀಜಿ ಅವರು ಮಕ್ಕಳಿಗೆ ಗುರುವಾರ ‘ಬನ್ನಿ’ ನೀಡಿ ಆಶೀರ್ವಾದ ಮಾಡಿದರು   

ಹಾವೇರಿ: ಜಿಲ್ಲೆಯಾದ್ಯಂತ ಆಯುಧ ಪೂಜೆ, ವಿಜಯದಶಮಿ ಹಬ್ಬವನ್ನು ಸಡಗರ ಹಾಗೂ ಸಂಭ್ರಮದಿಂದ ಆಚರಿಸಲಾಯಿತು.

ನಾಡಹಬ್ಬ ದಸರಾದ ಸಂಭ್ರಮ ಜಿಲ್ಲೆಯಾದ್ಯಂತ ಮನೆ ಮಾಡಿತ್ತು. ಕಚೇರಿ, ದೇವಸ್ಥಾನ ಹಾಗೂ ಮನೆಗಳಲ್ಲಿ ವಿಶೇಷ ಪೂಜೆಗಳು ನಡೆದವು.

ಜಿಲ್ಲೆಯಾದ್ಯಂತ ಬುಧವಾರ ಆಯುಧ ಪೂಜೆ ನಡೆಯಿತು. ಬಹುತೇಕರು, ತಮ್ಮ ಮನೆ ಹಾಗೂ ಕಚೇರಿಯಲ್ಲಿರುವ ಎಲ್ಲ ರೀತಿಯ ಆಯುಧಗಳು–ಉಪಕರಣಗಳನ್ನು ಸ್ವಚ್ಛಗೊಳಿಸಿ ಅಲಂಕರಿಸಿ ಪೂಜೆ ಮಾಡಿದರು. ಪರಿಚಯಸ್ಥರನ್ನು ಪೂಜೆಗೆ ಆಹ್ವಾನಿಸಿ ಸಿಹಿ ವಿತರಿಸಿದರು.

ADVERTISEMENT

ವಾಹನಗಳು, ಗ್ಯಾರೇಜ್, ಕಾರ್ಖಾನೆಗಳು, ಪೊಲೀಸ್ ಠಾಣೆ ಶಸ್ತ್ರಾಸ್ತ್ರಗಳು ಸೇರಿದಂತೆ ಎಲ್ಲ ಉಪಕರಣ– ಯಂತ್ರಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಸಂಬಂಧಿಕರು, ಕುಟುಂಬಸ್ಥರು, ಸ್ನೇಹಿತರು ಪೂಜೆಯಲ್ಲಿ ಪಾಲ್ಗೊಂಡಿದ್ದರು.

ವಿಜಯದಶಮಿ ಸಡಗರ: ಜಿಲ್ಲೆಯಾದ್ಯಂತ ವಿಜಯದಶಮಿ ಹಬ್ಬವನ್ನು ಗುರುವಾರ ಸಡಗರದಿಂದ ಆಚರಿಸಲಾಯಿತು.

ಹಾವೇರಿಯ ಗ್ರಾಮ ದೇವತೆ, ದುರ್ಗಾದೇವಿ, ನವದುರ್ಗೆ, ಕಾಳಿಕಾ ದೇವಿ, ವಡ್ಡಮ್ಮದೇವಿ ಹಾಗೂ ಇತರೆ ದೇವಸ್ಥಾನಗಳಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬಂದರು. ಸರದಿಯಲ್ಲಿ ನಿಂತು ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ನಮಸ್ಕರಿಸಿ ಇಷ್ಟಾರ್ಥ ಸಿದ್ಧಿಗಾಗಿ ಬೇಡಿಕೊಂಡರು.

ನಾಡಹಬ್ಬದಂದು ಮಕ್ಕಳು ಹೊಸ ಬಟ್ಟೆಗಳನ್ನು ತೊಟ್ಟು ಓಡಾಡಿದರು. ಹಬ್ಬದ ಸಂಭ್ರಮವನ್ನು ಹೆಚ್ಚಿಸಿದರು. ಹಬ್ಬದ ದಿನದಂದು ಹಲವರು ಹೊಸ ವಾಹನ ಖರೀದಿಸಿ ಪೂಜೆ ಸಲ್ಲಿಸಿದರು. ಕೆಲವರು, ಹೊಸ ಅಂಗಡಿ ಹಾಗೂ ಮಳಿಗೆ ಸೇರಿ ವ್ಯಾಪಾರ ಮಳಿಗೆ ತೆರೆದು ಹೊಸ ವೃತ್ತಿ ಆರಂಭಿಸಿದರು.

ಗುರುವಾರ ರಾತ್ರಿ ಬನ್ನಿ ನೀಡುವ ಕಾರ್ಯಕ್ರಮ ನಡೆಯಿತು. ಪ್ರಮುಖ ದೇವಸ್ಥಾನಗಳಿಂದ ಬನ್ನಿ ಮರವಿರುವ ಜಾಗಕ್ಕೆ ಪಲ್ಲಕ್ಕಿ ಕೊಂಡೊಯ್ಯಲಾಯಿತು. ಬನ್ನಿ ಗಿಡಕ್ಕೆ ಪೂಜೆ ಮಾಡಿದ್ದ ಜನರು, ಬನ್ನಿ ವಿನಿಮಯ ಮಾಡಿಕೊಂಡರು. ಬಳಿಕ, ಮನೆ ಮನೆಗೆ ತೆರಳಿ ಬನ್ನಿ ನೀಡುವ ಕಾರ್ಯಕ್ರಮ ಜರುಗಿತು.

‘ಬನ್ನಿ ತೆಗೆದುಕೊಂಡು ನಾವೆಲ್ಲರೂ ಬಂಗಾರದಂತೆ ಇರೋಣ’ ಎಂದು ಶುಭಾಶಯ ವಿನಿಮಯ ಮಾಡಿಕೊಂಡರು. ಬನ್ನಿಯನ್ನು ಬಂಗಾರವೆಂದು ಭಾವಿಸಿ ಜನರು, ಸಂಪ್ರದಾಯದ ಆಚರಣೆಯನ್ನು ಶ್ರೀಮಂತಗೊಳಿಸಿದರು.

ಜಿಲ್ಲೆಯ ಹಾವೇರಿ, ರಾಣೆಬೆನ್ನೂರು, ಹಿರೇಕೆರೂರು, ರಟ್ಟೀಹಳ್ಳಿ, ಶಿಗ್ಗಾವಿ, ಸವಣೂರು, ಬ್ಯಾಡಗಿ ಹಾಗೂ ಹಾನಗಲ್ ತಾಲ್ಲೂಕಿನಲ್ಲೂ ಹಬ್ಬದ ಸಂಭ್ರಮ ಮನೆ ಮಾಡಿತ್ತು.

ಗ್ರಾಮೀಣ ಪ್ರದೇಶದಲ್ಲೂ ಜನರು ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿದರು. ಜನರು ದೇವಸ್ಥಾನಗಳಿಗೆ ತೆರಳಿ ಪೂಜೆ ಮಾಡಿದರು. ಬನ್ನಿ ನೀಡುವ ಕಾರ್ಯಕ್ರಮವೂ ಗ್ರಾಮೀಣ ಪ್ರದೇಶಗಳಲ್ಲಿ ಅದ್ದೂರಿಯಾಗಿ ನಡೆಯಿತು. ಪ್ರತಿಯೊಬ್ಬರು ಮನೆ ಮನೆಗೆ ಓಡಾಡಿ, ಬನ್ನಿ ನೀಡಿ ಬಂಗಾರದಂತಿರೋಣ ಎಂದು ಹಬ್ಬದ ಶುಭಾಷಯ ಕೋರಿದರು.

ಹಾವೇರಿಯ ರೈಲ್ವೆ ನಿಲ್ದಾಣ ಬಳಿಯ ಹಕ್ಕಲಮರಿಯಮ್ಮ ನವದುರ್ಗಾ ಹಾಗೂ ದೇವಿ ಪಂಚಾಯತ್‌ನ ದೇವಸ್ಥಾನದಲ್ಲಿ ನಾಡಹಬ್ಬ ವಿಜಯದಶಮಿ ನಿಮಿತ್ತ ದೇವಿ ಮೂರ್ತಿಗಳಿಗೆ ಗುರುವಾರ ವಿಶೇಷ ಅಲಂಕಾರ ಮಾಡಲಾಗಿತ್ತು
ಹಾವೇರಿಯ ಹಳೇ ಪಿ.ಬಿ. ರಸ್ತೆಯ ಶಿವಾಜಿನಗರದಲ್ಲಿರುವ ಭುವನೇಶ್ವರಿ (ವಡ್ಡಮ್ಮ) ದೇವಿ ದೇವಸ್ಥಾನದಲ್ಲಿ ವಿಜಯದಶಮಿ ನಿಮಿತ್ತ ದೇವಿ ಮೂರ್ತಿಗೆ ಗುರುವಾರ ವಿಶೇಷ ಅಲಂಕಾರ ಮಾಡಲಾಗಿತ್ತು

ಗ್ರಾಮದೇವಿಗೆ ವಿಶೇಷ ಪೂಜೆ, ಮೆರವಣಿಗೆ

ಸವಣೂರು: ತಾಲ್ಲೂಕಿನ ಹುರಳಿಕುಪ್ಪಿ ಗ್ರಾಮದ ಶ್ರೀ ದ್ಯಾಮವ್ವದೇವಿ ದೇವಸ್ಥಾನದಲ್ಲಿ ನವರಾತ್ರಿಯ ಅಂಗವಾಗಿ ದೇವಿಯ ಮಹಾತ್ಮೆ ಪುರಾಣ ಪ್ರವಚನ ಕಾರ್ಯಕ್ರಮ ಜರಗಿತು.

ಪ್ರತಿ ದಿನ ಬೆಳಿಗ್ಗೆ ದ್ಯಾಮವ್ವ ದೇವಿಗೆ ರುದ್ರಾಭಿಷೇಕ ಹಾಗೂ ವಿಶೇಷ ಪೂಜಾ ಕಾರ್ಯಕ್ರಮ ಜರುಗಿತು. ಬುಧವಾರ ಬೆಳಗ್ಗೆ 9 ಗಂಟೆಗೆ ಶ್ರೀದೇವಿಯ ಪೂಜೆ ನಂತರ ಹಾವೇರಿ ಜಿಲ್ಲೆ ಹಾಲು ಒಕ್ಕೂಟ ನಿರ್ದೇಶಕರಾದ ಶಶಿಧರ ಯಲಿಗಾರ ಭೇಟಿ ನೀಡಿ, ದೇವಿಗೆ ವಿಶೇಷ ಪೂಜೆ ಸಲ್ಲಿಸಿ ನಂತರ ದೇವಿಯ ಮೆರವಣಿಗೆ ಹಾಗೂ ಕುಂಭಮೇಳಕ್ಕೆ ಚಾಲನೆ ನೀಡಿದರು.

ನಂತರ ಪುಟ್ಟರಾಜು ಗವಾಯಿಗಳ ಭಾವಚಿತ್ರ ಹಾಗೂ ಶ್ರೀದೇವಿಯ ಮಹಾತ್ಮೆ ಪುರಾಣ ಗ್ರಂಥದ ಮೆರವಣಿಗೆ, ಮಹಿಳೆಯರ ಕುಂಭಮೇಳ, ಶ್ರೀ ಬೀರಲಿಂಗೇಶ್ವರ ಡೊಳ್ಳಿನ ಮೇಳ ಹಾಗೂ ಬಾಜಾ ಭಜಂತ್ರಿ ಅವರಿಂದ ಮೆರುಗು ಪಡೆದು, ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಗ್ರಾಮ ದೇವತೆಯ ದೇವಸ್ಥಾನಕ್ಕೆ ತಲುಪಿತು. ಪ್ರತಿದಿನ ರಾತ್ರಿಅನ್ನ ಸಂತರ್ಪಣೆ ನೆರವೇರಿತು. ಹುಬ್ಬಳ್ಳಿ ಹೆಸ್ಕಾಂ ಅಧ್ಯಕ್ಷ ಅಜಮಪೀರ ಎಸ್. ಖಾದ್ರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಕುಂಭಮೇಳಕ್ಕೆ ಶುಭ ಹಾರೈಸಿದರು. ಶ್ರೀ ವೀರೇಶ್ವರ ಪುಣ್ಯಾತ್ಮ ಗದಗ ಶಾಸ್ತ್ರಿಗಳಾದ ಶ್ರೀವಿನಯಕುಮಾರ್ ಶಾಸ್ತ್ರಿಗಳು ಸನ್ನಿದಿ ವಹಿಸಿದರು.

ಸಂಗೀತ ಗವಾಯಿಗಳಾದ ಕುಮಾರ ಸ್ವಾಮಿ ಪುಣ್ಯಕೋಟಿ, ದೇವಿಯ ಅರ್ಚಕರಾದ ಈರಣ್ಣ ಬಡಿಗೇರ, ಸಿದ್ದಲಿಂಗಯ್ಯ ಹಿರೇಮಠ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಜೆ. ಮುಲ್ಲಾ, ನಾಗಪ್ಪ ತಿಪ್ಪಕನವರ, ಪಾಂಡಪ್ಪ ತಿಪ್ಪಕವರ, ಎಲ್ಲಪ್ಪ ಇಟಗಿ, ಉಮೇಶ್ ದೊಡ್ಮನಿ, ಬರಮಪ್ಪ ವೈಯಾಳಿ, ಪೂರ್ವಾಚಾರಿ ಬಡಿಗೇರ, ಚನ್ನಪ್ಪ ದೇವಗೇರಿ, ಉಡಚಪ್ಪ ಬಾರ್ಕಿ, ಬಸವರಾಜ ಇಂಗಳಗಿ, ತಮಣ್ಣ ಬಡಿಗೇರ, ಚಿದಂಬರ್ ಕುಲಕರ್ಣಿ, ಡಿ.ಯು. ಅಜ್ಜಣ್ಣವರ, ಪ್ರಕಾಶ್ ಬಾರ್ಕಿ, ಮಹಾಲಿಂಗಪ್ಪ ಕುಂಬಾರ, ವೀರಯ್ಯ ಸಂಕಿನಮಠ, ಈರಣ್ಣ ಯಲಿಗಾರ ಹಾಗೂ ಗ್ರಾಮಸ್ಥರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.