ADVERTISEMENT

ವರದಾ ಹರಿವು ಹೆಚ್ಚಳ: ಗ್ರಾಮಗಳತ್ತ ನುಗ್ಗುತ್ತಿರುವ ನೀರು

​ಪ್ರಜಾವಾಣಿ ವಾರ್ತೆ
Published 21 ಜುಲೈ 2024, 16:09 IST
Last Updated 21 ಜುಲೈ 2024, 16:09 IST
ಹಾವೇರಿ ತಾಲ್ಲೂಕಿನ ಕುಣಿಮೆಳ್ಳಿಹಳ್ಳಿ ಬಳಿ ವರದಾ ನದಿಯ ನೀರು ಅಡಿಕೆ ಜಮೀನಿಗೆ ನುಗ್ಗಿರುವುದು
ಹಾವೇರಿ ತಾಲ್ಲೂಕಿನ ಕುಣಿಮೆಳ್ಳಿಹಳ್ಳಿ ಬಳಿ ವರದಾ ನದಿಯ ನೀರು ಅಡಿಕೆ ಜಮೀನಿಗೆ ನುಗ್ಗಿರುವುದು   

ಹಾವೇರಿ: ಜಿಲ್ಲೆಯಲ್ಲಿ ಹರಿಯುತ್ತಿರುವ ವರದಾ ನದಿಯಲ್ಲಿ ನೀರಿನ ಪ್ರಮಾಣ ಕ್ರಮೇಣ ಹೆಚ್ಚಳವಾಗುತ್ತಿದೆ. ಹಾವೇರಿ ತಾಲ್ಲೂಕಿನ ವರದಹಳ್ಳಿ, ನಾಗನೂರು ಹಾಗೂ ಸುತ್ತಮುತ್ತಲಿನ ಗ್ರಾಮಗಳತ್ತ ನೀರು ನುಗ್ಗಿ ಬರುತ್ತಿದ್ದು, ಮುಂದಿನ ಎರಡು ದಿನಗಳಲ್ಲಿ ನಿರಂತರ ಮಳೆಯಾದರೆ ಗ್ರಾಮದೊಳಗೆ ನೀರು ಸಂಪೂರ್ಣವಾಗಿ ನುಗ್ಗುವ ಸಾಧ್ಯತೆ ಇದೆ.

ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಭಾಗದಲ್ಲಿ ನಿರಂತರವಾಗಿ ಮಳೆಯಾಗುತ್ತಿದೆ. ಇದೇ ನೀರು ವರದಾ ನದಿ ಮೂಲಕ ಜಿಲ್ಲೆಯಲ್ಲಿ ಹರಿಯುತ್ತಿದೆ. ನೀರಿನ ಹರಿವು ಶನಿವಾರ ಹೆಚ್ಚಿತ್ತು. ನದಿ ಅಚ್ಚುಕಟ್ಟಿನ ಜಮೀನುಗಳಿಗೆ ನೀರು ನುಗ್ಗಿತ್ತು. ಭಾನುವಾರವೂ ನೀರಿನ ಹರಿವು ಹೆಚ್ಚಳವಾಗಿದ್ದು, ಮತ್ತಷ್ಟು ಜಮೀನುಗಳಿಗೆ ನೀರು ಆವರಿಸಿಕೊಂಡಿದೆ.

ಕುಮದ್ವತಿ, ಧರ್ಮಾ ಮತ್ತು ತುಂಗಭದ್ರಾ ನದಿಗಳು ಉಕ್ಕಿ ಹರಿಯುತ್ತಿದೆ. ಮಳೆಯ ಅಬ್ಬರ ಮತ್ತು ನದಿಗಳ ಉಬ್ಬರದಿಂದ ಕೃಷಿ ಜಮೀನುಗಳ ಬೆಳೆಗಳು ನೀರಿನಲ್ಲಿ ಮುಳುಗಿವೆ.

ADVERTISEMENT

ಜಿಲ್ಲೆಯ ಗೊಂದಿ, ಸೋಮಾಪುರ, ಲಕಮಾಪುರ, ಬಿದರಗಡ್ಡಿ, ಶಿಂಗಾಪುರ, ಸಂಗೂರು, ವರ್ದಿ, ನಾಗನೂರು, ಕೊಡಲ, ವರದಹಳ್ಳಿ, ದೇವಗಿರಿಮ ಹುರುಳಿಕೊಪ್ಪ, ಮೆಳ್ಳಿಗಟ್ಟಿ, ಹಿರೇಮಗದೂರು, ಚಿಕ್ಕಮಗದೂರು, ಕರ್ಜಗಿ, ಕೋಣನತುಂಬಗಿ, ಡಂಬರಮತ್ತೂರು ಹಾಗೂ ಇತರೆ ಗ್ರಾಮಗಳ ಮೂಲಕ ವರದಾ ನದಿ ಹರಿಯುತ್ತಿದೆ. ಈ ಪೈಕಿ ಬಹುತೇಕ ಕಡೆಗಳಲ್ಲಿ ನದಿ ನೀರು, ಅಚ್ಚುಕಟ್ಟಿನ ಜಮೀನುಗಳಿವೆ ನುಗ್ಗಿದೆ. ಅಡಿಕೆ, ಬಾಳೆ, ಸೋಯಾಬಿನ್, ಮೆಕ್ಕೆಜೋಳ ಹಾಗೂ ಇತರೆ ಬೆಳೆಗಳು ಜಲಾವೃತಗೊಂಡಿವೆ. ಕೃಷಿ ಜಮೀನಿಗೆ ಹೋಗುವ ರಸ್ತೆಗಳು ಬಂದ್ ಆಗಿವೆ.

ವರದಹಳ್ಳಿಯಲ್ಲಿ ಮುಳುಗಡೆ ಭೀತಿ: ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ವರದಹಳ್ಳಿಯ ಶಿಬಾರಗಟ್ಟಿವರೆಗೂ ವರದಾ ನೀರು ಬಂದಿದೆ. ಎರಡು ದಿನಗಳಲ್ಲಿ ನೀರು ಗ್ರಾಮಕ್ಕೆ ನುಗ್ಗುವ ಭೀತಿ ಇದೆ.

ವರದಹಳ್ಳಿ ಹಾಗೂ ಪ್ಲಾಟ್‌ ಪ್ರದೇಶಕ್ಕೆ ಸಂಪರ್ಕ ಕಲ್ಪಿಸಲು ಒಂದೇ ರಸ್ತೆ ಇದೆ. ಈ ರಸ್ತೆಗೆ ಹೊಂದಿಕೊಂಡು ನೀರು ನಿಂತುಕೊಂಡಿದ್ದು, ರಸ್ತೆಯೂ ಸದ್ಯದಲ್ಲೇ ಮುಳುಗಡೆ ಆಗುವ ಸಾಧ್ಯತೆ ಇದೆ. 2019ರಲ್ಲಿ ಇದೇ ಗ್ರಾಮದ ಹಲವು ಮನೆಗಳು ಮುಳುಗಡೆಗೊಂಡಿದ್ದವು. ಈಗ ಅದೇ ಸ್ಥಿತಿ ಮರುಕಳಿಸುವ ಆತಂಕ ಜನರಲ್ಲಿದೆ. ಸುರಕ್ಷಿತ ಸ್ಥಳಗಳಿಗೆ ಹೋಗುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ. ಆದರೆ, ಗ್ರಾಮದೊಳಗೆ ನೀರು ಹೋಗಲು ಇನ್ನು ಹಲವು ದಿನ ಬೇಕು. ನೀರು ಬಂದಾಗ ನೋಡೋಣವೆಂದು ಇಲ್ಲಿಯ ಜನರು ಹೇಳುತ್ತಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿರುವ ಕುಣಿಮೆಳ್ಳಿಹಳ್ಳಿ ಹಾಗೂ ವರದಹಳ್ಳಿ ಬಳಿಯ ಮೇಲ್ಸೇತುವೆ ಕೆಳಭಾಗದಲ್ಲಿ ವರದಾ ನದಿ ನೀರು ತುಂಬಿ ಹರಿಯುತ್ತಿದೆ. ಹೆದ್ದಾರಿಯಲ್ಲಿ ಹೋಗುವ ಜನರು, ಮೇಲ್ಸೇತುವೆಗಳಲ್ಲಿ ವಾಹನಗಳನ್ನು ನಿಲ್ಲಿಸಿ ನೀರು ವೀಕ್ಷಣೆ ಮಾಡುತ್ತಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ಬಳಿಯ ಜಮೀನಿಗೂ ನೀರು ನುಗ್ಗಿದೆ. ನಿರಂತರವಾಗಿ ಮಳೆಯಾದರೆ, ಹೆದ್ದಾರಿ ಬಳಿಯೂ ನೀರು ಬರುವ ಸಾಧ್ಯತೆ ಇದೆ.

ಬ್ಯಾರಿಕೇಡ್‌ನಲ್ಲಿ ಬಟ್ಟೆಗಳು: ವರದಾ ನದಿ ದಡದಲ್ಲಿರುವ ನಾಗನೂರು ಗ್ರಾಮದಲ್ಲಿ 580 ಮನೆಗಳಿವೆ. 2019ರಲ್ಲಿ ಕೆಲ ಮನೆಗಳು ನದಿ ನೀರಿನಲ್ಲಿ ಮುಳುಗಡೆ ಆಗಿದ್ದವು. ಈ ಬಾರಿಯೂ ನೀರಿನ ಹರಿವು ಹೆಚ್ಚಳವಾಗಿದೆ. ಗ್ರಾಮದಲ್ಲಿರುವ ಮಸೀದಿವರೆಗೂ ನೀರು ಬಂದಿದ್ದು, ನೀರಿಗೆ ಇಳಿಯದಂತೆ ಪೊಲೀಸರು ಬ್ಯಾರಿಕೇಡ್‌ಗಳನ್ನು ನಿಲ್ಲಿಸಿದ್ದಾರೆ.

ನೀರಿನ ಅಪಾಯದ ಬಗ್ಗೆ ಗೊತ್ತಿದ್ದರೂ ಗ್ರಾಮದ ಕೆಲ ಮಹಿಳೆಯರು, ವರದಾ ನದಿ ನೀರಿನಲ್ಲಿ ಬಟ್ಟೆ ತೊಳೆಯುತ್ತಿದ್ದಾರೆ. ಪೊಲೀಸರು ನಿಲ್ಲಿಸಿರುವ ಬ್ಯಾರಿಕೇಡ್‌ ಮೇಲೆಯೇ ಬಟ್ಟೆಗಳನ್ನು ಒಣಗಲು ಹಾಕುತ್ತಿದ್ದಾರೆ. ಜನರು ನದಿ ನೀರಿನ ಬಳಿ ಹೋಗದಂತೆ ಪೊಲೀಸರು ಬ್ಯಾರಿಕೇಡ್‌ ನಿಲ್ಲಿಸಿದರೆ, ಮಹಿಳೆಯರು ಅವುಗಳನ್ನು ಬಟ್ಟೆ ಒಣಗಿಸಲು ಬಳಸುತ್ತಿದ್ದಾರೆ.

ಹಾವೇರಿ ತಾಲ್ಲೂಕಿನ ನಾಗನೂರು–ಕೂಡಲ ಬಳಿ ವರದಾ ನದಿಯ ಅಚ್ಚುಕಟ್ಟು ಪ್ರದೇಶ ಜಲಾವೃತಗೊಂಡಿರುವುದು
ಹಾವೇರಿ ತಾಲ್ಲೂಕಿನ ನಾಗನೂರು ಬಳಿ ವರದಾ ನದಿ ನೀರಿನಲ್ಲಿ ಇಳಿದಂತೆ ಪೊಲೀಸರು ಅಳವಡಿಸಿರುವ ಬ್ಯಾರಿಕೇಡ್‌ ಬಳಿ ಬಟ್ಟೆ ತೊಳೆಯುತ್ತಿದ್ದ ಮಹಿಳೆಯರು
ಹಾವೇರಿ ತಾಲ್ಲೂಕಿನ ವರದಹಳ್ಳಿ ಗ್ರಾಮ ಹಾಗೂ ಪ್ಲಾಟ್‌ ನಡುವಿನ ರಸ್ತೆಯವರೆಗೂ ನುಗ್ಗಿರುವ ವರದಾ ನದಿ ನೀರು
ವರದಹಳ್ಳಿ ಗ್ರಾಮದ ರಸ್ತೆಗೆ ಬಂದ ನೀರು ವರದಾ ನದಿ ದಡದಲ್ಲಿರುವ ಗ್ರಾಮಗಳಲ್ಲಿ ಆತಂಕ 31.27 ಹೆಕ್ಟೇರ್‌ ಬೆಳೆ ಹಾನಿ
‘ಮತ್ತೆ 114 ಮನೆಗೆ ಹಾನಿ’
‘ಜಿಲ್ಲೆಯಲ್ಲಿ ಮಳೆ ಮುಂದುವರಿದಿದ್ದು ಶನಿವಾರ ರಾತ್ರಿಯಿಂದ ಭಾನುವಾರ ಸಂಜೆಯವರೆಗೂ 114 ಮನೆಗೆ ಹಾನಿಯಾಗಿದೆ. ಒಂದು ಮನೆಗೆ ಸಂಪೂರ್ಣ ಹಾನಿ ಹಾಗೂ 113 ಮನೆಗಳಿಗೆ ಭಾಗಶಃ ಹಾನಿ ಉಂಟಾಗಿದೆ’ ಎಂದು ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ತಿಳಿಸಿದರು. ಮಳೆ ಹಾನಿ ಬಗ್ಗೆ ’ಪ್ರಜಾವಾಣಿ‘ಗೆ ಮಾಹಿತಿ ನೀಡಿದ ಅವರು ‘ಶನಿವಾರ (ಜುಲೈ 20) ಸಂಜೆಯವರೆಗೆ 159 ಮನೆಗಳಿಗೆ ಹಾನಿ ಆಗಿತ್ತು. ಈಗ ಮತ್ತೆ 114 ಮನೆಗಳಿಗೆ ಹಾನಿ ಆಗಿದೆ. ಇದುವರೆಗೂ 273 ಮನೆಗಳಿಗೆ ಹಾನಿಯಾಗಿದೆ’ ಎಂದರು. ‘ಮಾದಾಪುರದ ಮನೆ ಕುಸಿದ ಘಟನೆ ಬಿಟ್ಟರೆ ಬೇರೆ ಯಾವ ಕಡೆಯೂ ಪ್ರಾಣ ಹಾನಿ ಸಂಭವಿಸಿಲ್ಲ. ಬ್ಯಾಡಗಿ ತಾಲ್ಲೂಕಿನ ಶಿಡೇನೂರಿನಲ್ಲಿ ಗೋಡೆ ಕುಸಿದು ಎಮ್ಮೆಕರು ಮೃತಪಟ್ಟಿದೆ’ ಎಂದು ಹೇಳಿದರು. ‘ಜಿಲ್ಲೆಯ ಹಲವೆಡೆ ನದಿ ಪಾತ್ರದಲ್ಲಿರುವ ಜಮೀನುಗಳಿಗೆ ನೀರು ನುಗ್ಗಿದ್ದು ಬೆಳೆ ಜಲಾವೃತ್ತಗೊಂಡಿದೆ. ನದಿ ಅಚ್ಚುಕಟ್ಟು ಪ್ರದೇಶದಲ್ಲಿರುವ ಗ್ರಾಮಗಳ ಜನರಿಗೆ ಸುರಕ್ಷಿತ ಸ್ಥಳಕ್ಕೆ ಹೋಗುವಂತೆ ಅಧಿಕಾರಿಗಳ ಮೂಲಕ ಸೂಚನೆ ನೀಡಲಾಗಿದೆ’ ಎಂದು ತಿಳಿಸಿದರು.
31.27 ಹೆಕ್ಟೇರ್‌ ಬೆಳೆ ಹಾನಿ
ಜಿಲ್ಲೆಯ ಹಲವೆಡೆ ನದಿ ನೀರು ಜಮೀನಿಗೆ ನುಗ್ಗಿದ್ದರಿಂದ 31.27 ಹೆಕ್ಟೇರ್‌ನಲ್ಲಿದ್ದ ಮುಂಗಾರು ಬೆಳೆ ಹಾನಿಯಾಗಿದೆ. 5.18 ಹೆಕ್ಟೇರ್‌ನಲ್ಲಿ ಬೆಳೆದಿದ್ದ ಬಾಳೆ 2 ಹೆಕ್ಟೇರ್‌ನಲ್ಲಿ ಬೆಳೆದಿದ್ದ ಬೆಳ್ಳೂಳ್ಳಿ 0.60 ಹೆಕ್ಟೇರ್‌ನಲ್ಲಿ ಬೆಳೆದಿದ್ದ ಹಾಗಲಕಾಯಿ 9.49 ಹೆಕ್ಟೇರ್‌ನಲ್ಲಿದ್ದ ಮೆಣಸಿನಕಾಯಿ 1 ಹೆಕ್ಟೇರ್‌ನಲ್ಲಿದ್ದ ಕ್ಯಾಬೀಜ್ ಹಾಗೂ 13 ಹೆಕ್ಟೇರ್‌ನಲ್ಲಿದ್ದ ಇತರೆ ಬೆಳೆ ಹಾನಿ ಆಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.