ADVERTISEMENT

₹ 1 ಲಕ್ಷ ಲಂಚ: ಲೋಕಾಯುಕ್ತ ಬಲೆಗೆ ಮಾಹಿತಿ ಆಯೋಗದ ಆಯುಕ್ತ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2025, 11:14 IST
Last Updated 27 ಮಾರ್ಚ್ 2025, 11:14 IST
<div class="paragraphs"><p>ರವೀಂದ್ರ ಗುರುನಾಥ ಡಾಕಪ್ಪ</p><p></p></div>

ರವೀಂದ್ರ ಗುರುನಾಥ ಡಾಕಪ್ಪ

   

ಕಲಬುರಗಿ: ಕಪ್ಪು ಪಟ್ಟಿಯಿಂದ ಹೆಸರನ್ನು ಕೈಬಿಡಲು ಅರ್ಜಿದಾರರಿಂದ ₹ 1 ಲಕ್ಷ ಲಂಚ ಪಡೆದ ಆರೋಪದಡಿ ರಾಜ್ಯ ಮಾಹಿತಿ ಆಯೋಗ ಕಲಬುರಗಿ ಪೀಠದ ಆಯುಕ್ತ ರವೀಂದ್ರ ಗುರುನಾಥ ಡಾಕಪ್ಪ ಅವರನ್ನು ಲೋಕಾಯುಕ್ತ ಪೊಲೀಸರು ಗುರುವಾರ ವಶಕ್ಕೆ ಪಡೆದಿದ್ದಾರೆ.

ADVERTISEMENT

‘ಕಲಬುರಗಿ ಕಲರವ’ ಮಾಸ ಪತ್ರಿಕೆ ಸಂಪಾದಕ ಸಾಯಿಬಣ್ಣ ನಾಸಿ ಅವರು ನೀಡಿದ ದೂರಿನ ಅನ್ವಯ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದರು.

ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಸಾಯಿಬಣ್ಣ ಅವರು ಆರ್‌ಟಿಐ ಅಡಿ 117 ಅರ್ಜಿಗಳನ್ನು ಸಲ್ಲಿಸಿದ್ದರು. ವೈಯಕ್ತಿಕ ಹಿತಾಸಕ್ತಿಗಾಗಿ ಮಾಹಿತಿ ಕೇಳಿದ್ದಾರೆ ಎಂದು ಏಕಪಕ್ಷೀಯವಾಗಿ ತೀರ್ಮಾನಿಸಿದ್ದ ಆಯುಕ್ತರು, 117 ಅರ್ಜಿಗಳನ್ನು ವಜಾಗೊಳಿಸಿದ್ದರು. ಜತೆಗೆ ಸಾಯಿಬಣ್ಣ ಅವರ ಹೆಸರನ್ನು ಕಪ್ಪು ಪಟ್ಟಿಗೆ ಸೇರಿಸಲು ಸೂಚಿಸಿದ್ದರು. ಒಂದು ಅರ್ಜಿಗೆ ಮಾತ್ರ ₹1,000 ದಂಡ ವಿಧಿಸಿದ್ದರು. ಉಳಿದ 116 ಅರ್ಜಿಗಳ ಮೇಲ್ಮನವಿ ವಿಚಾರಣೆಯ ಆದೇಶ ಪ್ರತಿ ನೀಡಿರಲಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಸಾಯಿಬಣ್ಣ ಅವರ ಹೆಸರನ್ನು ಕಪ್ಪು ಪಟ್ಟಿಯಿಂದ ಕೈಬಿಡಲು ಡಾಕಪ್ಪ ಅವರು ₹ 3 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಡಾಕಪ್ಪ ಅವರು ಗುರುವಾರ ಲಂಚದ ಹಣ ₹ 1 ಲಕ್ಷವನ್ನು ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿಸಿಕೊಂಡ ಬಳಿಕ ಅವರನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಯ ವಿಚಾರಣೆ ನಡೆಸಲಾಗುತ್ತಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

ಲೋಕಾಯುಕ್ತ ಎಸ್ಪಿ ಬಿ.ಕೆ. ಉಮೇಶ್, ಡಿವೈಎಸ್ಪಿ ಗೀತಾ ಬೇನಾಳ, ಪೊಲೀಸ್ ಇನ್‌ಸ್ಪೆಕ್ಟರ್‌ ಅರುಣಕುಮಾರ್, ಸಿಬ್ಬಂದಿ ಮಲ್ಲಿನಾಥ, ಹನುಮಂತ, ಬಸವರಾಜ ದಾಳಿಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.