
ಕಾಳಗಿ: ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಚಿಕ್ಕಂಡಿ ತಾಂಡಾಕ್ಕೆ ಕೊನೆಗೂ ಸರ್ಕಾರಿ ಬಸ್ಸಿನ ಆಗಮನವಾಗಿದೆ.
ಮಂಗಳವಾರ ಬೆಳಿಗ್ಗೆ ಬಸ್ಸು ಬರುತ್ತಿರುವುದನ್ನು ಕಂಡು ಸ್ಥಳೀಯರು ಸಂತಸದಲ್ಲಿ ತೇಲಾಡಿದ್ದಾರೆ. ತಾಲ್ಲೂಕು ಕೇಂದ್ರ ಕಾಳಗಿಯಲ್ಲಿ 15 ವರ್ಷಗಳಿಂದ ಸಾರಿಗೆ ಸಂಸ್ಥೆಯ ಬಸ್ ಘಟಕ ಇದೆ. ಆದರೆ, ಪಕ್ಕದಲ್ಲೇ ಇರುವ 5 ಕಿ.ಮೀ ಅಂತರದ ಚಿಕ್ಕಂಡಿ ತಾಂಡಾ ರಸ್ತೆ ಇದ್ದರೂ ಸ್ವಾತಂತ್ರ್ಯ ಸಿಕ್ಕಾಗಿನಿಂದ ಬಸ್ಸಿನ ಸೌಕರ್ಯ ಕಂಡಿರಲಿಲ್ಲ.
ಈ ತಾಂಡಾ 630 ಮತದಾರರು, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮತ್ತು ಅಂಗನವಾಡಿ ಕೇಂದ್ರ ಹೊಂದಿದೆ. ಇಲ್ಲಿಯ ಜನರು ದಿನಬೆಳಗಾದರೆ ಒಂದಿಲ್ಲ ಒಂದು ಕೆಲಸಕ್ಕಾಗಿ ಕಾಳಗಿಗೆ ಹೋಗಿಬರಲು ಕಾಲ್ನಡಿಗೆ ಅಥವಾ ಖಾಸಗಿ ವಾಹನವೇ ಅವಲಂಬಿಸಿದ್ದರು.
ತಾಂಡಾದ 6ನೇ ತರಗತಿ ಮೇಲ್ಪಟ್ಟ ಶಾಲಾ-ಕಾಲೇಜು ವಿದ್ಯಾರ್ಥಿಗಳು ಸಹ ಮಳೆ, ಗಾಳಿ ಎನ್ನದೆ ಒಟ್ಟು 10 ಕಿ.ಮೀ ಕ್ರಮಿಸಿ ಹೈರಾಣಾಗುತ್ತಿದ್ದರು. ಇಲ್ಲಿಯ ಮತದಾರರು 2024ರ ಲೋಕಸಭಾ ಚುನಾವಣೆವರೆಗೂ ಸ್ವಂತ ಮತಗಟ್ಟೆ ಕಾಣದೆ ದೂರದ ಕರಿಕಲ್ ತಾಂಡಾಕ್ಕೆ ಹಾಗೊ ಹೀಗೊ ತೆರಳಿ ಮತದಾನ ಮಾಡಿದ್ದಾರೆ. ಎಲ್ಲಿಗೆ ಹೋದರು ಕಾಳಗಿವರೆಗಂತೂ 5 ಕಿ.ಮೀ ಬೈಕ್ ಅಥವಾ ಪರ್ಯಾಯ ಮಾರ್ಗ ಅನುಸರಿಸುತ್ತಿದ್ದ ಪ್ರಯಾಣಿಕರು ಎಷ್ಟೊ ಸಲ ಅನಾಹುತಕ್ಕೆ ಒಳಗಾಗಿ ಪರಿತಪಿಸಿದ್ದಾರೆ.
2013-19ರವರೆಗೆ ಡಾ.ಉಮೇಶ ಜಾಧವ, 2019ರಿಂದ ಈಗಲೂ ಡಾ.ಅವಿನಾಶ ಜಾಧವ ಇದೇ ಕ್ಷೇತ್ರದ ಶಾಸಕರಾಗಿದ್ದಾರೆ. ಅಷ್ಟಾದರೂ ಈ ತಾಂಡಾ ಬಸ್ಸಿನಿಂದ ವಂಚಿತವಾಗಿದನ್ನು ‘ಪ್ರಜಾವಾಣಿ’ ಸೆ.22ರಂದು ‘ಚಿಕ್ಕಂಡಿ ತಾಂಡಾಕ್ಕೆ ಬಸ್ಸಿಲ್ಲ’ ಎಂಬ ತಲೆಬರಹದಲ್ಲಿ ಸುದ್ದಿ ಪ್ರಕಟಿಸಿ ಗಮನ ಸೆಳೆದಿತ್ತು. ಪರಿಣಾಮ ಮಂಗಳವಾರ ಕಾಳಗಿ ಪಟ್ಟಣದಿಂದ ತಾಂಡಾಕ್ಕೆ ಬಂದ ಬಸ್ಸಿಗೆ ಸ್ಥಳೀಯರು ಪೂಜೆ ಸಲ್ಲಿಸಿ ಸ್ವಾಗತಿಸಿ ಹರ್ಷ ವ್ಯಕ್ತಪಡಿಸಿದ್ದಾರೆ.
ಈ ಬಸ್ಸು ಸದ್ಯಕ್ಕೆ ದಿನಕ್ಕೆ ಎರಡುಬಾರಿ ಸಂಚರಿಸಲಿದೆ ಎಂದು ಬಸ್ ಘಟಕದ ವ್ಯವಸ್ಥಾಪಕ ಯಶ್ವಂತ ಯಾತನೂರ ತಿಳಿಸಿದರು. ಬಸ್ ಚಾಲಕ ಮೋಹನ ರಾಠೋಡ, ನಿರ್ವಾಹಕ ಶ್ರಾವಣಕುಮಾರ, ಪ್ರಮುಖರಾದ ಮಾಣಿಕ ಜಾಧವ, ಜೀತೇಂದ್ರ ರಾಠೋಡ, ಚಂದ್ರಕಾಂತ ಜಾಧವ, ಕಮಲೇಶ ಜಾಧವ, ದೀಪಸಿಂಗ್ ರಾಠೋಡ, ಗಂಗಾರಾಮ ದಳಪತಿ, ವಿಜಯಕುಮಾರ ಜಾಧವ, ವೆಂಕಟೇಶ ರಾಠೋಡ, ದಿನೇಶ ಜಾಧವ, ರಾಜು ಜಾಧವ, ರಾಜು ರಾಠೋಡ, ಲಾಲಸಿಂಗ್ ಜಾಧವ ಅನೇಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.