ADVERTISEMENT

ಕಲೆ ಅರಳಲು ಕಾರ್ಯಕ್ಷೇತ್ರ ಮುಖ್ಯ: ಕಲಾವಿದೆ ಪದ್ಮಾ ರೆಡ್ಡಿ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2025, 3:50 IST
Last Updated 13 ಏಪ್ರಿಲ್ 2025, 3:50 IST
ಅನುಚಂದ್ರ ಕಂಟೆಂಪ್ರರಿ ಆರ್ಟ್‌ ಸ್ಟುಡಿಯೊದಲ್ಲಿ ಶನಿವಾರ ಕಲಾಕೃತಿಗಳ ಪ್ರದರ್ಶನದಲ್ಲಿ ಕಲಾವಿದರಾದ ಪದ್ಮಾ ರೆಡ್ಡಿ, ರಾಜೇಶ್ವರ ರಾವ್‌ ಅವರು ಕಲಾಕೃತಿಯೊಂದರ ಕುರಿತು ಚರ್ಚಿಸಿದರು. ಚಂದ್ರಹಾಸ ವೈ.ಜೆ., ವಿಜಯ ಬಾಗೋಡಿ ಇತರರಿದ್ದಾರೆ –ಪ್ರಜಾವಾಣಿ ಚಿತ್ರ
ಅನುಚಂದ್ರ ಕಂಟೆಂಪ್ರರಿ ಆರ್ಟ್‌ ಸ್ಟುಡಿಯೊದಲ್ಲಿ ಶನಿವಾರ ಕಲಾಕೃತಿಗಳ ಪ್ರದರ್ಶನದಲ್ಲಿ ಕಲಾವಿದರಾದ ಪದ್ಮಾ ರೆಡ್ಡಿ, ರಾಜೇಶ್ವರ ರಾವ್‌ ಅವರು ಕಲಾಕೃತಿಯೊಂದರ ಕುರಿತು ಚರ್ಚಿಸಿದರು. ಚಂದ್ರಹಾಸ ವೈ.ಜೆ., ವಿಜಯ ಬಾಗೋಡಿ ಇತರರಿದ್ದಾರೆ –ಪ್ರಜಾವಾಣಿ ಚಿತ್ರ   

ಕಲಬುರಗಿ: ‘ಯಾವುದೇ ಕಲೆ ಅರಳಲು ಕಾರ್ಯಕ್ಷೇತ್ರ, ಪರಿಸರ ಮುಖ್ಯವಾಗುತ್ತದೆ. ಅಂಥ ಪರಿಸರ ಸಿಗದಿದ್ದರೆ ಕಲೆ ಎಷ್ಟು ಬೆಳೆಯಬೇಕೋ ಅಷ್ಟು ಬೆಳೆಯಲ್ಲ’ ಎಂದು ಹೈದರಾಬಾದ್‌ನ ಕಲಾವಿದೆ ಪದ್ಮಾ ರೆಡ್ಡಿ ಅಭಿಪ್ರಾಯಪಟ್ಟರು.

ಇಲ್ಲಿನ ಆಳಂದ ರಸ್ತೆಯ ವಿಜಯನಗರ ಕಾಲೊನಿಯಲ್ಲಿರುವ ಅನುಚಂದ್ರ ಕಂಟೆಂಪ್ರರಿ ಆರ್ಟ್‌ ಸ್ಟುಡಿಯೊ ಹಾಗೂ ಮುದ್ರಣ ಕಲಾಕೃತಿಗಳ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.

‘ಕಲಬುರಗಿ ಹೈದರಾಬಾದ್‌ನಷ್ಟು ಪ್ರಸಿದ್ಧವಲ್ಲದಿದ್ದರೂ ಹಲವು ಅದ್ಭುತ ಕಲಾವಿದರನ್ನು ನೀಡಿದೆ. ಇಂಥ ನಗರದಲ್ಲಿ ಇದೀಗ ಈ ಆರ್ಟ್‌ ಸ್ಟುಡಿಯೊ ನಿರ್ಮಾಣವಾಗಿದೆ. ಇವು ಯುವಕಲಾವಿದರಲ್ಲಿ ಮುದ್ರಣಕಲಾ ಸಂಸ್ಕೃತಿಯನ್ನು ಬೆಳೆಸಲು ನೆರವಾಗಲಿದೆ’ ಎಂದರು.

ADVERTISEMENT

ಬರೋಡಾದ ಎಂ.ಎಸ್‌.ವಿಶ್ವವಿದ್ಯಾಲಯದ ಲಲಿತಕಲೆಗಳ ವಿಭಾಗದ ಮಾಜಿ ಡೀನ್‌ ವಿಜಯ ಬಾಗೋಡಿ ಮಾತನಾಡಿ, ‘ಪ್ರತಿಯೊಂದು ಕಲೆಯೂ ತನ್ನದೇ ಆದ ಪ್ರಾಮುಖ್ಯ ಹೊಂದಿದೆ. ಹಿಂದಿನ ಕಲಾವಿದರು ಬಹುಮುಖ ಪ್ರತಿಭೆಗಳಾಗಿದ್ದು. ಚಿತ್ರಕಲೆ, ಕಾಷ್ಟಶಿಲ್ಪ ಸೇರಿದಂತೆ ಹಲವು ಮಾಧ್ಯಮಗಳಲ್ಲಿ ಕೈಚಳ ಮೆರೆಯಬಲ್ಲವರಾಗಿದ್ದರು’ ಎಂದರು.

‘ಕಲಾವಿದ ಚಂದ್ರಹಾಸ ವೈ.ಜೆ. ಸಂರಕ್ಷಿಸಿ, ಸದ್ಯ ಸ್ಟುಡಿಯೊದಲ್ಲಿ ಪ್ರದರ್ಶಿಸಿರುವ ದಿಗ್ಗಜ ಕಲಾವಿದರ ಕಲಾಕೃತಿಗಳು ಬರೀ ಕಾಗದದ ಮೇಲಿನ ಚಿತ್ರಗಳಲ್ಲ, ಅವು ಖಜಾನೆಗೆ ಸಮ’ ಎಂದು ಬಣ್ಣಿಸಿದರು.

ಅಧ್ಯಕ್ಷತೆ ವಹಿಸಿದ್ದ ಸ್ಟುಡಿಯೊ ಮಾಲೀಕ ಚಂದ್ರಹಾಸ ವೈ.ಜೆ. ಮಾತನಾಡಿ, ‘ಈ ಸ್ಟುಡಿಯೊ ನಿರ್ಮಾಣ ನನ್ನ ಬಹು ದಶಕಗಳ ಕನಸಾಗಿತ್ತು. ಹಲವರ ಸಹಕಾರದಿಂದ ಇದು ನನಸಾಗಿದೆ. ಈ ಭಾಗದಲ್ಲಿ ಮುದ್ರಣಕಲಾ ಸಂಸ್ಕೃತಿಯನ್ನು ಬೆಳೆಸುವಲ್ಲಿ ಯುವಕಲಾವಿದರಿಗೆ ಇದು ಬಳಕೆಯಾದರೆ ನನ್ನ ಶ್ರಮ ಸಾರ್ಥಕ’ ಎಂದರು.

ಕಲಾವಿದ ರಾಜೇಶ್ವರ ರಾವ್‌, ವಾಸ್ತುಶಿಲ್ಪಿ ವಾಗೀಶ ನಾಗನೂರ ಮಾತನಾಡಿದರು. ಹಿರಿಯ ಕಲಾವಿದ ಬಸವರಾಜ ಎಲ್‌.ಜಾನೆ ಸೇರಿದಂತೆ ಹಲವು ಕಲಾವಿದರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಕಾರ್ಯಾಗಾರ: ಇದೇ ಸ್ಟುಡಿಯೊದಲ್ಲಿ ವುಡ್‌ಕಟ್‌ ಕಲಾಮಾಧ್ಯಮದ ಕುರಿತು ಐದು ದಿನಗಳ ಕಾರ್ಯಾಗಾರ ಆರಂಭಿಸಲಾಯಿತು. ಹಿರಿಯ ಕಲಾವಿದ ವಿಜಯ ಬಾಗೋಡಿ ನಿರ್ದೇಶನದಲ್ಲಿ ಶಿಬಿರ ನಡೆಯಲಿದೆ.

24 ವಿರಳ ಕಲಾಕೃತಿಗಳ ಪ್ರದರ್ಶನ
ರಾಮಕಿಂಕರ ಬೈಜ್‌ ಕೆ.ಜಿ.ಸುಬ್ರಮಣ್ಯಂ ಸುಹಾಸ ರಾಯ್ ಪಿನಾಕಿ ಬರುವಾದಂಥ ಹಲವು ಖ್ಯಾತನಾಮ 24 ಕಲಾವಿದರ ತಲಾವೊಂದು ಕಲಾಕೃತಿಯನ್ನು ಅನುಚಂದ್ರ ಕಂಟೆಂಪ್ರರಿ ಆರ್ಟ್‌ ಸ್ಟುಡಿಯೊದಲ್ಲಿ ಪ್ರದರ್ಶಿಸಲಾಗಿದೆ. ವುಡ್‌ಕಟ್‌ ಎಚಿಂಗ್‌ ಜಿಂಕ್‌ ಪ್ಲೇಟ್‌ ಸೆರಿಗ್ರಾಫಿ (ಸ್ಕ್ರೀನ್‌ ಪ್ರಿಂಟ್‌) ಮಾಧ್ಯಮಗಳಲ್ಲಿರುವ ಕಲಾಕೃತಿಗಳು ನೋಡುಗರ ಮನಸೆಳೆಯುತ್ತಿವೆ. ಈ ಅಮೂಲ್ಯ ಕಲಾಕೃತಿಗಳ ಪ್ರದರ್ಶನ ಏಪ್ರಿಲ್‌ 30ರ ತನಕ ನಡೆಯಲಿದೆ. ಆಸಕ್ತರು ಇವುಗಳನ್ನು ಬೆಳಿಗ್ಗೆ 10.30ರಿಂದ ಸಂಜೆ 6 ಗಂಟೆ ತನಕದ ಅವಧಿಯಲ್ಲಿ ಕಣ್ತುಂಬಿಕೊಳ್ಳಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.