ಸೇಡಂ(ಕಲಬುರಗಿ ಜಿಲ್ಲೆ): ಪ್ರತಿವರ್ಷ ಕಲಬುರಗಿಯ ಸಾರ್ವಜನಿಕ ಉದ್ಯಾನದಲ್ಲಿ ನಡೆಯುತ್ತಿದ್ದ ಚಿತ್ರ ಸಂತೆ ಈ ಸಲ ಸೇಡಂ ಹೊರವಲಯದಲ್ಲಿ ನಡೆಯುತ್ತಿರುವ ಭಾರತೀಯ ಸಂಸ್ಕೃತಿ ಉತ್ಸವದಲ್ಲಿ ತನ್ನ ಕಲಾಲೋಕ ಅನಾವರಣಗೊಳಿಸಿತು.
ಮನದಲ್ಲಿ ಮೂಡಿದ ಕಲ್ಪನೆಗಳನ್ನು ಕಲಾವಿದರು ಕ್ಯಾನ್ವಾಸ್‌ಗಳ ಮೇಲೆ ಬಣ್ಣದಲ್ಲಿ ಪಡಿಮೂಡಿಸಿದ್ದ ಬೆರಗನ್ನು ನೂರಾರು ಕಲಾ ರಸಿಕರು ಕಣ್ತುಂಬಿಕೊಂಡರು. ಮೆಚ್ಚುಗೆಯನ್ನೂ ವ್ಯಕ್ತಪಡಿಸಿದರು. ತರಹೇವಾರಿ ಚಿತ್ರಗಳು ವಿದ್ಯಾರ್ಥಿಗಳನ್ನು ಸೂಜಿಗಲ್ಲಿನಂತೆ ಸೆಳೆದವು. ಹಲವು ಕಲಾವಿದರು ಸ್ಥಳದಲ್ಲೇ ಸಾರ್ವಜನಿಕರ ಭಾವಚಿತ್ರ ಬಿಡಿಸಿ ಗಮನ ಸೆಳೆದರು.
ಬೆಳಿಗ್ಗೆ 9ರಿಂದ ಸಂಜೆ 6 ಗಂಟೆ ತನಕ ಚಿತ್ರಸಂತೆ ನಡೆಯಿತು. ಕೆಕೆಸಿಸಿಐ ಅಧ್ಯಕ್ಷ ಶಶಿಕಾಂತ ಪಾಟೀಲ ಉದ್ಘಾಟಿಸಿ ಮಾತನಾಡಿದರು. ಕೆಕೆಸಿಸಿಐ ಪ್ರಧಾನ ಕಾರ್ಯದರ್ಶಿ ಪ್ರಶಾಂತ ಮಾನಕರ್, ಅಧ್ಯಕ್ಷತೆ ವಹಿಸಿದ್ದ ಚೈತನ್ಯಮಯಿ ಟ್ರಸ್ಟ್ ಮುಖ್ಯಸ್ಥ ಎ.ಎಸ್. ಪಾಟೀಲ ಮಾತನಾಡಿದರು. ದೃಶ್ಯಬೆಳಕು ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷ ಪರಶುರಾಮ ಸ್ವಾಗತಿಸಿ,ಪ್ರಾಸ್ತಾವಿಕವಾಗಿ ಮಾತನಾಡಿದರು. ಉದ್ಯಮಿ ಶರಣು ಪಪ್ಪ, ಬಾಬುರಾವ ಶೇರಿಕಾರ, ಆನಂದ ದಂಡೋತಿ, ಚಿತ್ರ ಸಂತೆಯ ಸಂಯೋಜಕ ಎಚ್.ಎಂ.ಬೆಳಮಗಿ, ವಿ.ಬಿ.ಬಿರಾದಾರ ಇದ್ದರು.
ವಿಕಾಸ ಅಕಾಡೆಮಿ, ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ, ಕೆಕೆಸಿಸಿಐ, ದೃಶ್ಯ ಬೆಳಕು ಸಾಂಸ್ಕೃತಿಕ ಸಂಸ್ಥೆ, ದಿ.ಆರ್ಟ್ ಇಂಟಿಗ್ರೇಟೆಷನ್ ಸೊಸೈಟಿ, ಬಿಸಿಲು ಆರ್ಟ್ ಗ್ಯಾಲರಿ ಸಂಯುಕ್ತವಾಗಿ ಚಿತ್ರ ಸಂತೆಯನ್ನು ಸಂಘಟಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.