ADVERTISEMENT

ಬಾಬ್ರಿ ಮಸೀದಿ ತೀರ್ಪು: ಬಿಜೆಪಿ, ಶ್ರೀರಾಮಸೇನೆ ಸ್ವಾಗತ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2020, 17:08 IST
Last Updated 30 ಸೆಪ್ಟೆಂಬರ್ 2020, 17:08 IST
ರಾಜಕುಮಾರ ಪಾಟೀಲ ತೆಲ್ಕೂರ
ರಾಜಕುಮಾರ ಪಾಟೀಲ ತೆಲ್ಕೂರ   

ಕಲಬುರ್ಗಿ: ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಹೆಸರಿಸಿದ್ದ ಎಲ್ಲ 32 ಆರೋಪಿಗಳನ್ನು ಆರೋಪ ಮುಕ್ತ ಮಾಡಿ ಆದೇಶ ಹೊರಡಿಸಿದ ವಿಶೇಷ ಸಿಬಿಐ ನ್ಯಾಯಾಲಯದ ತೀರ್ಪನ್ನು ಬಿಜೆಪಿ ಹಾಗೂ ಶ್ರೀರಾಮಸೇನೆ ಸ್ವಾಗತಿಸಿವೆ.

ಈ ಕುರಿತು ಪ್ರತಿಕ್ರಿಯೆ ನೀಡಿದ ಸೇಡಂ ಶಾಸಕ, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ರಾಜಕುಮಾರ ಪಾಟೀಲ ತೆಲ್ಕೂರ, ‘ಬಾಬ್ರಿ ಮಸೀದಿ ದ್ವಂಸ ಪ್ರಕರಣಕ್ಕೆ ಸಿಬಿಐ ವಿಶೇಷ ನ್ಯಾಯಾಲಯ ನೀಡಿದ ತೀರ್ಪು ಸ್ವಾಗತಾರ್ಹವಾಗಿದ್ದು, 130 ಕೋಟಿ ಭಾರತೀಯರಿಗೆ ಸಂದ ಗೌರವ ಇದಾಗಿದೆ. ಎಲ್.ಕೆ ಅಡ್ವಾಣಿ, ಮುರಳಿ ಮನೋಹರ ಜೋಶಿ ಮತ್ತು ಉಮಾಭಾರತಿಯವರಂತ ಹಿರಿಯ ನಾಯಕರು, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ ಸಿಂಗ್ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಹೊಣೆ ಹೊತ್ತಿರುವ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್, ಬಿಜೆಪಿ ನಾಯಕರಾದ ವಿನಯ್ ಕಟಿಯಾರ್, ಸಾಧ್ವಿ ರಿತಂಬರಾ ಪ್ರಕರಣದ ಆರೋಪಿಗಳಾಗಿದ್ದರು. ಅಯೋಧ್ಯೆಯ ರಾಮ ಮಂದಿರ ಭೂಮಿ ಪೂಜೆ ನೆರವೇರಿದ್ದು, ನಿರ್ಮಾಣದ ಹಂತದಲ್ಲಿದೆ. ಆದರೆ ಅಯೋದ್ಯೆಯ ರಾಮ ಮಂದಿರ ನಿರ್ಮಾಣಕ್ಕಾಗಿ ಅನೇಕ ಹಿಂದೂಗಳ ತ್ಯಾಗ ಮತ್ತು ಬಲಿದಾನವಾಗಿದೆ ಎಂದು ಹೇಳಿದ್ದಾರೆ.

ಬಿಜೆಪಿ ನಗರ ಜಿಲ್ಲಾ ಅಧ್ಯಕ್ಷ ಸಿದ್ದಾಜಿ ಪಾಟೀಲ, ಮಾಧ್ಯಮ ವಕ್ತಾರ ಅರುಣ ಕುಲಕರ್ಣಿ, ‘ಮಸೀದಿ ಧ್ವಂಸ ಪ್ರಕರಣ ಪೂರ್ವ ನಿಯೋಜಿತ ಕೃತ್ಯ ಎಂಬುದಕ್ಕೆ ಸಾಕ್ಷ್ಯಗಳಿಲ್ಲ ಎಂದು ಸಿಬಿಐ ವಿಶೇಷ ನ್ಯಾಯಾಲಯ ಐತಿಹಾಸಿಕ ಅಂತಿಮ ತೀರ್ಪು ನೀಡಿದೆ. ಬಿಜೆಪಿಯ ಭೀಷ್ಮ ಎಲ್.ಕೆ. ಅಡ್ವಾಣಿ, ಮುರಳಿ ಮನೋಹರ ಜೋಶಿ ಹಾಗೂ ಉಳಿದ ನಾಯಕರು ದೋಷ ಮುಕ್ತರಾಗಿದ್ದಾರೆ. ಈ ಮಹತ್ವದ ತೀರ್ಪು ಸ್ವಾಗತಾರ್ಹ’ ಎಂದಿದ್ದಾರೆ.

ADVERTISEMENT

ಶ್ರೀರಾಮ ಸೇನೆ ರಾಜ್ಯ ಘಟಕದ ಅಧ್ಯಕ್ಷ ಅಂದೋಲಾದ ಸಿದ್ಧಲಿಂಗ ಸ್ವಾಮೀಜಿ, ಅಯೋಧ್ಯೆಯಲ್ಲಿ 500 ವರ್ಷಗಳಿಂದ ಹಿಂದೂಗಳಿಗೆ ಅವಮಾನಿಸುವಂತೆ ಇದ್ದ ಬಾಬ್ರಿ ಮಸೀದಿಯನ್ನು 1992ರಲ್ಲಿ ರಾಷ್ಟ್ರದ ಲಕ್ಷಾಂತರ ಹಿಂದೂಗಳು ಮುಗಿಬಿದ್ದು ಧ್ವಂಸಗೊಳಿಸಿದ್ದರು. ಆಗ ಕೇಂದ್ರದಲ್ಲಿದ್ದ ಕಾಂಗ್ರೆಸ್ ಸರ್ಕಾರ 40 ಜನ ಬಿಜೆಪಿ ಮುಖಂಡರ ಮೇಲೆ ಸುಳ್ಳು ಮೊಕದ್ದಮೆಯನ್ನು ದಾಖಲಿಸಿತ್ತು. ಬಿಜೆಪಿ ಮುಖಂಡರ ಮೇಲಿದ್ದ ಕಳಂಕ ಸಿಬಿಐ ತೀರ್ಪಿನ ಮೂಲಕ ತೊಳೆದು ಹೋದಂತಾಗಿದೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.