ADVERTISEMENT

ಕಲಬುರಗಿ | ಚೆಕ್‌ ಕದ್ದು ₹ 5 ಲಕ್ಷ ಹಣ ಡ್ರಾ ಮಾಡಿದ ಅಪರಿಚಿತ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2026, 5:40 IST
Last Updated 8 ಫೆಬ್ರುವರಿ 2026, 5:40 IST
   

ಕಲಬುರಗಿ: ಅಪರಿಚಿತ ವ್ಯಕ್ತಿಯೊಬ್ಬ ನರ್ಸ್‌ ಒಬ್ಬರ ಬ್ಯಾಂಕ್‌ ಚೆಕ್‌ ಕದ್ದು, ಅವರ ಖಾತೆಯಿಂದ ₹ 5 ಲಕ್ಷ ಡ್ರಾ ಮಾಡಿಕೊಂಡು, ಪರಾರಿಯಾಗಿದ್ದಾನೆ.

ನಗರದ ಜಯದೇವ ಆಸ್ಪತ್ರೆ ನರ್ಸ್‌ ಆಗಿರುವ ಪದ್ಮಾ ಗೌತಮ ಮಂದೇವಾಲ (32) ಅವರ ಖಾತೆಯಿಂದ ಹಣವನ್ನು ಡ್ರಾ ಮಾಡಿಕೊಳ್ಳಲಾಗಿದೆ.

ನರ್ಸ್‌ ಪದ್ಮಾ ಗಂಜ್‌ನಲ್ಲಿರುವ ಕೆನರಾ ಬ್ಯಾಂಕ್‌ನಲ್ಲಿ ಖಾತೆ ಹೊಂದಿದ್ದು, ಸಂಬಳದ ಉಳಿತಾಯದ ₹ 5,28,539 ಹಣವನ್ನು ಬ್ಯಾಂಕ್‌ ಖಾತೆಯಲ್ಲಿಯೇ ಉಳಿಸಿದ್ದರು. ಹಣದ ವ್ಯವಹಾರಕ್ಕಾಗಿ ಬ್ಯಾಂಕ್‌ನಿಂದ ಚೆಕ್‌ಬುಕ್‌ ಅನ್ನು ಪಡೆದಿದ್ದರು. ಹೀಗಿರುವಾಗ ಜನವರಿ 12ರಂದು ಮಧ್ಯಾಹ್ನ 3.48ಕ್ಕೆ ಅವರ ಖಾತೆಯಿಂದ ₹ 5 ಲಕ್ಷ ಹಣ ಡ್ರಾ ಆಗಿರುವ ಸಂದೇಶ ಬಂದಿದೆ. ಈ ಸಂಬಂಧ ಬ್ಯಾಂಕ್‌ನ ವ್ಯವಸ್ಥಾಪಕ ಹಾಗೂ ಸಿಬ್ಬಂದಿಯನ್ನು ವಿಚಾರಿಸಿದಾಗ, ಅಪರಿಚಿತ ವ್ಯಕ್ತಿಯೊಬ್ಬ ಮುಖಕ್ಕೆ ಮಾಸ್ಕ್‌ ಹಾಕಿಕೊಂಡು ಬಂದು ತಮ್ಮ ಚೆಕ್‌ (470465) ನೀಡಿ, ಹಣವನ್ನು ಡ್ರಾ ಮಾಡಿಕೊಂಡಿದ್ದಾನೆ ಎಂದು ಹೇಳಿದ್ದಾರೆ. ಅಲ್ಲದೆ ತಮ್ಮದೇ ಸಹಿ ಹಾಗೂ ಬ್ಯಾಂಕ್‌ನಲ್ಲಿರುವ ಸಹಿಯನ್ನು ಪರಿಶೀಲಿಸಿದಾಗ ಸಹಿ ಹೊಂದಾಣಿಕೆ ಆಗಿದ್ದರಿಂದ ಹಾಗೂ ಸೆಲ್ಫ್‌ ಚೆಕ್‌ ಆಗಿದ್ದರಿಂದ ಹಣವನ್ನು ವ್ಯಕ್ತಿಗೆ ನೀಡಿದ್ದೇವೆ ಎಂದು ಬ್ಯಾಂಕ್‌ನವರು ತಿಳಿಸಿದ್ದಾರೆ. ಆತನ ಆಧಾರ್‌ ನಂಬರ್‌ ಹಾಗೂ ಮೊಬೈಲ್‌ ನಂಬರ್‌ ತೆಗೆದುಕೊಳ್ಳಲಾಗಿದೆ ಎಂದೂ ತಿಳಿಸಿದ್ದಾರೆ. ಆದರೆ ಸಹಿ ನನ್ನದಲ್ಲ ಎಂದು ತಿಳಿಸಿದ್ದಾರೆ.

ADVERTISEMENT

ಅಪರಿಚಿತ ವ್ಯಕ್ತಿಯೊಬ್ಬ ನನ್ನ ಮನೆಯಲ್ಲಿಟ್ಟಿದ್ದ ಚೆಕ್‌ ಕದ್ದು ಅಥವಾ ನಾನು ಕರ್ತವ್ಯ ನಿರ್ವಹಿಸುವ ಆಸ್ಪತ್ರೆಯಲ್ಲಿ ಚೆಕ್‌ ಕಳವು ಮಾಡಿ, ನನ್ನ ಖಾತೆಯಿಂದ ಹಣ ಡ್ರಾ ಮಾಡಿಕೊಂಡಿದ್ದಾನೆ. ಅಲ್ಲದೆ ನನ್ನ ಗಮನಕ್ಕೆ ತರದೇ ಹಣ ಡ್ರಾ ಮಾಡಿಕೊಟ್ಟ ಕೆನರಾ ಬ್ಯಾಂಕ್‌ನ ಅಧಿಕಾರಿ ಹಾಗೂ ಸಿಬ್ಬಂದಿ, ಚೆಕ್‌ ಕಳವು ಮಾಡಿದ ವ್ಯಕ್ತಿಯ ವಿರುದ್ಧ ಕ್ರಮಕೈಗೊಳ್ಳಬೇಕು. ನನ್ನ ಹಣವನ್ನು ನನಗೆ ಮರಳಿಸಬೇಕು ಎಂದು ದೂರು ನೀಡಿದ್ದಾರೆ. ಬ್ರಹ್ಮಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಅಪಘಾತ: ಸ್ಥಳದಲ್ಲೇ ವ್ಯಕ್ತಿ ಸಾವು

ಕಲಬುರಗಿ: ಪೆಟ್ರೋಲ್‌ ಪಂಪ್‌ನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು ರಸ್ತೆ ದಾಟುವಾಗ ಹುಮನಾಬಾದ್‌ ಕಡೆಯಿಂದ ಬಂದ ವಾಹನವೊಂದು ಡಿಕ್ಕಿ ಹೊಡೆದಿದ್ದರಿಂದ ಗಂಭೀರವಾಗಿ ಗಾಯಗೊಂಡು, ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಜಾಂಬವೀರ ಕಾಲೊನಿ ವಾಡಿ ಜಂಕ್ಷನ್‌ ನಿವಾಸಿ ಭೀಮರಾಯ ಮುದ್ನಾಳ ಮೃತರು.

‘ನನ್ನ ತಂದೆ ಪೆಟ್ರೋಲ್‌ ಬಂಕ್‌ನಲ್ಲಿ ವೆಲ್ಡಿಂಗ್‌ ಕೆಲಸ ಮಾಡುತ್ತಿದ್ದರು. 4 ದಿನಗಳವರಗೆ ಅಲ್ಲಿಯೇ ಉಳಿದುಕೊಂಡಿದ್ದರು. ಅವರಾದ(ಬಿ) ಗ್ರಾಮದಲ್ಲಿ ಖಾನಾವಳಿಯಿಂದ ಊಟ ತೆಗೆದುಕೊಂಡು ನಡೆದುಕೊಂಡು ಬರುವಾಗ ಹುಮನಾಬಾದ್‌ ಕಡೆಯಿಂದ ಬರುತ್ತಿದ್ದ ವಾಹನವೊಂದು ಅತಿವೇಗ ಹಾಗೂ ನಿರ್ಲಕ್ಷ್ಯದಿಂದ ವಾಹನ ಚಲಾಯಿಸಿದ್ದರಿಂದ ನಮ್ಮ ತಂದೆಗೆ ಡಿಕ್ಕಿ ಹೊಡೆದು ಹೊಡೆದು ಪರಾರಿಯಾಗಿದ್ದಾನೆ. ಡಿಕ್ಕಿ ಹೊಡೆದಿದ್ದರಿಂದ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಪೆಟ್ರೋಲ್‌ ಪಂಪ್‌ನ ಸೂಪರ್‌ವೈಸರ್‌ ಚಿದಾನಂದ ಫಿರೋಜಿ ಅವರು ಕಲಬುರಗಿ ಸರ್ಕಾರಿ ಆಸ್ಪತ್ರೆ ದಾಖಲಿಸಿದ್ದರು. ಸಾವಿಗೆ ಕಾರಣವಾದ ವಾಹನ ಚಾಲಕನನ್ನು ಕಂಡು ಹಿಡಿದು, ಶಿಕ್ಷೆಗೆ ಒಳಪಡಿಸಬೇಕು’ ಎಂದು ಪುತ್ರ ಅನಿಲಕುಮಾರ ಮುದ್ನಾಳ ಅವರು ಸಂಚಾರಿ ಪೊಲೀಸ್‌ ಠಾಣೆ–2ರಲ್ಲಿ ದೂರು ನೀಡಿದ್ದಾರೆ. 

ಅಪಘಾತ: ವ್ಯಕ್ತಿಗೆ ಗಾಯ

ಕಲಬುರಗಿ: ವೈಯಕ್ತಿಕ ಕೆಲಸದ ನಿಮಿತ್ತ ಜಿಲ್ಲಾಧಿಕಾರಿ ಕಚೇರಿಗೆ ಬಂದಿದ್ದ ವ್ಯಕ್ತಿಯೊಬ್ಬರು ರಸ್ತೆ ದಾಟುವಾಗ ಎಸ್‌ವಿಪಿ ವೃತ್ತದ ಕಡೆಯಿಂದ ಬಂದ ಇನ್ನೋವಾ ಕಾರು ಡಿಕ್ಕಿ ಹೊಡೆದು ಗಾಯಗೊಂಡಿದ್ದಾರೆ.

ಕಮಲಾಪುರ ತಾಲ್ಲೂಕಿನ ಭಿವಾಜಿ ದತ್ತು ನಾಗಳೆ (70) ಗಾಯಗೊಂಡವರು. 

‘ಸೊಂಟದ ಬಲಭಾಗಕ್ಕೆ ಭಾರಿ ಒಳಪೆಟ್ಟಾಗಿದ್ದು, ಸಣ್ಣಪುಟ್ಟ ಗಾಯಗಳಾಗಿವೆ. ಚಿಕಿತ್ಸೆ ಕೊಡಿಸುತ್ತೇನೆಂದು ಕರೆದೊಯ್ದು, ಜೇವರ್ಗಿ ರಸ್ತೆಯ ಚಿತ್ತಾರಿ ಅಡ್ಡಾದ ಬಳಿ ಬಿಟ್ಟು ಪರಾರಿಯಾಗಿದ್ದಾನೆ. ಈ ಸಂಬಂಧ ಸಂಬಂಧಿಸಿದ ಅಧಿಕಾರಿಗಳು, ಚಾಲಕನ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಸಂಚಾರಿ ಠಾಣೆ–1ರಲ್ಲಿ ದೂರು ನೀಡಿದ್ದಾರೆ.

ವೇಶ್ಯಾವಾಟಿಕೆ: ಇಬ್ಬರ ಬಂಧನ 

ಕಲಬುರಗಿ: ಇಲ್ಲಿನ ಸರಸ್ವತಿ ಗೋದಾಮಿನ ಹಿಂದಿರುವ ಮನೆಯೊಂದರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಬ್ರಹ್ಮಪುರ ಪೊಲೀಸ್‌ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಇಬ್ಬರು ಮಹಿಳೆಯರನ್ನು ರಕ್ಷಿಸಿದ್ದಾರೆ. ಆರೋಪಿಗಳಿಂದ ₹ 1000 ಹಣ ವಶಪಡಿಸಿಕೊಳ್ಳಲಾಗಿದೆ.

ಗುಂಡುರಾವ ಖಂಡೆಪ್ಪ ಹಡಗಿಲ, ಲಕ್ಷ್ಮಿ ಮಲ್ಲಿಕಾರ್ಜುನ ಅಣ್ಣೆಪ್ಪಗೌಡ ಬಂಧಿತರು. ಬ್ರಹ್ಮ‍ಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.