ADVERTISEMENT

ಬಸವಕಲ್ಯಾಣ: ಜಾತ್ರೆಗೆ ಅಮೃತ ಮಹೋತ್ಸವದ ಮೆರುಗು

ವಿವಿಧ‌‌ ಚಟುವಟಿಕೆ, ಪಲ್ಲಕ್ಕಿ, ನಂದಿ ಧ್ವಜ ಮೆರವಣಿಗೆ

ಮಾಣಿಕ ಆರ್ ಭುರೆ
Published 18 ಏಪ್ರಿಲ್ 2025, 6:51 IST
Last Updated 18 ಏಪ್ರಿಲ್ 2025, 6:51 IST
ಬಸವಕಲ್ಯಾಣದ ಬಸವೇಶ್ವರ ದೇವಸ್ಥಾನದ ಹೊಸ ಕಟ್ಟಡದ ನೀಲನಕ್ಷೆ
ಬಸವಕಲ್ಯಾಣದ ಬಸವೇಶ್ವರ ದೇವಸ್ಥಾನದ ಹೊಸ ಕಟ್ಟಡದ ನೀಲನಕ್ಷೆ   

ಬಸವಕಲ್ಯಾಣ: ನಗರದ ಬಸವೇಶ್ವರ ‌ದೇವಸ್ಥಾನದ ಜಾತ್ರೆಯು ಅಮೃತ ಮಹೋತ್ಸವದ ಸಂಭ್ರಮದಲ್ಲಿದ್ದು, ಏಪ್ರಿಲ್ 30ರಿಂದ ಮೂರು ದಿನಗಳವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಅದ್ದೂರಿಯಾಗಿ ಜರುಗಲಿವೆ.

ಬಸವಾದಿ ಶರಣರ ಕಾಯಕ ಭೂಮಿಯ ದೇವಸ್ಥಾನ ಆಗಿದ್ದು ಮಹತ್ವ ಹೆಚ್ಚಿದೆ. ನಾಡಿನ ಬಸವ ಭಕ್ತರ ಭಕ್ತಿ, ಶ್ರದ್ಧೆಯ ಕೇಂದ್ರವಾಗಿದೆ. ಜಾತ್ರೆ ಹಾಗೂ ಇತರೆ ಕಾರ್ಯಕ್ರಮಗಳ ಕಾರಣ ಇಲ್ಲಿನ ಬಸವ ಜಯಂತಿ ವೈಶಿಷ್ಟ್ಯಪೂರ್ಣ ಆಗಿರುತ್ತದೆ. ನಂದಿಧ್ವಜ ಮೆರವಣಿಗೆಯ ವೈಭವ ಮಾತ್ರ ಸೋಲಾಪುರದ ಸಿದ್ಧರಾಮೇಶ್ವರ ಜಾತ್ರೆ ಹೊರತುಪಡಿಸಿದರೆ, ಇಲ್ಲಿಯೇ ಕಾಣಲು ಸಿಗುತ್ತದೆ.

12ನೇ ಶತಮಾನದಲ್ಲಿ ಸಾಮಾಜಿಕ ಪರಿವರ್ತನೆಗೆ ಬಸವಣ್ಣನವರು, ಇಲ್ಲಿ ನಡೆಸಿದ ಹೋರಾಟವು ‘ಕಲ್ಯಾಣಕ್ರಾಂತಿ’ ಎಂದೇ ಇತಿಹಾಸದಲ್ಲಿ ನಮೂದಾಗಿದೆ. ಅವರು ರಚಿಸಿದ ವಚನಗಳು, ಸಮಾನತೆಯ ಸಂದೇಶದಿಂದಾಗಿ ಈ ನೆಲ ಎಲ್ಲೆಡೆ ಪ್ರಸಿದ್ಧಿಯಾಗಿದೆ. ಆದರೆ ಇಂತಹ ಮಹತ್ವದ ಸ್ಥಳದಲ್ಲಿನ ಸ್ಮಾರಕವಾಗಿರುವ ದೇಗುಲ ಉತ್ತಮ ಸ್ಥಿತಿಯಲ್ಲಿ ಇರಲಿಲ್ಲ. ದೇವಸ್ಥಾನ ಪಂಚ ಸಮಿತಿಯಿಂದ ನವೀಕರಣಗೊಳಿಸಲಾಗುತ್ತಿದ್ದು, ಪ್ರವೇಶ ದ್ವಾರದ ಮೇಲಿನ ಗೋಪುರ ಹಾಗೂ ಕೆಲ ಪ್ರಮಾಣದ ಕೆಲಸ ಮಾತ್ರ ಬಾಕಿಯಿದೆ.

ADVERTISEMENT

ದೂರದಿಂದ ನೋಡಿದರೆ ಈಗ ಗುಡಿಯು ಚಾಲುಕ್ಯ ಶೈಲಿಯಲ್ಲಿನ ಸ್ಮಾರಕದಂತೆಯೇ ಕಾಣುತ್ತಿದೆ. ಮೊದಲಿನ ಕಟ್ಟಡ ಹಳೆಯ ಕಾಲದ ವಾಡೆಯಂತೆ ಇತ್ತು. ನೂರಾರು ವರ್ಷಗಳ ಕಟ್ಟಡ ಇದಾಗಿದ್ದರಿಂದ ಗೋಡೆಗಳು ಶಿಥಿಲಗೊಂಡಿದ್ದವು. ಚಾವಣಿ ಹಾಳಾಗಿತ್ತು. ಹೀಗಾಗಿ ಅದೆಲ್ಲ ತೆಗೆದು ಹೊಸರೂಪ ನೀಡಲಾಗಿದೆ.

ಒಳಭಾಗದ ಆವರಣದ ಸುತ್ತಲಿನ ಮಂಟಪಕ್ಕೆ ಸಿಮೆಂಟ್‌ನ ಚಿತ್ರಾವಳಿಗಳಿರುವ ಕಂಬಗಳನ್ನು ಅಳವಡಿಸಲಾಗಿದೆ. ಪ್ರವೇಶದ್ವಾರದ ಗೋಡೆಗಳನ್ನು ಮಾತ್ರ ಶಿಲೆಗಳಿಂದ ಕಟ್ಟಲಾಗಿದೆ. ಇದಕ್ಕೆ ಆಕರ್ಷಕ ವಿನ್ಯಾಸದ ಕಿಟಕಿಗಳಿವೆ. ಅಲ್ಲಲ್ಲಿ ವಿಶಿಷ್ಟ ಚಿತ್ತಾರಗಳಿವೆ.

‘ದೇವಸ್ಥಾನದ ಗರ್ಭಗೃಹ ಹಾಗೂ ಇತರೆಡೆ ನವೀಕರಣ ಕೈಗೊಳ್ಳಲಾಗಿದೆ. ಕಟ್ಟಡವನ್ನು ವೈಶಿಷ್ಟ್ಯ ಪೂರ್ಣಗೊಳಿಸಲಾಗುತ್ತಿದೆ. ದೇವಸ್ಥಾನದ ನವೀಕರಣ ಶೀಘ್ರ ಮುಕ್ತಾಯಗೊಳ್ಳಲಿದ್ದು, ಆಕರ್ಷಕವಾಗಿ ಕಂಗೊಳಿಸಲಿದೆ. ಇದೊಂದು ಉತ್ತಮ ಸಂದೇಶ ನೀಡುವ ತಾಣವಾಗಿಸಲು ಯತ್ನಿಸಲಾಗುತ್ತಿದೆ’ ಎಂದು ಎಂದು ದೇವಸ್ಥಾನ ಸಮಿತಿ ಅಧ್ಯಕ್ಷ ಬಸವರಾಜ ಕೋರಕೆ ತಿಳಿಸಿದ್ದಾರೆ.

ವಿವಿಧ ಕಾರ್ಯಕ್ರಮ: ಏ.30ರಂದು ಬೆಳಿಗ್ಗೆ ದೇವಸ್ಥಾನದಲ್ಲಿ ಬೆಳ್ಳಿತೊಟ್ಟಿಲಿನ ಪೂಜೆ ಹಾಗೂ ಮುಖ್ಯರಸ್ತೆಯಲ್ಲಿ ಮೆರವಣಿಗೆ ನಡೆಯುವುದು. ಸಂಜೆ 5 ಗಂಟೆಗೆ ಸಾವಿರಾರು ಮಹಿಳೆಯರ ಉಪಸ್ಥಿತಿಯಲ್ಲಿ ತೊಟ್ಟಿಲು ಕಾರ್ಯಕ್ರಮ ನೆರವೆರಿಸಲಾಗುತ್ತದೆ.

ಮೇ 1ರಂದು‌ ನಂದಿಧ್ವಜ, ಪಲ್ಲಕ್ಕಿ ಮೆರವಣಿಗೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯುವುದು. ಮೇ 2ರಂದು‌ ಎರಡನೇ ದಿನದ ಪಲ್ಲಕ್ಕಿ ಮೆರವಣಿಗೆ ಹಮ್ಮಿಕೊಳ್ಳಲಾಗುತ್ತದೆ. ರಾತ್ರಿ‌ 12 ಗಂಟೆಗೆ ತೇರು ಎಳೆಯಲಾಗುತ್ತದೆ ಎಂದು ದೇವಸ್ಥಾನ ಸಮಿತಿ ತಿಳಿಸಿದೆ.

ಬಸವಕಲ್ಯಾಣದ ಬಸವೇಶ್ವರ ದೇವಸ್ಥಾನದ ನವೀಕರಣ‌ ಕಾಮಗಾರಿ ಕೈಗೊಂಡಿರುವುದು
ಬಸವಕಲ್ಯಾಣದ ಬಸವೇಶ್ವರ ದೇವಸ್ಥಾನದ ನವೀಕರಣ‌ ಕಾಮಗಾರಿ ಕೈಗೊಂಡಿರುವುದು
ಏ.30ರಿಂದ ಜಾತ್ರೆ ಆರಂಭ ಮೇ 2ರಂದು ರಥೋತ್ಸವ 15 ದಿನಗಳ ಪ್ರವಚನ ಆಯೋಜನೆ
ಜಾತ್ರೆಯ ಅಮೃತ ಮಹೋತ್ಸವ ಸವಿನೆನಪಿಗಾಗಿ ಭಕ್ತರು ನೀಡಿದ 45 ಕೆ.ಜಿ ಬೆಳ್ಳಿಯ ಪಲ್ಲಕ್ಕಿ ಸಿದ್ಧವಾಗಿದೆ. ಈ ಸಲದ ಮೆರವಣಿಗೆಯ ಪ್ರಮುಖ ಆಕರ್ಷಣೆ ಆಗಲಿದೆ
ಬಸವರಾಜ ಕೋರಕೆ ಅಧ್ಯಕ್ಷ ಬಸವೇಶ್ವರ ದೇವಸ್ಥಾನ ಸಮಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.