ಜೇವರ್ಗಿ (ಕಲಬುರಗಿ): ತಾಲ್ಲೂಕಿನ ಕಟ್ಟಿಸಂಗಾವಿ ಹತ್ತಿರದ ಬೀದರ್-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಮೇಲಿರುವ ಹೊಸ ಸೇತುವೆ ಭೀಮಾನದಿಯ ಪ್ರವಾಹದಿಂದ ಜಲಾವೃತಗೊಂಡು ವಾಹನ ಸವಾರರು ಪರದಾಡುವಂತಾಗಿದೆ.
ಶನಿವಾರ ಹಳೆಯ ಸೇತುವೆ ಮೇಲೆ ನೀರು ಬಂದ ಪರಿಣಾಮ ಮುಂಜಾಗ್ರತಾ ಕ್ರಮವಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಎರಡೂ ಸೇತುವೆ ಮೇಲೆ ವಾಹನ ಸಂಚಾರಕ್ಕೆ ನಿಷೇಧ ಹೇರಿದ್ದರು.
ಸಂಜೆಯಾದರೂ ನೀರಿನ ಪ್ರಮಾಣ ಕಡಿಮೆಯಾಗದೇ ಇದ್ದಾಗ ಜನ ಸಂಚಾರಕ್ಕೂ ನಿರ್ಭಂದ ಹೇರಲಾಯಿತು. ಇದರಿಂದ ಒಂದು ಕಿ.ಮೀ ವರೆಗೆ ಸಾಲುಗಟ್ಟಿ ನಿಂತಿರುವ ವಾಹನ ಸವಾರರು ಕುಡಿಯಲು ನೀರು, ಊಟ, ಉಪಾಹಾರವಿಲ್ಲದೇ ಸಾಕಷ್ಟು ತೊಂದರೆ ಅನುಭವಿಸಿದರು. ಪೊಲೀಸರು ರೇವನೂರ ಕ್ರಾಸ್ ದಿಂದ ಜನಿವಾರ, ಕೂಡಿ ದರ್ಗಾ, ಕೋನಾಹಿಪ್ಪರಗಾ ಮಾರ್ಗವಾಗಿ ವಾಹನ ಸಂಚಾರಕ್ಕೆ ಅನುಕೂಲ ಕಲ್ಪಿಸಿದ್ದರು. ಆದರೆ, ಲಾರಿಯೊಂದು ಗೌನಳ್ಳಿ ಕ್ರಾಸ್ ಹತ್ತಿರ ಕೆಸರಲ್ಲಿ ಸಿಲುಕಿಕೊಂಡ ಪರಿಣಾಮ 5 ಕಿ.ಮೀ ವರೆಗೆ ಸಂಚಾರ ದಟ್ಟಣೆ ಉಂಟಾಗಿತ್ತು. ಇದರಿಂದ ಬೇಸತ್ತ ವಾಹನ ಸವಾರರು ಹೆದ್ದಾರಿ ಮೇಲೆ ರಾತ್ರಿಯಿಡಿ ಕಳೆಯುವಂತಾಯಿತು.
ಕಟ್ಟಿಸಂಗಾವಿ ಹತ್ತಿರ ಭೀಕರ ಪ್ರವಾಹದಿಂದ ಜಾಕ್ ವೆಲ್ ಪಂಪ್ ಹೌಸ್ ಮುಳುಗಿರುವ ಪರಿಣಾಮ ಜೇವರ್ಗಿ ಪಟ್ಟಣಕ್ಕೆ ನೀರು ಸರಬರಾಜು ಸ್ಥಗಿತಗೊಳಿಸಲಾಗಿದೆ. ಅಲ್ಲದೇ ಸೇತುವೆ ಪಕ್ಕದ ಪ್ರಭು ಬಸಯ್ಯ ತಾತನವರ ದೇವಸ್ಥಾನ, ಮರೆಮ್ಮ ದೇವಸ್ಥಾನ, ಯನಗುಂಟಿಯ ಬೆಂಕಿ ತಾತ ಮಹಾರಾಜರ ದೇವಸ್ಥಾನ, ಶಾಲೆ ಮುಳುಗಡೆಯಾಗಿದೆ.
ಕಟ್ಟಿಸಂಗಾವಿ ಗ್ರಾಮ ಸುತ್ತಲೂ ಪ್ರವಾಹ ಸುತ್ತುವರಿದಿದ್ದು, ನಡುಗಡ್ಡೆಯಾದಂತಾಗಿದೆ. ಕಟ್ಟಿಸಂಗಾವಿ ಸೇತುವೆ ಮುಳುಗಿರುವ ಸುದ್ದಿ ಕೇಳಿ ಪಟ್ಟಣದ ಜನತೆ ತಮ್ಮ ಸ್ವಂತ ವಾಹನಗಳಲ್ಲಿ ಕುಟುಂಬ ಸಮೇತರಾಗಿ ತೆರಳಿ ಭೀಮಾ ನದಿಯ ಭೋರ್ಗರೆತ ವೀಕ್ಷಿಸುತ್ತಿದ್ದಾರೆ. ಪ್ರವಾಹದಿಂದ ಸಂಪರ್ಕ ಕಡಿತಗೊಂಡು ವಾಹನ ಸವಾರರು, ವಿದ್ಯಾರ್ಥಿಗಳು, ಜಿಲ್ಲಾಸ್ಪತ್ರೆಗೆ ತೆರಳುವ ಜನ ಪರದಾಡುವ ದೃಶ್ಯ ಕಂಡು ಬಂತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.