ADVERTISEMENT

ಆಳಂದ: ತಿಂಗಳಿಂದ ದುರಸ್ತಿಯಾಗದ ಬೊಮ್ಮನಹಳ್ಳಿ–ವೈಜಾಪುರ ಮಧ್ಯದ ಸೇತುವೆ!

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2025, 6:59 IST
Last Updated 11 ನವೆಂಬರ್ 2025, 6:59 IST
<div class="paragraphs"><p>ಆಳಂದ ತಾಲ್ಲೂಕಿನ ನಿಂಬರ್ಗಾ ಸಮೀಪದ ಬೊಮ್ಮನಹಳ್ಳಿ–ವೈಜಾಪುರ ಮಧ್ಯದ ಸೇತುವೆ ಕೊಚ್ಚಿಹೋಗಿ ತಿಂಗಳಾದರೂ ದುರಸ್ತಿಯಾಗಿಲ್ಲ</p></div>

ಆಳಂದ ತಾಲ್ಲೂಕಿನ ನಿಂಬರ್ಗಾ ಸಮೀಪದ ಬೊಮ್ಮನಹಳ್ಳಿ–ವೈಜಾಪುರ ಮಧ್ಯದ ಸೇತುವೆ ಕೊಚ್ಚಿಹೋಗಿ ತಿಂಗಳಾದರೂ ದುರಸ್ತಿಯಾಗಿಲ್ಲ

   

ಕಲಬುರಗಿ: ಜಿಲ್ಲೆಯ ಆಳಂದ ತಾಲ್ಲೂಕಿನ ನಿಂಬರ್ಗಾ ವಲಯದ ಬೊಮ್ಮನಹಳ್ಳಿ–ವೈಜಾಪುರ ಮಧ್ಯದ ಸೇತುವೆ ಮಳೆಗೆ ಕೊಚ್ಚಿ ಹೋಗಿದ್ದು, ಅದನ್ನು ತಿಂಗಳಾದರೂ ದುರಸ್ತಿ ಮಾಡದೇ ಇರುವುದರಿಂದ ಸಾರಿಗೆ ಸಂಸ್ಥೆಯ ಬಸ್‌ಗಳು ಈ ಮಾರ್ಗದಲ್ಲಿ ಸಂಚಾರ ಸ್ಥಗಿತಗೊಳಿಸಿವೆ.

ಇದರಿಂದಾಗಿ ತಾಲ್ಲೂಕು ಕೇಂದ್ರ ಆಳಂದ, ಜಿಲ್ಲಾ ಕೇಂದ್ರ ಕಲಬುರಗಿಗೆ ಸುತ್ತು ಬಳಸಿ ಇನ್ನೊಂದು ಮಾರ್ಗದಿಂದ ಬರಬೇಕಿದೆ. ಮಳೆಯಿಂದಾಗಿ ಕುಸಿದ ಸೇತುವೆ, ರಸ್ತೆ ಸಂಪರ್ಕಗಳ ಬಗ್ಗೆ ಸರ್ವೆ ನಡೆಸಿ ಶೀಘ್ರವೇ ದುರಸ್ತಿ ಮಾಡಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಭರವಸೆ ನೀಡಿದ್ದರು. ಸ್ಥಳೀಯ ಶಾಸಕರೂ ಆದ ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್.ಪಾಟೀಲ ಅವರೂ ಹಾನಿಗೀಡಾದ ಪ್ರದೇಶಗಳನ್ನು ವೀಕ್ಷಿಸಿದ್ದರು.

ADVERTISEMENT

ಆದರೆ, ಬೊಮ್ಮನಹಳ್ಳಿ–ವೈಜಾಪುರ ಮಧ್ಯದ ಸೇತುವೆ ದುರಸ್ತಿಯಾಗದೇ ಇರುವುದರಿಂದ ಪ್ರಯಾಣಿಕರ ಪರದಾಟ ಮುಂದುವರೆದಿದೆ. ಸೇತುವೆಯ ಅರ್ಧಭಾಗ ಕೊಚ್ಚಿ ಹೋಗಿದ್ದರಿಂದ ಬಸ್, ಲಾರಿಯಂತಹ ಭಾರಿ ವಾಹನಗಳು ಸಂಚರಿಸಲು ಆಗುತ್ತಿಲ್ಲ. ಬಸ್‌ಗಳು ಸ್ಟೇಶನ್ ಗಾಣಗಾಪುರ ಮಾರ್ಗವಾಗಿ ಸಂಚರಿಸುತ್ತಿವೆ. 

ಸೇತುವೆ ಕೊಚ್ಚಿ ಹೋಗಿದ್ದರಿಂದ ನಿಂಬಾಳ, ಹಡಲಗಿ, ಯಳಸಂಗಿ, ಮಾಡಿಯಾಳ, ಬೆಣ್ಣೆಶಿರೂರ, ಹಿತ್ತಲಶಿರೂರ, ಕುಡುಕಿ, ನಿಂಬರ್ಗಾ, ಧಂಗಾಪುರ, ಬಟ್ಟರಗಾ, ಜಾವಳಿ (ಡಿ) ಗ್ರಾಮಗಳಿಗೆ ಬಸ್ ಓಡಾಟ ಸ್ಥಗಿತವಾಗಿದೆ.

‘ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಸೇತುವೆ ದುರಸ್ತಿಯ ಬಗ್ಗೆ ಗಮನ ಹರಿಸುತ್ತಿಲ್ಲ. ಹತ್ತಾರು ಹಳ್ಳಿಗಳ ಜನರು ಇದೇ ರಸ್ತೆಯನ್ನು ಅವಲಂಬಿಸಿದ್ದಾರೆ. ಅಲ್ಲದೇ, ಮಹಾರಾಷ್ಟ್ರಕ್ಕೆ ಹೋಗಲೂ ಈ ರಸ್ತೆ ಅನಿವಾರ್ಯವಾಗಿದೆ. ಹೀಗಾಗಿ, ತುರ್ತಾಗಿ ಈ ರಸ್ತೆಯನ್ನು ಮೇಲ್ದರ್ಜೆಗೆ ಏರಿಸಬೇಕು’ ಎನ್ನುತ್ತಾರೆ ರೈತ ಮುಖಂಡ ಹಾಗೂ ವಕೀಲ ಭೀಮಾಶಂಕರ ಮಾಡಿಯಾಳ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.