ADVERTISEMENT

ನಮ್ಮ ಮುಗುಳ್ನಗೆ ಬುದ್ಧನ ಕೊಡುಗೆ: ಸಿರಿಲಕ್‌ ಫತ್ರಪ್ರಸಿತ್‌ ಮೈಥಾಯಿ

ಬೌದ್ಧ ಧರ್ಮದ 3ನೇ ಧಮ್ಮಯಾತ್ರೆ ಆರಂಭ; ತೆಲಂಗಾಣದ ಬುದ್ಧವನಂ ತನಕ ಸಾಗುವ ಯಾತ್ರೆ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2026, 5:22 IST
Last Updated 3 ಫೆಬ್ರುವರಿ 2026, 5:22 IST
<div class="paragraphs"><p>ಥಾಯ್ಲೆಂಡ್‌ ಬಿಕ್ಕು ಸಂಘದಿಂದ ಕಲಬುರಗಿಯ ಸಿದ್ಧಾರ್ಥ ಬುದ್ಧ ವಿಹಾರದಿಂದ ತೆಲಂಗಾಣದ ಬುದ್ಧವನಂ ವರೆಗೆ ಹಮ್ಮಿಕೊಂಡಿರುವ ಬೌದ್ಧ ಧರ್ಮದ 3ನೇ ಧಮ್ಮಯಾತ್ರೆ ಅಂಗವಾಗಿ ಸೋಮವಾರ ಬಿಕ್ಕುಗಳು ಹಾಗೂ ಗಣ್ಯರು ಜಗತ್‌ ವೃತ್ತದ ಡಾ.ಅಂಬೇಡ್ಕರ್ ಮೂರ್ತಿಗೆ ಪುಷ್ಪ ಗೌರವ ಸಲ್ಲಿಸಿದರು&nbsp;</p></div>

ಥಾಯ್ಲೆಂಡ್‌ ಬಿಕ್ಕು ಸಂಘದಿಂದ ಕಲಬುರಗಿಯ ಸಿದ್ಧಾರ್ಥ ಬುದ್ಧ ವಿಹಾರದಿಂದ ತೆಲಂಗಾಣದ ಬುದ್ಧವನಂ ವರೆಗೆ ಹಮ್ಮಿಕೊಂಡಿರುವ ಬೌದ್ಧ ಧರ್ಮದ 3ನೇ ಧಮ್ಮಯಾತ್ರೆ ಅಂಗವಾಗಿ ಸೋಮವಾರ ಬಿಕ್ಕುಗಳು ಹಾಗೂ ಗಣ್ಯರು ಜಗತ್‌ ವೃತ್ತದ ಡಾ.ಅಂಬೇಡ್ಕರ್ ಮೂರ್ತಿಗೆ ಪುಷ್ಪ ಗೌರವ ಸಲ್ಲಿಸಿದರು 

   

ಪ್ರಜಾವಾಣಿ ಚಿತ್ರ

ಕಲಬುರಗಿ: ಥಾಯ್ಲೆಂಡ್‌ ಬಿಕ್ಕು ಸಂಘದಿಂದ ನಗರದ ಸಿದ್ಧಾರ್ಥ ಬುದ್ಧ ವಿಹಾರದಿಂದ ತೆಲಂಗಾಣದ ಬುದ್ಧವನಂ ವರೆಗೆ ಹಮ್ಮಿಕೊಂಡಿರುವ ಬೌದ್ಧ ಧರ್ಮದ 3ನೇ ಧಮ್ಮಯಾತ್ರೆಗೆ ಸೋಮವಾರ ಚಾಲನೆ ದೊರೆಯಿತು.

ADVERTISEMENT

ನಗರ ಹೊರವಲಯದ ಸಿದ್ಧಾರ್ಥ ಬುದ್ಧ ವಿಹಾರದಿಂದ ಬೆಳಿಗ್ಗೆ 10.30ರ ಸುಮಾರಿಗೆ 50ಕ್ಕೂ ಅಧಿಕ ಬಿಕ್ಕುಗಳು, ನೂರಾರು ಅನುಯಾಯಿಗಳು ಪಾದಯಾತ್ರೆ ಆರಂಭಿಸಿದರು.

ಬುದ್ಧ ವಿಹಾರದಿಂದ ಸೇಡಂ ರಸ್ತೆಯ ಮೂಲಕ ಇಎಸ್‌ಐ ಆಸ್ಪತ್ರೆ, ಖರ್ಗೆ ಪೆಟ್ರೋಲ್‌ ಬಂಕ್‌, ಬಸವೇಶ್ವರ ಆಸ್ಪತ್ರೆ, ಜಿಮ್ಸ್‌ ಆಸ್ಪತ್ರೆ ಎದುರಿನಿಂದ ಅನ್ನಪೂರ್ಣ ಕ್ರಾಸ್‌ ಮಾರ್ಗವಾಗಿ ಬಿಕ್ಕುಗಳು ಬರಿಗಾಲಿನಲ್ಲಿ ನಗರದ ಜಗತ್ ವೃತ್ತ ತಲುಪಿದರು. ಅಲ್ಲಿ ಬಿಕ್ಕುಗಳಿಗೆ ಪುಷ್ಪದಳ ಎರಚಿ ಸ್ವಾಗತಿಸಲಾಯಿತು. ಬಿಕ್ಕುಗಳು ಜ್ಯೂಸ್‌, ನೀರು ಕುಡಿದು ತುಸು ಹೊತ್ತು ವಿರಮಿಸಿದರು.

ವಿರಾಮದ ಅವಧಿಯಲ್ಲಿ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಥಾಯ್ಲೆಂಡ್‌ನ ‘ಎಂ’ ಸೀಡ್ಸ್‌ ಫೌಂಡೇಷನ್‌ ಅಧ್ಯಕ್ಷೆ ಸಿರಿಲಕ್‌ ಫತ್ರಪ್ರಸಿತ್‌ ಮೈಥಾಯಿ, ‘ನೀವು ಥಾಯ್ಲೆಂಡ್‌ ಜನರನ್ನು ನೋಡಿರಲ್ಲವೇ? ಸಾಕಷ್ಟು ಮುಗುಳ್ನಗುತ್ತ ಮತ್ತು ಖುಷಿಯಾಗಿ ಇರುತ್ತಾರಲ್ಲವೇ? ಅದಕ್ಕೆ ಬುದ್ಧ ಹಾಗೂ ಬುದ್ಧನ ಬೋಧನೆಗಳೇ ಕಾರಣ’ ಎಂದು ಮುಗುಳ್ನಕ್ಕರು.

‘2500 ವರ್ಷಗಳ ಹಿಂದೆ ಬೌದ್ಧ ಧರ್ಮದ ತತ್ವಗಳು ಭಾರತದಿಂದ ಥಾಯ್ಲೆಂಡ್‌ ತಲುಪಿದವು. ಇದೀಗ ಥಾಯ್ಲೆಂಡ್‌ನ ಶೇ 90ರಷ್ಟು ಜನರು ಬುದ್ಧನ ಅನುಯಾಯಿಗಳು. ನಾವು ಸಂತುಷ್ಟ, ಮುಗುಳ್ನಗುವ ಜನರಾಗಿದ್ದೇವೆ. ಇದಕ್ಕೆಲ್ಲ ಬುದ್ಧನ ಬೋಧನೆಗಳೇ ಕಾರಣ’ ಎಂದು ವಿನೀತರಾದರು.

‘ಬುದ್ಧನ ಬೋಧನೆಗಳಿಂದ ನಾವು ಪಡೆದಿದ್ದನ್ನು ಇದೀಗ ಭಾರತಕ್ಕೆ ಹಂಚಲು ಬಂದಿದ್ದೇವೆ. ಬುದ್ಧನ ವಿಚಾರಗಳು ದುಃಖ ಕೊನೆಗಾಣಿಸುತ್ತವೆ. ಖುಷಿಯಾಗಿ, ಪ್ರೀತಿಯಿಂದ ಬದುಕಲು ನೆರವಾಗುತ್ತವೆ. ಭಾರತೀಯರಲ್ಲಿ ಈ ಬುದ್ಧನ ಪ್ರಜ್ಞೆ ಜಾಗೃತಗೊಳಿಸಲು ಯತ್ನಿಸುತ್ತಿದ್ದೇವೆ’ ಎಂದರು.

ಯಾತ್ರೆಯ ಕುರಿತು ಮಾತನಾಡಿದ ಗಗನ್ ಮಲಿಕ್‌ ಫೌಂಡೇಷನ್‌ ಅಧ್ಯಕ್ಷ ಗಗನ್‌ ಮಲಿಕ್‌, ‘ಕಲಬುರಗಿಯ ಸಿದ್ಧಾರ್ಥ ಬುದ್ಧವಿಹಾರದಿಂದ ತೆಲಂಗಾಣದ ಬುದ್ಧವನಂ ತನಕ ಈ ಪಾದಯಾತ್ರೆ ನಡೆಯಲಿದೆ. ಇದು ಯಾವುದೇ ನಿರ್ದಿಷ್ಟ ಧರ್ಮದ ಯಾತ್ರೆಯಲ್ಲ; ಉತ್ತಮ ಮನುಷ್ಯನಾಗಲು ಬುದ್ಧ ಬೋಧಿಸಿದ ಜೀವನ ವಿಧಾನವಾಗಿದೆ. ಪ್ರೀತಿ, ಶಾಂತಿ, ಕರುಣೆಯ ಮಂತ್ರಗಳ ಪ್ರಚಾರಕ್ಕಾಗಿ ಹಮ್ಮಿಕೊಳ್ಳಲಾಗಿದೆ’ ಎಂದರು.

‘ಬೌದ್ಧ ಧರ್ಮವು ಭಾರತದಲ್ಲಿ ಹುಟ್ಟಿ ಥಾಯ್ಲೆಂಡ್‌ನಲ್ಲಿ ಬೆಳೆದು ವಿಶ್ವದಲ್ಲಿ ಪಸರಿಸಿತು. ಬುದ್ಧನ ನಾಡಿನಿಂದ ಥಾಯ್ಲೆಂಡ್‌ಗೆ ಹೋಗಿದ್ದರಿಂದ ಥಾಯ್ಲೆಂಡ್‌ ಬುದ್ಧನ ಅನುಯಾಯಿಗಳ ನಾಡಾಗಿ ಪರಿವರ್ತನೆಯಾಯಿತು. ಆದರೆ, ಭಾರತದಲ್ಲೇ ಬೌದ್ಧ ಧರ್ಮ ಕ್ಷಿಣಿಸಿತು. 1956ರಲ್ಲಿ ಡಾ.ಬಿ.ಆರ್‌.ಅಂಬೇಡ್ಕರ್‌ ಬೌದ್ಧ ಧರ್ಮ ಸ್ವೀಕಾರದ ಮೂಲಕ ಬುದ್ಧರನ್ನು ಭಾರತಕ್ಕೆ ಮರು ಪರಿಚಯಿಸಿದರು. ಆ ಬುದ್ಧ ಪ್ರಜ್ಞೆಗೆ ಶಕ್ತಿ ತುಂಬುವ ಪ್ರಯತ್ನವೂ ಇದಾಗಿದೆ’ ಎಂದರು.

ಭಂತೆ ಸಾಂಗಸಾಕ್ ಕೋವಿದೊ, ಭಂತೆ ಸಂಬೋನ್, ಭಂತೆ ಸಂಪೂರ್ಣ, ಭಂತೆ ರೇವತ್‌, ಭಂತೆ ಧಮ್ಮಪಾಲ, ಸೇರಿದಂತೆ 50ಕ್ಕೂ ಅಧಿಕ ಬಿಕ್ಕುಗಳು, ಶಾಂತಪ್ಪ ಸೂರನ್, ಭೀಮರಾವ್ ಟಿ.ಟಿ., ಮಹಾಂತಪ್ಪ ಸಂಗಾವಿ, ಬಾಬು ಒಂಟಿ, ರಮೇಶ ಬೇಗಾರ್, ಚಂದ್ರಶೇಖರ್ ದೊಡ್ಡಮನಿ, ವಿಜಯ ಕಾಂಬಳೆ, ಅನಿಲಕುಮಾರ್ ಸುಗಂಧಿ, ಎ.ಬಿ.ಹೊಸಮನಿ ಮತ್ತಿತರರಿದ್ದರು. 

‘ವಿಶ್ವ ಶಾಂತಿಗಾಗಿ ಪಾದಯಾತ್ರೆ’

‘ಜಗತ್ತಿನಲ್ಲಿ ಅಶಾಂತಿ ಅಸಮಾಧಾನ ತಾರತಮ್ಯ ಭಾವನೆಗಳನ್ನೇ ಹೆಚ್ಚಾಗಿ ಕಾಣುತ್ತಿದ್ದೇವೆ. ಇಂಥ ಹೊತ್ತಲ್ಲಿ ಎಲ್ಲ ಮನುಜರಿಗೂ ಶಾಂತಿಯ ಅಗತ್ಯವಿದೆ. ಆ ಉದ್ದೇಶದಿಂದ ಅಮೆರಿಕ ಜಪಾನ್‌ ರಷ್ಯಾ ಕಾಂಬೋಡಿಯಾ ಶ್ರೀಲಂಕಾದಲ್ಲೂ ಬೌದ್ಧ ಬಿಕ್ಕುಗಳಿಂದ ಶಾಂತಿ ಯಾತ್ರೆ ಹಮ್ಮಿಕೊಳ್ಳಲಾಗಿದೆ. ಅದರಂತೆ ಕಲಬುರಗಿಯಿಂದ ತೆಲಂಗಾಣದ ಬುದ್ಧವನಂ ತನಕ ಈ ಪಾದಯಾತ್ರೆ ನಡೆಯಲಿದೆ’ ಎಂದು ಬೀದರ್‌ನ ಅಣದೂರು ಬುದ್ಧ ವಿಹಾರದ ಬಂತೆ ವರಜ್ಯೋತಿ ಹೇಳಿದರು. ‘ಈ ಪಾದಯಾತ್ರೆಯು ಮೊದಲ ದಿನ ಕಪನೂರು ಮಾರ್ಗವಾಗಿ ಉಪಳಾಂವದಲ್ಲಿ ವಾಸ್ತವ್ಯ ಹೂಡಲಿದೆ. ಬಳಿಕ ಔರಾದ್‌ ಕುರಿಕೋಟಾ ಮಾರ್ಗವಾಗಿ ಚಲಿಸುತ್ತ ಫೆ.27ರ ಹೊತ್ತಿಗೆ ತೆಲಂಗಾಣದ ನಾಗಾರ್ಜುನ ಸಾಗರದ ಬುದ್ಧವನಂ ತಲುಪಲಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.