ADVERTISEMENT

ಆಳಂದ‌ | ಗ್ರಾ.ಪಂ. ಕಚೇರಿ ಆವರಣದಲ್ಲಿ ಜಾನುವಾರು ಕಟ್ಟಿ ರೈತರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 23 ಜುಲೈ 2025, 8:22 IST
Last Updated 23 ಜುಲೈ 2025, 8:22 IST
   

ಆಳಂದ (ಕಲಬುರಗಿ ಜಿಲ್ಲೆ): ತಾಲ್ಲೂಕಿನ ಕಿಣಿ ಸುಲ್ತಾನ್ ಗ್ರಾಮ ಪಂಚಾಯಿತಿ ಕಚೇರಿ ಆವರಣದಲ್ಲಿ ರೈತರು ಜಾನುವಾರುಗಳನ್ನು ಕಟ್ಟಿ ಬಾಕಿ ಉಳಿಸಿಕೊಂಡ ದನದ ಕೊಟ್ಟಿಗೆ ಬಿಲ್ ಪಾವತಿಸುವಂತೆ ಆಗ್ರಹಿಸಿ ಬುಧವಾರ ಪ್ರತಿಭಟನೆ ನಡೆಸಿದರು.

ಗ್ರಾಮದಲ್ಲಿ 60 ಹೆಚ್ಚು ರೈತರು ಉದ್ಯೋಗ ಖಾತ್ರಿ ಯೋಜನೆಯಡಿ ದನದ ಕೊಟ್ಟಿಗೆ ನಿರ್ಮಾಣ ಮಾಡಿದ್ದಾರೆ. ಈ ಕಾಮಗಾರಿಗೆ ಅಂದಾಜು ₹50 ಸಾವಿರ ಖರ್ಚು ಮಾಡಿದ ರೈತರಿಗೆ ಎರಡು ವರ್ಷ ಕಳೆದರೂ ಬಿಲ್ ಬಿಡುಗಡೆ ಆಗಿಲ್ಲ. ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಅಧಿಕಾರಿಗಳಿಗೆ ಸತತ ಮನವಿ ಮಾಡಿದರೂ ಖರ್ಚು ಮಾಡಿದ ಹಣ ರೈತರು ಖಾತೆಗೆ ಜಮಾ ಮಾಡಲಾಗಿಲ್ಲ. ಹೀಗಾಗಿ, ರೈತರು ತಮ್ಮ ಮನೆಯ ಆಕಳು, ಎತ್ತು, ಎಮ್ಮೆ ಗಳ ಸಮೇತ ಪಂಚಾಯಿತಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಕೈಗೊಂಡರು.

ಜಾನುವಾರುಗಳಿಗಾಗಿ ಮನೆಯಿಂದ ಮೇವು ತಂದು ಪಂಚಾಯಿತಿ ಆವರಣದಲ್ಲಿ ಕಟ್ಟಿ ರೈತರು ಪ್ರತಿಭಟನೆ ಆರಂಭಿಸಿದ್ದಾರೆ.

ADVERTISEMENT

ಪಂಚಾಯಿತಿಗೆ ಉದ್ಯೋಗ ಖಾತ್ರಿ ಯೋಜನೆಯಡಿ ಅರ್ಜಿ ಸಲ್ಲಿಸಿ ಹೊಲದಲ್ಲಿ ₹ 70 ಸಾವಿರಕ್ಕೂ ಹೆಚ್ಚು ಖರ್ಚು ಮಾಡಿ ಕೊಟ್ಟಿಗೆ ನಿರ್ಮಾಣ ಮಾಡಿಕೊಂಡಿದ್ದೇವೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ಹಣ ಪಾವತಿಸಲಿ. ಆದರೆ ಕಾಮಗಾರಿ ಕೈಗೊಂಡ ಮೇಲೂ ಬಿಲ್ ಪಾವತಿ ಮಾಡಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ ಎಂದು ರೈತ ನೇತಾಜಿ ಚೌವ್ಹಾಣ್ ಆಪಾದಿಸಿದರು.

ಪ್ರತಿಭಟನೆಯಲ್ಲಿ ರೈತರಾದ ಯಶ್ವಂತ್ ಶೃಂಗೇರಿ, ರವೀಂದ್ರ ಸಂಗೋಳಗಿ, ಮಹಾಂತಪ್ಪ, ತುಕಾರಾಮ ಭಗತ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.