ADVERTISEMENT

ಅತ್ಯುತ್ತಮ ತನಿಖೆ| ಸಿಐಡಿ ಡಿವೈಎಸ್ಪಿ ಶಂಕರಗೌಡ ಪಾಟೀಲಗೆ ಕೇಂದ್ರ ಗೃಹಸಚಿವರ ಪದಕ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2022, 10:19 IST
Last Updated 12 ಆಗಸ್ಟ್ 2022, 10:19 IST
ಸಿಐಡಿ ಡಿವೈಎಸ್ಪಿ ಶಂಕರಗೌಡ ಪಾಟೀಲ
ಸಿಐಡಿ ಡಿವೈಎಸ್ಪಿ ಶಂಕರಗೌಡ ಪಾಟೀಲ   

ಕಲಬುರಗಿ: ವೈಜ್ಞಾನಿಕ ‌ಹಾಗೂ ಕ್ಷಿಪ್ರ ತನಿಖೆ ನಡೆಸಿದ ಪೊಲೀಸ್ ಅಧಿಕಾರಿಗಳಿಗೆ ನೀಡಲಾಗುವ ಕೇಂದ್ರ ಗೃಹಸಚಿವರ ಪದಕಕ್ಕೆ ಸಿಐಡಿ ಡಿವೈಎಸ್ಪಿ ಶಂಕರಗೌಡ ವೀರನಗೌಡ ಪಾಟೀಲ ಅವರು ಭಾಜನರಾಗಿದ್ದಾರೆ.

ಪಿಎಸ್ಐ ನೇಮಕಾತಿ ಅಕ್ರಮದ ತನಿಖಾಧಿಕಾರಿಯೂ ಆಗಿರುವ ಶಂಕರಗೌಡ 2019ರಲ್ಲಿ ಸೇಡಂ ವೃತ್ತದ ಸಿಪಿಐ ಆಗಿದ್ದ ಸಂದರ್ಭದಲ್ಲಿ ಚಿಂಚೋಳಿ ತಾಲ್ಲೂಕಿನ ಯಾಕಾಪುರದಲ್ಲಿ ನಡೆದಿದ್ದ ಬಾಲಕಿಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ತಾರ್ಕಿಕ ಅಂತ್ಯ ನೀಡಿದ್ದರು.

ADVERTISEMENT

ಎಫ್ಐಆರ್ ದಾಖಲಾದ 101 ದಿನಗಳಲ್ಲಿಯೇ ಆರೋಪಿ ಯಲ್ಲಪ್ಪ ಎಂಬಾತನಿಗೆ ಗಲ್ಲು ಶಿಕ್ಷೆ ಕೊಡಿಸುವ ನಿಟ್ಟಿನಲ್ಲಿ ಪೂರಕ ದಾಖಲೆಗಳನ್ನು ಸಂಗ್ರಹಿಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಇದನ್ನು ಆಧರಿಸಿ ಈ ಪದಕ ನೀಡಲಾಗಿದೆ.

ಈ ಕುರಿತು ಪ್ರಜಾವಾಣಿಗೆ ಪ್ರತಿಕ್ರಿಯೆ ನೀಡಿದ ಶಂಕರಗೌಡ ಪಾಟೀಲ, '2019ರ ಡಿಸೆಂಬರ್ 2ರಂದು ಘಟನೆ ನಡೆದಿತ್ತು. ಅಂದಿನ ಎಸ್ಪಿ ಯಡಾ ಮಾರ್ಟಿನ್ ‌ಮಾರ್ಬನ್ಯಾಂಗ್ ಅವರು ನನ್ನ ಮೇಲೆ ವಿಶ್ವಾಸವಿರಿಸಿ ತನಿಖೆಯ ಜವಾಬ್ದಾರಿ ವಹಿಸಿದ್ದರು. 22 ದಿನಗಳಲ್ಲಿಯೇ ಆರೋಪ ಪಟ್ಟಿ ‌ಸಲ್ಲಿಸಿದ್ದೆವು. ಶೀಘ್ರಗತಿಯಲ್ಲಿ ಪ್ರಕರಣದ ತನಿಖೆ ನಡೆಸಿದ್ದರಿಂದ ನ್ಯಾಯಾಲಯವೂ ಅಪರಾಧಿಗೆ ಗಲ್ಲು ಶಿಕ್ಷೆ ವಿಧಿಸಿತು' ಎಂದರು.

ಶಂಕರಗೌಡ ಪಾಟೀಲ ಅವರು ಪ್ರಕರಣದ ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣದ ಪ್ರಮುಖ ಕಿಂಗ್ ಪಿನ್ ಆರ್.ಡಿ. ಪಾಟೀಲ, ಆತನ ಅಣ್ಣ, ಕಾಂಗ್ರೆಸ್ ‌ಮುಖಂಡ ಮಹಾಂತೇಶ ಪಾಟೀಲ, ಬಿಜೆಪಿ ನಾಯಕಿ ದಿವ್ಯಾ ಹಾಗರಗಿ, ಮಂಜುನಾಥ ಮೇಳಕುಂದಿ ಸೇರಿದಂತೆ ‌ಇತರ ಆರೋಪಿಗಳನ್ನು ಬಂಧಿಸಿದ ಸಿಐಡಿ ತಂಡದ ಭಾಗವಾಗಿದ್ದಾರೆ.

ಶಂಕರಗೌಡ ಮೂಲತಃ ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲ್ಲೂಕಿನ ರಾಮಗಿರಿ ಗ್ರಾಮದವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.