ಚಿಂಚೋಳಿ: ಇಲ್ಲಿನ ಪುರಸಭೆ ವ್ಯಾಪ್ತಿಯ ಚಂದಾಪುರ ವ್ಯಾಪ್ತಿಯ ಚಂದಾಪುರದ ಆಶ್ರಯ ಕಾಲೊನಿಯಲ್ಲಿ ಮೈಕ್ರೊ ಫೈನಾನ್ಸ್ ಕಂಪನಿಯವರ ಕಿರುಕುಳದಿಂದ ಮಹಿಳೆ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿ ಬುಧವಾರ ರಾತ್ರಿ ಪುರಸಭೆಯ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಜಗನ್ನಾಥ ಗುತ್ತೇದಾರ ನೇತೃತ್ವದಲ್ಲಿ ಭೋವಿ ಸಮಾಜದವರು ದಿಢೀರ್ ಪ್ರತಿಭಟನೆ ನಡೆಸಿದರು.
ಆಶ್ರಯ ಕಾಲೊನಿ ನಿವಾಸಿ ಪಾರ್ವತಿ ಮಲ್ಲಿಕಾರ್ಜುನ ಭೋವಿ (25) ಮೃತಪಟ್ಟ ಮಹಿಳೆ. ಇಲ್ಲಿನ ಸರ್ಕಾರಿ ಸಾರ್ವಜನಿಕ ತಾಲ್ಲೂಕು ಆಸ್ಪತ್ರೆ ಎದುರು ಮುಖ್ಯರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿದರು.
ಮಾತನಾಡಿದ ಜಗನ್ನಾಥ ಗುತ್ತೇದಾರ, ‘ತಾಲ್ಲೂಕಿನಲ್ಲಿ ಮೈಕ್ರೊ ಫೈನಾನ್ಸ್ ಕಂಪನಿಯವರ ಉಪಟಳ ಹೆಚ್ಚಾಗಿದೆ. ಇದರಿಂದ ಬಡವರು ಊರು ಬಿಟ್ಟು ಹೋಗುವುದರ ಜತೆಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇಲ್ಲಿನ ಚಂದಾಪುರದ ಭೋವಿ ಸಮಾಜದ ಬಡ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಬಡ ಮಹಿಳೆಯ ಸಾವಿಗೆ ನ್ಯಾಯ ಒದಗಿಸಬೇಕು. ಮೈಕ್ರೊ ಫೈನಾನ್ಸ್‌ನವರ ಕಿರುಕುಳಕ್ಕೆ ಕಡಿವಾಣ ಹಾಕಿ ಅವುಗಳ ಮೇಲೆ ನಿಯಂತ್ರಣ ಹೇರಬೇಕು ಮತ್ತು ಅವುಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಿದರು.
ಬಿಜೆಪಿ ವಕ್ತಾರ ಶ್ರೀಮಂತ ಕಟ್ಟಿಮನಿ, ಸೂರ್ಯಕಾಂತ ವಕೀಲ, ನಾಗೇಶ ಭೋವಿ, ರಾಮು ಭೋವಿ, ಶಾಮು ಭೋವಿ, ಜಗನ್ನಾಥ ದಂಡಗುಲಕರ್ ಹಾಗೂ 50ಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.