ಕಲಬುರಗಿ: ಜಿಲ್ಲೆಯ ಚಿತ್ತಾಪುರ ಪಟ್ಟಣವನ್ನು 2041ನೇ ವರ್ಷದ ಜನಸಂಖ್ಯೆಯ ಗುರಿಯಿರಿಸಿಕೊಂಡು ಆಧುನಿಕವಾಗಿ ಸರ್ವತೋಮುಖ ಅಭಿವೃದ್ಧಿ ಪಡಿಸಲು ಈ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಆಸಕ್ತಿ ವಹಿಸಿದ್ದು, ಬೆಂಗಳೂರಿನ ತಮ್ಮ ಕಚೇರಿಯಲ್ಲಿ ‘ಚಿತ್ತಾಪುರ ಮಾಸ್ಟರ್ ಪ್ಲಾನ್’ ವೀಕ್ಷಿಸಿ ಮತ್ತಷ್ಟು ಸುಧಾರಣೆ ಮಾಡಲು ಸೂಚಿಸಿದರು.
ಚಿತ್ತಾಪುರ ನಗರ ಯೋಜನೆ ಅಧಿಕಾರಿಗಳ ತಂಡದೊಂದಿಗೆ ಚರ್ಚೆ ನಡೆಸಿದ ಸಚಿವ ಪ್ರಿಯಾಂಕ್ ಖರ್ಗೆ, ವ್ಯಾಪಾರ ಹಾಗೂ ವಾಣಿಜ್ಯ ಸಂಸ್ಥೆಗಳು, ಕೈಗಾರಿಕೆಗಳು, ಶಾಲೆ ಹಾಗೂ ಕಾಲೇಜುಗಳು, ಉದ್ಯಾನ, ಸರ್ಕಾರಿ ಕಚೇರಿಗಳು ಸೇರಿದಂತೆ ನಗರದ ವಿಸ್ತರಣೆ ಹಾಗೂ ಸಂಪರ್ಕ ಕಲ್ಪಿಸುವ ವಿಶಾಲ ರಸ್ತೆಗಳನ್ನು ರೂಪಿಸುವ ಯೋಜನೆ ಇದಾಗಿದೆ. 2041ರ ಜನಸಂಖ್ಯೆಯನ್ನು ಆಧರಿಸಿ, ಕುಡಿಯುವ ನೀರಿನ ಸಂಸ್ಕರಣೆ ಹಾಗೂ ತ್ಯಾಜ್ಯ ನೀರು ಸಂಸ್ಕರಣ ಘಟಕಗಳಿಗೆ ಸೂಕ್ತ ಸ್ಥಳ, ನಗರ ವಿಸ್ತರಣೆಗೆ ಅನುಗುಣವಾಗುವಂತೆ ಉದ್ಯಾನಗಳು, ಕ್ರೀಡಾಂಗಣ ಮುಂತಾದ ಸೌಲಭ್ಯಗಳನ್ನು ಉದ್ದೇಶಿತ ಮಾಸ್ಟರ್ ಪ್ಲಾನ್ ಒಳಗೊಳ್ಳಲಿದೆ.
ಇತಿಹಾಸ ಪ್ರಸಿದ್ಧವಾದ ನಾಗಾವಿ ಕೇಂದ್ರವನ್ನು ಒಳಗೊಂಡಂತೆ ಹಾಗೂ ಈ ಸ್ಥಳಕ್ಕೆ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುವಂತೆ ಚಿತ್ತಾಪುರ ನಗರವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ಸಂಕಲ್ಪಿಸಲಾಗಿದೆ ಎಂದು ಪ್ರಿಯಾಂಕ್ ಖರ್ಗೆ ಈ ಸಂದರ್ಭದಲ್ಲಿ ಹೇಳಿದರು.
ಚಿತ್ತಾಪುರದೊಂದಿಗೆ ಶಹಾಬಾದ್, ವಾಡಿ ಪಟ್ಟಣಗಳ ಮಧ್ಯೆ ಉತ್ತಮ ಸಂಪರ್ಕವನ್ನು ಕಲ್ಪಿಸುವ ಯೋಜನೆಯೂ ಇದೆ. ಕಲಬುರಗಿಯನ್ನು ಸಂಪರ್ಕಿಸುವ ರಾಜ್ಯ ಹೆದ್ದಾರಿಯು ಚಿತ್ತಾಪುರ ಹಾದು ಹೋಗುವುದು, ಚಿತ್ತಾಪುರದಲ್ಲಿ ಕೈಗಾರಿಕಾ ಅಭಿವೃದ್ಧಿಯಾದಲ್ಲಿ ಅಕ್ಕಪಕ್ಕದ ಹಳ್ಳಿಗಳು ಹಾಗೂ ಪಟ್ಟಣಗಳ ಯುವಕರಿಗೆ ಹೆಚ್ಚು ಉದ್ಯೋಗಾವಕಾಶಗಳು ಸಿಗಲಿವೆ ಎಂದೂ ಪ್ರಿಯಾಂಕ್ ಖರ್ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.