
ಆರ್‌ಎಸ್‌ಎಸ್ ಪಥಸಂಚಲನ
ಕಲಬುರಗಿ: ಜಿಲ್ಲೆಯ ಚಿತ್ತಾಪುರದಲ್ಲಿ ನ.2ರಂದು ಪಥಸಂಚಲನ–ಪ್ರತಿಭಟನೆ ನಡೆಸಲು ಉದ್ದೇಶಿಸಿರುವ ಸಂಘಟನೆಗಳೊಂದಿಗೆ ಅ.28ರಂದು ಶಾಂತಿ ಸಭೆ ನಡೆಯಲಿದ್ದು, ಹಾಜರಾಗುವಂತೆ 10 ಸಂಘಟನೆಗಳಿಗೆ ಜಿಲ್ಲಾಡಳಿತ ನೋಟಿಸ್ ನೀಡಿದೆ.
‘ಈ ಸಂಬಂಧ ಜಿಲ್ಲಾಧಿಕಾರಿ ಹೈಕೋರ್ಟ್‌ನ ಕಲಬುರಗಿ ಪೀಠಕ್ಕೆ ಸಲ್ಲಿಸಿದ ವರದಿ ಪ್ರಕಾರ ಹಾಗೂ ವಿಚಾರಣೆ ವೇಳೆ ಹೈಕೋರ್ಟ್ ನೀಡಿದ ಆದೇಶದಂತೆ ಅ.28ರಂದು ಬೆಳಿಗ್ಗೆ 11.30ಕ್ಕೆ ಶಾಂತಿ ಸಭೆ ನಿಗದಿಪಡಿಸಲಾಗಿದೆ’ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.
‘ಶಾಂತಿ ಸಭೆಯಲ್ಲಿ ಪ್ರತಿ ಸಂಘಟನೆಯಿಂದ ಗರಿಷ್ಠ ಮೂವರು ಸದಸ್ಯರು ಹಾಜರಾಗಬಹುದು. ಲಿಖಿತ ಹೇಳಿಕೆ ಸಲ್ಲಿಸಲೂ ಅವಕಾಶವಿದೆ’ ಎಂದು ತಿಳಿಸಲಾಗಿದೆ.
ಆರ್‌ಎಸ್‌ಎಸ್, ದಲಿತ ಪ್ಯಾಂಥರ್, ಭೀಮ್ ಆರ್ಮಿ, ಗೊಂಡ–ಕುರುಬ ಎಸ್ಟಿ ಹೋರಾಟ ಸಮಿತಿ, ಕರ್ನಾಟಕ ರಾಜ್ಯದ ಛಲವಾದಿ ಕ್ಷೇಮಾಭಿವೃದ್ಧಿ ಸಂಘ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸೇರಿದಂತೆ 10 ಸಂಘಟನೆಗಳಿಗೆ ನೋಟಿಸ್ ಕೊಟ್ಟಿದೆ.
ಚಿತ್ತಾಪುರದಲ್ಲಿ ಆರ್‌ಎಸ್‌ಎಸ್ ಅ.19ರಂದು ನಡೆಸಲು ಉದ್ದೇಶಿಸಿದ್ದ ಪಥಸಂಚಲನಕ್ಕೆ ತಹಶೀಲ್ದಾರ್ ಅನುಮತಿ ನಿರಾಕರಿಸಿದ್ದರು. ಇದನ್ನು ಆರ್‌ಎಸ್‌ಎಸ್ ಜಿಲ್ಲಾ ಸಂಚಾಲಕ ಅಶೋಕ ಪಾಟೀಲ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.
ಅ.24ರಂದು ಅರ್ಜಿ ವಿಚಾರಣೆ ಮುಂದುವರಿಸಿದ್ದ ಹೈಕೋರ್ಟ್, ವಿವಿಧ ಸಂಘಟನೆಗಳ ಜೊತೆಗೆ ಅ.28ರಂದು ಶಾಂತಿಸಭೆ ನಡೆಸಿ, 30ರಂದು ವರದಿ ನೀಡುವಂತೆ ನಿರ್ದೇಶಿಸಿತ್ತು. ಅದರಂತೆ ಕಲಬುರಗಿ ಜಿಲ್ಲಾಡಳಿತ ಶಾಂತಿ ಸಭೆಯನ್ನು ಆಯೋಜಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.