
ಕಲಬುರಗಿ: ‘ವ್ಯಸನಮುಕ್ತ ಸಮಾಜಕ್ಕೆ ಮಹಾತ್ಮ ಗಾಂಧೀಜಿ ಕರೆ ಕೊಟ್ಟಿದ್ದರು. ಆದರೆ ರಾಜ್ಯದಲ್ಲಿರುವ ಕಾಂಗ್ರೆಸ್‌ನ ಗಾಂಧಿಗಳ ಸರ್ಕಾರ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಿದೆ’ ಎಂದು ಶಿವಸೇನಾ ರಾಜ್ಯ ಅಧ್ಯಕ್ಷ ಆಂದೋಲಾ ಸಿದ್ಧಲಿಂಗ ಸ್ವಾಮಿ ಟೀಕಿಸಿದರು.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬೆಂಗಳೂರು ಡ್ರಗ್ಸ್ ಉತ್ಪಾದಿಸುವ ಕೇಂದ್ರವಾಗಿದ್ದು, ಇಲ್ಲಿಯ ಪ್ರಕರಣ ಭೇದಿಸಲು ಮಹಾರಾಷ್ಟ್ರದ ಪೊಲೀಸರು ಬರಬೇಕಾಯಿತು. ಈ ಪ್ರಕರಣದಲ್ಲಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ಜಮೀರ್ ಅಹಮದ್ ಖಾನ್ ಹಾಗೂ ಪ್ರಿಯಾಂಕ್ ಖರ್ಗೆ ಅವರ ಆಪ್ತರೇ ಸಿಕ್ಕಿಹಾಕಿಕೊಳ್ಳುತ್ತಾರೆ. ಡಿಸೆಂಬರ್ 31ರ ರಾತ್ರಿ ಬೆಂಗಳೂರಿನಲ್ಲಿ ಹೊಸ ವರ್ಷ ಆಚರಣೆಗೆ ಅನುಮತಿ ಕೊಟ್ಟ ಸರ್ಕಾರ ಯುವತಿಯರ ಮಾನ ಹರಾಜು ಹಾಕುವ ಮೂಲಕ ಸಾವಿರಾರು ಕೋಟಿ ಆದಾಯ ಬಾಚಿಕೊಂಡು, ಬುದ್ಧ, ಬಸವ, ಅಂಬೇಡ್ಕರ್ ತತ್ವಕ್ಕೆ ತಿಲಾಂಜಲಿ ಇಟ್ಟಿತು’ ಎಂದರು.
‘ಅಲೋಕ್‌ಕುಮಾರ್ ಹಿಂದೂ ವಿರೋಧಿ’: ‘ಕಾರಾಗೃಹ ಹಾಗೂ ಸುಧಾರಣಾ ಸೇವೆಗಳ ಪೊಲೀಸ್ ಮಹಾನಿರ್ದೇಶಕ(ಡಿಜಿಪಿ) ಅಲೋಕ್ ಕುಮಾರ್ ಅವರೊಬ್ಬರು ಹಿಂದೂ ವಿರೋಧಿಯಾಗಿದ್ದಾರೆ‘ ಎಂದು ಸಿದ್ಧಲಿಂಗ ಸ್ವಾಮಿ ಆರೋಪಿಸಿದರು.
‘2017ರಲ್ಲಿ ಐಜಿಪಿ ಆಗಿದ್ದ ಅವರು, ಮುಸ್ಲಿಂ ಯುವಕನ ಮೇಲೆ ಹಲ್ಲೆಗೆ ಪ್ರಚೋದನೆ ಎಂದು ನನ್ನ ಮೇಲೆ ಸುಳ್ಳು ಕೇಸ್ ದಾಖಲಿಸಿದ್ದರು. ಬಳಿಕ ಜೇವರ್ಗಿಯ ಕೆಲ್ಲೂರ ಬಳಿ ಕಲ್ಲು ತೂರಾಟ, ಲಾಠಿ ಚಾರ್ಜ್ ನಡೆಯಿತು. ಅಲೋಕ್ ಕುಮಾರ್ ಅವರು ಮಠಕ್ಕೆ ಬಂದು, ಅಪಮಾನಿಸಿದರು. ಘಟನೆಗೆ ಕಾರಣನಾದ ಮುಸ್ಲಿಂ ಯುವಕನ ಮನೆಗೆ ಹೋಗಿ ಬುದ್ಧಿ ಹೇಳದೆ, ಹಿಂದೂ ವಿರೋಧಿ ನೀತಿ ತಾಳಿದರು’ ಎಂದರು.
‘ನನ್ನ ತಂದೆ ತಾಯಿಯನ್ನು ನಿಂದಿಸಿ ಮಠದಿಂದ ಹೊರಗಡೆ ಕರೆತಂದ ಜಂಗಮ ಸಿಪಿಐ ಅಧಿಕಾರಿಯೊಬ್ಬರು ಇತ್ತೀಚೆಗೆ ನಿಧನರಾದರು. ಸುಳ್ಳು ಪ್ರಕರಣದಲ್ಲಿ ಕೆಲವರು ನಮ್ಮ ಆಸ್ತಿ ಮುಟ್ಟುಗೋಲು ಹಾಕುವಂತೆ ಫರ್ಮಾನು ಹೊರಡಿಸಿದ್ದರು. ಆದರೆ ಈಗ(ಕಳೆದ ಡಿ.29ರಂದು) ನ್ಯಾಯಾಲಯವೇ, ಅವರಿಗೆಲ್ಲ ಛೀಮಾರಿ ಹಾಕಿ ನನ್ನನ್ನು ಆರೋಪಮುಕ್ತನನ್ನಾಗಿ ಮಾಡಿದೆ’ ಎಂದರು.
ಡಿಜಿಪಿ ಜೊತೆ ಸಚಿವರು ಜೈಲಿಗೆ ಭೇಟಿ ನೀಡಬೇಕಿತ್ತು: ‘ಬುದ್ಧ, ಬಸವ, ಅಂಬೇಡ್ಕರ್ ವಿಚಾರಗಳನ್ನು ಪಾಲಿಸುವುದಾಗಿ ಹೇಳುತ್ತಿರುವ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಡಿಜಿಪಿ ಅಲೋಕ್ ಕುಮಾರ್ ಜೊತೆಗೆ ಅಕ್ರಮಗಳ ಅಡ್ಡೆಯಾಗಿರುವ ಕಲಬುರಗಿ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಬೇಕಿತ್ತು. ಯಾಕೆ ಬಂದಿಲ್ಲ?’ ಎಂದು ಸಚಿವರ ವಿರುದ್ಧ ವಾಗ್ದಾಳಿ ನಡೆಸಿದ ಆಂದೋಲಾಶ್ರೀ, ‘ನಗರದಲ್ಲಿ ನಡೆಯದಿರುವ ಚಟುವಟಿಕೆಗಳು ಜೈಲಿನಲ್ಲಿ ನಡೆಯುತ್ತಿವೆ. ಜೈಲು ಅಧೀಕ್ಷಕಿ ಅನಿತಾ ಅವರನ್ನು ಅಮಾನತು ಮಾಡಬೇಕು’ ಎಂದರು.
ಶಿವಸೇನೆ ಪಕ್ಷದ ಜಿಲ್ಲಾಧ್ಯಕ್ಷ ಗುರುಶಾಂತ್ ಟೆಂಗಳಿ, ಮಲ್ಕಣ್ಣ ಹೀರೆಪೂಜಾರಿ, ಶಿವಕುಮಾರ್ ಬಾಳಿ, ಮಲ್ಲಯ್ಯಸ್ವಾಮಿ ನಂದಿಕೂರು, ರಾಕೇಶ್ ಜಮಾದಾರ್, ರೋಹಿತ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.